ಜಗಳೂರು ಪಟ್ಟಣದ ಎನ್‌ಎಂಕೆ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ- ಪ್ರೌಢಶಾಲಾ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಶಾಸಕ ಬಿ. ದೇವೇಂದ್ರಪ್ಪ, ಜಿಪಂ ಸದಸ್ಯ ಕೆ.ಪಿ. ಪಾಲಯ್ಯ ಉದ್ಘಾಟಿಸಿದರು. ಹಾಲಮೂರ್ತಿ, ಎನ್.ಎಂ. ಲೋಕೇಶ್, ಡಾ.ಪಿ.ಎಸ್. ಅರವಿಂದನ್, ಹಾಲಸ್ವಾಮಿ ಇದ್ದರು. Fountain of Talent
- ಶಾಸಕ ಬಿ. ದೇವೇಂದ್ರಪ್ಪ ಹೇಳಿಕೆ
- ಪ್ರತಿಭಾ ಕಾರಂಜಿ ಕಾರ್ಯಕ್ರಮ
ಜಗಳೂರು: ಸಮಾಜದಲ್ಲಿ ಉತ್ತಮ ಪ್ರಜೆಯಾಗ ಬೇಕಾದರೆ ಶಿಕ್ಷಣದ ಜತೆಗೆ ಸಂಸ್ಕಾರ ವಂತರಾಗಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾ ಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹ ಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ- ಪ್ರೌಢಶಾಲಾ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ಹೆಚ್ಚಿನ ಅಂಕ ಪಡೆದು, ಉನ್ನತ ಸರ್ಕಾರಿ ಹುದ್ದೆಗಳನ್ನು ಪಡೆದರೆ ಸಾರ್ಥಕವಾಗುತ್ತದೆ ಎಂದು ಪಾಲಕರು ಅಂದುಕೊಂಡಿದ್ದಾರೆ. ಆದರೆ ಅದು ಕೇವಲ ಹೊಟ್ಟೆಪಾಡಿನ ಓದು. ಇದರ ಹೊರತಾಗಿ ಅನೇಕ ಕ್ಷೇತ್ರಗಳಲ್ಲಿ ನಮ್ಮ ಪ್ರತಿಭೆ, ಕೌಶಲಗಳನ್ನು ಅನಾವರಣಗೊಳಿಸಿದರೆ ಮೇಲ್ಮಟ್ಟಕ್ಕೆ ಮಕ್ಕಳು ಹೋಗಬಹುದು ಎಂದರು.
ಕಲಿಕೆಗೆ ವಯಸ್ಸು, ಲಿಂಗ, ಜಾತಿ ಅಡ್ಡಿ ಯಾಗುವುದಿಲ್ಲ, ಸಾಯುವವರೆಗೂ ಕಲಿಯುವುದು ತುಂಬ ಇದೆ. ಆದ್ದರಿಂದ ಮಕ್ಕಳು ಓದಿನ ಜತೆಗೆ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ಮೊಬೈಲ್, ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಮತ್ತು ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ಹಾಗಾಗಿ ಪಾಲಕರು ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಕರ್ನಾಟಕ ಸರ್ಕಾರವು ಮಕ್ಕಳ ಪ್ರತಿಭೆಯನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಶಿಕ್ಷಕರು ಪಠ್ಯ ವಿಷಯಗಳಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ. ಗೆಲುವು ಸ್ಪೂರ್ತಿಯನ್ನು ನೀಡಿದರೆ ಸೋಲು ಶಕ್ತಿಯನ್ನು ನೀಡುತ್ತದೆ. ತೀರ್ಪುಗಾರರು ಆತ್ಮಪೂರ್ವಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಬಿಇಒ ಹಾಲಮೂರ್ತಿ ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರ ತರಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ನೆರ ವಾಗುತ್ತದೆ. ಪ್ರತಿಯೊಬ್ಬರಲ್ಲಿ ಒಂದೊಂದು ರೀತಿಯ ಕಲೆ ಇರುತ್ತದೆ. ಮಕ್ಕಳಲ್ಲಿ ಸೃಜನಶೀಲ, ಕ್ರಿಯಾಶೀಲ ಅಂಶಗಳನ್ನು ಬೆಳೆಸುವಲ್ಲಿ ಇಲಾಖೆಯ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೇಳಿದರು.
ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎನ್.ಎಂ. ಲೋಕೇಶ್, ನವಚೇತನ ಶಾಲೆಯ ಡಾ. ಪಿ.ಎಸ್. ಅರವಿಂದನ್, ಎನ್.ಎಂ.ಕೆ. ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಲಸ್ವಾಮಿ, ಶಿಕ್ಷಣ ಇಲಾಖೆಯ ಮಂಜಪ್ಪ ದಿದ್ದಿಗೆ, ಆನಂದಪ್ಪ, ಆರ್.ವಿ.ಎಸ್. ಶಾಲೆಯ ಕಾರ್ಯದರ್ಶಿ ವೀರೇಶ್, ಎನ್.ಜಿ.ಒ ನಿರ್ದೇಶಕ ಸತೀಶ್ ಬಸವರಾಜ್, ಕಲ್ಲಿನಾಥ್, ಅಕ್ಷರ ದಾಸೋಹ ನಿರ್ದೇಶಕ, ಮಂಜುನಾಥ್, ಸಹಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್, ಶಿಕ್ಷಕರಾದ ಶಿವಮ್ಮ, ಉರ್ದು ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷೆ ಫಾತಿಮಾ, ಬಿಆರ್‌ಸಿ ರವಿಕುಮಾರ ಮತ್ತಿತರರಿದ್ದರು.