ದಾವಣಗೆರೆಯಲ್ಲಿ ಅನ್ವೇಷಕರು ಆರ್ಟ್ ಫೌಂಡೇಷನ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸಂತೆಯಲ್ಲಿ ಭಾಗಿಯಾಗಿದ್ದ ಮಕ್ಕಳು.
- ದಾವಣಗೆರೆಯಲ್ಲಿ ವ್ಯಾಪಾರದ ಖುಷಿ ಕಂಡ ಚಿಣ್ಣರು
- ಬೀದಿಯಲ್ಲಿ ತರಕಾರಿ-ಹಣ್ಣು ಮಾರಿದ ಪುಟಾಣಿಗಳು
- ವಹಿವಾಟಿನ ಹೊಸ ಅನುಭವಕ್ಕೆ ಫಿದಾ
ದಾವಣಗೆರೆ: ಬನ್ನಿ ಅಂಕಲ್, ಬನ್ನಿ ಆಂಟಿ.. ಗಾಡಿ ಸೈಡ್‌ಗೆ ಬಿಟ್ಟು ಬಂದು ತರಕಾರಿ-ಹಣ್ಣು ವ್ಯಾಪಾರ ಮಾಡಿ.. ಜ್ಯೂಸ್ ಕುಡಿದುಕೊಂಡು ಹೋಗಿ.. ನಗರದ ಯುವಜನಸೇವಾ ಕ್ರೀಡಾ ಇಲಾಖೆ ಹಾಸ್ಟೆಲ್ ಹೊರಗಿನ ರಸ್ತೆ ಬದಿ ಪುಟಾಣಿಯೊಬ್ಬಳು ರಸ್ತೆ ಬದಿ ಸಾಗುತ್ತಿದ್ದ ವಾಹನ ಸವಾರರನ್ನು ಮೈಕ್‌ನಲ್ಲಿ ಸೆಳೆಯುತ್ತಿದ್ದ ಪರಿ ಇದು.
ಟೊಮ್ಯಾಟೋ- ಆಲೂಗಡ್ಡೆ ಕೆಜಿಗೆ ಮೂವತ್ತು ರೂಪಾಯಿ ಸಾರ್, ಸೌತೆಕಾಯಿ, ಕ್ಯಾರೆಟ್ ಕಾಲ್ಕೇಜಿಗೆ 30 ರೂ. ಸಾರ್.. ಲೈಮ್ ಜ್ಯೂಸ್, ಮಜ್ಜಿಗೆ 10 ರೂ. ಸಾರ್.. ಹೀಗೆ ಥರೇವಾರಿಯಾಗಿ ಕೂಗುತ್ತಿದ್ದ ಇತರೆ ಚಿಣ್ಣರ ಅಡ್ಡಾವೇ ಅಲ್ಲಿ ನೆರೆದಿತ್ತು. ಮಿನಿ ಮಾರುಕಟ್ಟೆಯೇ ಅಲ್ಲಿ ಅನಾವರಣಗೊಂಡಿತ್ತು.
ಅನ್ವೇಷಕರು ಆರ್ಟ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿದ್ದ ಶಿಬಿರಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ನೋಡುಗರ ಗಮನ ಸೆಳೆಯಿತು.
ಸುಮಾರು 15ಕ್ಕೂ ಹೆಚ್ಚು ಮಕ್ಕಳು ತರಕಾರಿ, ಹಣ್ಣು, ದವಸ-ಧಾನ್ಯ ಮಾರಾಟ ಮಾಡಿ ಖುಷಿ ಅನುಭವಿಸಿದರು. ಬೆಳಗ್ಗೆ 10ರಿಂದ ಮಧ್ಯಾಹ್ನ 1 ರವರೆಗಿನ ಸಂತೆಯಲ್ಲಿ ಮಕ್ಕಳು ವ್ಯವಹಾರದ ಪ್ರಯೋಗ ನಡೆಸಿದರು.
ಮುಳುಗಾಯಿ, ನುಗ್ಗೇಕಾಯಿ, ಈರುಳ್ಳಿ, ಹೀರೇಕಾಯಿ, ಹಾಗಲಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಮಾವಿನ ಹಣ್ಣು, ಮಾವಿನಕಾಯಿ, ಕೋಕಂ ಜ್ಯೂಸ್, ಮಾವಿನ ಜ್ಯೂಸ್, ಚುರುಮುರಿ, ಬಾಳೆಹಣ್ಣು, ಸೊಪ್ಪು, ಸ್ವೀಟ್‌ಕಾರ್ನ್, ಚಿಗಳಿ ಮೊದಲಾದವನ್ನು ಪೈಪೋಟಿಯಿಂದಲೇ ಮಾರಾಟ ಮಾಡಿದರು.
ನಿಗದಿಪಡಿಸಿದ ಬೆಲೆ, ಗ್ರಾಹಕರಿಗೆ ನೀಡಬೇಕಾದ ಚಿಲ್ಲರೆ ನೋಟು, ಗ್ರಾಹಕರಿಗೆ ಹೇಳಬೇಕಾದ ಮಾತುಗಳು ಎಲ್ಲವನ್ನೂ ಪಾಲಕರು ಹಿಂಬದಿ ನಿಂತು ಮಾರ್ಗದರ್ಶನ ನೀಡುತ್ತಿದ್ದರು. ಅಷ್ಟೂ ಮಕ್ಕಳಿಗೆ ಬೆರಳೆಣಿಕೆಯ ತೂಕದ ಯಂತ್ರ ಮಾತ್ರ ನೆರವಿಗೆ ಬಂದಿತು. ದಾರಿಯಲ್ಲಿ ಹೋಗುತ್ತಿದ್ದವರು ಕೊಂಚ ನಿಂತು ಮಕ್ಕಳನ್ನು ಮಾತನಾಡಿಸಿ ಒಂದಷ್ಟು ಖರೀದಿಸಿದರು.
ನಾನು ಸಂತೆ ಮಾಡುತ್ತಿರೋದು ಫಸ್ಟ್ ಟೈಂ. ಇದರಿಂದ ನನಗೆ ಹೇಗೆ ವ್ಯಾಪಾರ ಮಾಡಬೇಕು ಎಂಬುದು ಗೊತ್ತಾಗುತ್ತಿದೆ ಎಂದು ವಿದ್ಯಾರ್ಥಿನಿ ರೋಶಿನಿ ಅನಿಸಿಕೆ ಹಂಚಿಕೊಂಡಳು. ನಮ್ಮ ಶಾಲೆಗಳಲ್ಲಿ ಈ ರೀತಿ ಮಕ್ಕಳ ಸಂತೆ ನಡೆಯುವುದಿಲ್ಲ. ನಾವಿಲ್ಲಿ ಅನೇಕ ತರಕಾರಿ ಮಾರಾಟ ಮಾಡಲಿಕ್ಕೆ ಬಂದಿದ್ದೇವೆ. ಸ್ವಲ್ಪ ವ್ಯಾಪಾರ ಆಗಿದೆ. ಇದರಿಂದ ಖುಷಿಯಾಗುತ್ತಿದೆ ಎಂದು ವಿದ್ಯಾರ್ಥಿಗಳಾದ ಪರೀಕ್ಷಿತ್, ಸಾನ್ವಿ ಹೇಳಿಕೊಂಡರು.
ಇದು ಇತರೆ ಬೇಸಿಗೆ ಶಿಬಿರದಂತೆ ಇರಲಿಲ್ಲ. ಇಲ್ಲಿ ಮಕ್ಕಳಿಗೆ ನಾನಾ ಚಟುವಟಿಕೆಗಳ ಜತೆಗೆ ಮಕ್ಕಳ ಸಂತೆ ನಡೆಸಲಾಗಿದೆ. ಈ ಮೂಲಕ ಮಕ್ಕಳಲ್ಲಿ ಹಣದ ವಹಿವಾಟು ಹಾಗೂ ವ್ಯಾಪಾರದ ಕೌಶಲ ಗೊತ್ತಾಗಲಿದೆ. ಮೊಬೈಲ್ ಗೇಮಿನಿಂದ ಹೊರಬಂದು ಮಕ್ಕಳಿಗೆ ಇಂತಹ ಶಿಬಿರಗಳು ನೆರವಾಗಲಿವೆ ಎಂದು ಪಾಲಕರಾದ ಶಿಲ್ಪಾ ಅಂಗಡಿ, ಲಾವಣ್ಯಾ ಹೇಳಿಕೊಂಡರು.
ಈಗಿನ ಮಕ್ಕಳು ಮೊಬೈಲ್, ಟೀವಿ ಗುಂಗಿನಲ್ಲಿರುತ್ತಾರೆ. ಅದರಿಂದ ಹೊರತಂದು ಅವರಲ್ಲಿ ವ್ಯವಹಾರ ಕೌಶಲ ಬೆಳೆಸುವುದು, ಮಾತುಗಾರಿಕೆ ಕಲಿಸಲು ಇಂತಹ ಸಂತೆಗಳು ನೆರವಾಗುತ್ತವೆ ಎಂದು ಅನ್ವೇಷಕರು ಆರ್ಟ್ ಫೌಂಡೇಷನ್ ಸಂಚಾಲಕ ಎಸ್.ಎಸ್. ಸಿದ್ದರಾಜು ಹೇಳಿದರು.