ದಾವಣಗೆರೆಯಲ್ಲಿ ಶನಿವಾರ ನಡೆದ ನಗರ ದೇವತೆ ದುರ್ಗಾಂಬಿಕಾ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿದರು. ಅಥಣಿ ವೀರಣ್ಣ, ಯಶವಂತರಾವ್ ಜಾಧವ್, ಮಾಲತೇಶ ರಾವ್ ಜಾಧವ್, ಎಚ್.ಬಿ. ಗೋಣೆಪ್ಪ, ಟ್ರಸ್ಟ್‌ನ ಧರ್ಮದರ್ಶಿಗಳು ಇತರರು ಇದ್ದರು. 
ದಾವಣಗೆರೆ

ನಗರದೇವತೆ ದುರ್ಗಾಂಬಿಕಾ ಜಾತ್ರೆ

ಪ್ರಮುಖ ಮುಖ್ಯಾಂಶಗಳು

  • ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
  • ಫೆ. 24, 25 ರಂದು ವಿಜೃಂಭಣೆಯ ಆಚರಣೆ
  • ಜ. 20 ರಂದು ಹಂದರಗಂಬ ಪೂಜೆ
ದಾವಣಗೆರೆ : ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವವನ್ನು ಫೆ. 24 ಮತ್ತು 25 ರಂದು ವಿಜೃಂಭಣೆಯಿಂದ ಆಯೋಜಿಸಲು ಶನಿವಾರ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ದೇವಸ್ಥಾನ ಟ್ರಸ್ಟ್‌ನ ಕಾರ್ಯಾಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಾತ್ರೆಯ ರೂಪುರೇಶೆಗಳನ್ನು ಅಂತಿಮಗೊಳಿಸಲಾಯಿತು.
ಜ. 20 ರಂದು ಬೆಳಗ್ಗೆ 10.30 ರಿಂದ 11.30ರೊಳಗೆ ಹಂದರಗಂಬ ಪೂಜೆ ನೆರವೇರಿಸುವುದರೊಂದಿಗೆ ಜಾತ್ರೆಯ ಅಧಿಕೃತ ಆರಂಭವಾಗಲಿದೆ.
ಫೆ. 22ರ ಭಾನುವಾರ ಬೆಳಗ್ಗೆ ಪಂಚಾಮೃತ ಅಭಿಷೇಕ, ಪುಣ್ಯಾಹ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಅಂದು ಸಂಜೆ ಸಾರು ಹಾಕಲಾಗುವುದು. ಫೆ. 24ರ ಮಂಗಳವಾರ ಮತ್ತು 25ರ ಬುಧವಾರ ಜಾತ್ರೆಯ ಪ್ರಮುಖ ಆಚರಣೆ ನಡೆಯಲಿದೆ. ಮಂಗಳವಾರ ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ಪೂಜೆಯ ನಂತರ ಬುಧವಾರ ಬೆಳಗ್ಗೆ ತೆರೆಯಲಾಗುವುದು.
ದೇವಸ್ಥಾನ ಟ್ರಸ್ಟ್‌ನ ಖಜಾಂಚಿ ಅಥಣಿ ವೀರಣ್ಣ, ಮಾಲತೇಶ ರಾವ್ ಜಾಧವ್, ಗೌಡ್ರು ಸುರೇಶ್, ರಾಜನಹಳ್ಳಿ ಶಿವಕುಮಾರ್, ಎಲ್.ಡಿ. ಗೋಣೆಪ್ಪ, ಹಾಲೇಶ್, ಎಲ್.ಎಂ. ಹನುಮಂತಪ್ಪ, ವಿನಾಯಕ ಪೈಲ್ವಾನ್, ನಾಗರಾಜ ಜೋಯಿಸರು, ಶಂಕರ್ ರಾವ್ ಶಿಂಧೆ, ಟ್ರಸ್ಟ್‌ನ ಧರ್ಮದರ್ಶಿಗಳು, ಗೌಡರು, ಶಾನಭೋಗರು, ರೈತರು, ಬಣಕಾರರು, ಕುಂಬಾರರು, ತರಳವಾರರು, ಮಡಿವಾಳರು ಸಭೆಯಲ್ಲಿದ್ದರು.

ಒಗ್ಗಟ್ಟಾಗಿ ಆಚರಿಸೋಣ

ದುರ್ಗಾಂಬಿಕಾ ದೇವಿಯ ಹಬ್ಬವನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಚರಿಸೋಣ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಸಭೆಯಲ್ಲಿ ಮಾತನಾಡಿ, ಪ್ರತಿ ಬಾರಿಗಿಂತ ಹೆಚ್ಚು ವಿಜೃಂಭಣೆಯಿಂದ, ಶಾಂತಿ, ಸೌಹಾರ್ದತೆಯಿಂದ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸೋಣ ಎಂದು ತಿಳಿಸಿದರು.
ದೇವಸ್ಥಾನದ ಜಾಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ್ದ ಕಲ್ಯಾಣ ಮಂಟಪವನ್ನು ಇತ್ತೀಚೆಗೆ ದೇವಸ್ಥಾನಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಆ ಕಟ್ಟಡದಲ್ಲಿ ವಿದ್ಯುತ್ ವೈರ್‌ಗಳು, ದೀಪಗಳು, ಎಸಿ ಇನ್ನಿತರ ಸಾಮಾನುಗಳು ಹಾಳಾಗಿವೆ. ಅದೆಲ್ಲವನ್ನೂ ಸರಿಪಡಿಸಲು 25 ಲಕ್ಷ ರೂ.ಗಳ ಅಂದಾಜು ಸಿದ್ಧಪಡಿಸಲಾಗುತ್ತಿದೆ. ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ಸಿದ್ಧಪಡಿಸಲಾಗುವುದು ಎಂದು ಭರವಸೆ ನೀಡಿದರು.

ಶಾಲೆಯ ದುರವಸ್ಥೆ

ದೇವಸ್ಥಾನದಿಂದ ನಡೆಸುತ್ತಿರುವ ಶಾಲೆ ದುಃಸ್ಥಿತಿಗೆ ತಲುಪಿದೆ. 47 ವರ್ಷ ಹಳೆಯದಾದ ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ಶೌಚಗೃಹಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಆವರಣದಲ್ಲಿ ಸಗಣಿ ಬಿದ್ದಿದೆ. ಸ್ವಚ್ಛತೆಗೆ ಗಮನ ಹರಿಸಿಲ್ಲ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ದೂರಿದರು.
ವರ್ಷಕ್ಕೆ 18 ಲಕ್ಷ ರೂ.ಗಳನ್ನು ವೇತನ ಮತ್ತು ನಿರ್ವಹಣೆಗೆ ನೀಡಲಾಗುತ್ತಿದೆ. 2 ಸೆಕ್ಷನ್ ತರಗತಿಗಳನ್ನು ಒಂದೇ ಕೊಠಡಿಯಲ್ಲಿ ಒಬ್ಬರೇ ಶಿಕ್ಷಕರು ತೆಗೆದುಕೊಳ್ಳುತ್ತಿದ್ದಾರೆ. ಶಾಲೆಯ ಅವಸ್ಥೆ ಏನಾಗಿದೆ ಎಂಬುದನ್ನು ಸಮಿತಿಯವರು ಗಮನಿಸಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಲ್ಲಿಕಾರ್ಜುನ್, ಸದ್ಯಕ್ಕೆ ಜಾತ್ರೆಯನ್ನು ಯಶಸ್ವಿಗೊಳಿಸೋಣ. ಮತ್ತೊಂದು ದಿನ ಶಾಲೆಗೆ ಭೇಟಿ ನೀಡಿ, ಅದಕ್ಕಾಗಿ ಪ್ರತ್ಯೇಕ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳೋಣ ಎಂದು ಭರವಸೆ ನೀಡಿದರು.
ಮಾಜಿ ಮೇಯರ್ ಎಚ್.ಬಿ. ಗೋಣೆಪ್ಪ ಸ್ಪಷ್ಟನೆ ನೀಡಿ, ಶಾಲೆಯ ಕಟ್ಟಡ ಅಲ್ಪಸ್ವಲ್ಪ ಬಿರುಕು ಬಿಟ್ಟಿದೆ. ಆವರಣದಲ್ಲಿರುವ ಹುಲ್ಲು, ಸಗಣಿಯನ್ನು ಸ್ವಚ್ಛಗೊಳಿಸುತ್ತೇವೆ. ಮಕ್ಕಳ ದಾಖಲಾತಿ ಹೆಚ್ಚಿಸಲು ಗಮನ ಹರಿಸುತ್ತಿದ್ದೇವೆ. ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.