ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ಚುಟುಕು ಸಾಹಿತ್ಯ ಪರಿಷತ್‌ನ ಚನ್ನಗಿರಿ ತಾಲೂಕು ಅಧ್ಯಕ್ಷ ಎಚ್.ಆರ್. ಗಂಗಾಧರಯ್ಯ, ಜಿಲ್ಲಾಧ್ಯಕ್ಷ ಕೆ.ಎಸ್. ವೀರಭದ್ರಪ್ಪ ತೆಲಗಿ, ಕಾರ್ಯಾಧ್ಯಕ್ಷ ಓಂಕಾರಯ್ಯ ತವನಿಧಿ, ಗೌರವಾಧ್ಯಕ್ಷ ಶಿವಯೋಗಿ ಹಿರೇಮಠ, ಸತ್ಯಭಾಮಾ ಮಂಜುನಾಥ್ ಇದ್ದರು.  
ದಾವಣಗೆರೆ

ಭಾನುವಾರ ಚನ್ನಗಿರಿ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಆಯೋಜನೆ
  • ಸಾಹಿತಿ ಸಿದ್ದೇಶ್ ಸಿದ್ಧನಮಠ ಸರ್ವಾಧ್ಯಕ್ಷತೆ
  • ಕಾರ್ಯಕ್ರಮಕ್ಕೆ ಸಂಘ-ಸಂಸ್ಥೆಗಳ ನೆರವು
ದಾವಣಗೆರೆ : ಚನ್ನಗಿರಿ ತಾಲೂಕು ತ್ಯಾವಣಿಗೆಯ ಎಸ್‌ಜೆಎಂ ಪ್ರೌಢಶಾಲಾ ಆವರಣದಲ್ಲಿ ಜು. 12ರಂದು ತಾಲೂಕು ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯಾಸಕ್ತರು, ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ನಡೆಸಲಾಗುತ್ತಿದೆ ಎಂದು ಚುಟುಕು ಸಾಹಿತ್ಯ ಪರಿಷತ್‌ನ ಚನ್ನಗಿರಿ ತಾಲೂಕು ಅಧ್ಯಕ್ಷ ಎಚ್.ಆರ್. ಗಂಗಾಧರಯ್ಯ ಹೇಳಿದರು.
ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಈ ಸಮ್ಮೇಳನ ಆಯೋಜಿಸಲಾಗಿದೆ. ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿರುವ, ವಿವಿಧ ಪ್ರಶಸ್ತಿ-ಪುರಸ್ಕಾರ ಗಳಿಸಿರುವ ಚನ್ನಗಿರಿಯ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಸಿದ್ದೇಶ್ ಸಿದ್ಧನಮಠ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಅಂದು ಬೆಳಗ್ಗೆ 9ಕ್ಕೆ ಸರ್ವಾಧ್ಯಕ್ಷರ ಮೆರವಣಿಗೆಗೆ ತಾಪಂ ಮಾಜಿ ಸದಸ್ಯ ಬಿ.ಎಚ್. ಹಾಲಪ್ಪ ಚಾಲನೆ ನೀಡುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನ ಮಹಾದ್ವಾರಕ್ಕೆ ಎಚ್.ಎಸ್. ವೆಂಕಟೇಶಮೂರ್ತಿ, ಮಹಾಮಂಟಪಕ್ಕೆ ಮಾಜಿ ಸಿಎಂ ಜೆ.ಎಚ್. ಪಟೇಲ್, ಮಹಾ ವೇದಿಕೆಗೆ ನಾಡೋಜ ಡಾ. ಚಿದಾನಂದಮೂರ್ತಿ ಅವರ ಹೆಸರಿಡಲಾಗಿದೆ. ಜಿಲ್ಲಾ ಚುಸಾಪ ಹಾಗೂ ಎಲ್ಲ ತಾಲೂಕು ಘಟಕಗಳು, ಹೊಸನಗರದ ಪವರ್ ಸ್ಟಾರ್ ಅಪ್ಪು ಟ್ರಸ್ಟ್, ಪವರ್ ಸ್ಟಾರ್ ಅಪ್ಪು ಪತ್ತಿನ ಸಹಕಾರ ಸಂಘ, ಎಸ್‌ಜೆಎಂ ಶಾಲೆ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.
ಬೆಳಗ್ಗೆ 10-30ಕ್ಕೆ ಚನ್ನಗಿರಿಯ ಕೇದಾರ ಶಾಖಾಮಠದ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಎ.ಎಂ. ರಾಜಶೇಖರಯ್ಯ ಸಮ್ಮೇಳನ ಉದ್ಘಾಟಿಸುವರು. ನಿಕಟಪೂರ್ವ ಅಧ್ಯಕ್ಷ ಎಸ್. ಶಂಕ್ರಪ್ಪ, ಜಿಲ್ಲಾಧ್ಯಕ್ಷ ಕೆ.ಎಸ್. ವೀರಭದ್ರಪ್ಪ ತೆಲಗಿ, ಸಿ.ಆರ್. ನಾಗೇಂದ್ರಪ್ಪ, ಪಿ.ಸಿ. ಗೋವಿಂದಸ್ವಾಮಿ ಇತರರು ಪಾಲ್ಗೊಳ್ಳುವರು. ವಿಶ್ವಮಾನವ ಹಕ್ಕುಗಳ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಜಿ.ಎ.ರುದ್ರೇಶಗೌಡ್ರು ನಲ್ಲೂರು ಅವರು ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸುವರು ಎಂದು ತಿಳಿಸಿದರು.
ಶಿಕ್ಷಣ ಮತ್ತು ಸಾಹಿತ್ಯ, ಮಹಿಳಾ ಮತ್ತು ಸಾಹಿತ್ಯ, ನನ್ನ ಊರು ನನ್ನ ನೆನಪು, ಪತ್ರಿಕೆ ಮತ್ತು ಸಾಹಿತ್ಯ, ಶೈಕ್ಷಣಿಕ ಸಾಧನೆ, ಕೃಷಿ ಮತ್ತು ಸಾಹಿತ್ಯ ಮೊದಲಾದ ಗೋಷ್ಠಿ ನಡೆಯಲಿವೆ. ನಂತರ ಕವಿಗೋಷ್ಠಿ ನಡೆಯಲಿದ್ದು 27 ಕವಿ-ಕವಯಿತ್ರಿಯರು ಕವನ ವಾಚಿಸುವರು. ಸಮಧ್ಯಾಹ್ನ 3-50ಕ್ಕೆ ಸಮಾರೋಪ ನಡೆಯಲಿದ್ದು ಸಾಹಿತಿ ಫೈಜ್ನಟರಾಜ್, ಶಿಕ್ಷಕ ಡಿ. ಸುಭಾಷ್, ಸಾಹಿತಿ ಸುಕನ್ಯಾ ಇತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಸ್. ವೀರಭದ್ರಪ್ಪ ತೆಲಗಿ, ಕಾರ್ಯಾಧ್ಯಕ್ಷ ಓಂಕಾರಯ್ಯ ತವನಿಧಿ, ಗೌರವಾಧ್ಯಕ್ಷ ಶಿವಯೋಗಿ ಹಿರೇಮಠ, ಸತ್ಯಭಾಮಾ ಮಂಜುನಾಥ್ ಇದ್ದರು.