ಭಾರತ್ ಜೋಡೋ-2 ಪಾದಯಾತ್ರೆ ತಾಲೂಕು ಕಚೇರಿಗೆ ಆಗಮಿಸಿದ ಬಳಿಕ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು. ಎಚ್.ಬಿ. ಮಂಜಪ್ಪ, ಡಿ.ಜಿ. ವಿಶ್ವನಾಥ್, ಸಣ್ಣಕ್ಕಿ ಬಸವನಗೌಡ ಇತರರಿದ್ದರು. Bharath Jodo
ದಾವಣಗೆರೆ

ಮತದಾನದ ಹಕ್ಕು ಕಿತ್ತುಕೊಳ್ಳಲು ಕೇಂದ್ರ ಸರ್ಕಾರದ ಹುನ್ನಾರ

ಮಾಸಡಿಯಿಂದ ತಾಲೂಕು ಕಚೇರಿವರೆಗೆ ಭಾರತ್ ಜೋಡೋ-2 ಪಾದಯಾತ್ರೆ

ಹೊನ್ನಾಳಿ: ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯಾಗಿರುವ ಮತದಾನದ ಹಕ್ಕನ್ನು ಕೆಲವರಿಂದ ಕಿತ್ತುಕೊಳ್ಳುವ ಹುನ್ನಾರವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ದೂರಿದರು.

ಮಾಸಡಿ ಗ್ರಾಮದಿಂದ ಭಾರತ್ ಜೋಡೋ-2 ಅಂಗವಾಗಿ ಆರಂಭಿಸಿ ಪಾದಯಾತ್ರೆ ಶುಕ್ರವಾರ ಹೊನ್ನಾಳಿ ತಾಲೂಕು ಕಚೇರಿಗೆ ಆಗಮಿಸಿದ ಬಳಿಕ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ನಮ್ಮ ದೇಶ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕನ ಮತಕ್ಕೂ ಅದರದೇ ಆದ ಮೌಲ್ಯವಿದೆ. ಆದರೆ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಇಂತಹ ವಾಮಮಾರ್ಗ ಹಿಡಿದು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ದೇಶದಲ್ಲಿ ಎಷ್ಟು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ, ಅದಕ್ಕೆ ಕಾರಣಗಳೇನು ಮತ್ತು ಕೈಬಿಟ್ಟವರಲ್ಲಿ ಎಷ್ಟು ಮಂದಿ ಅರ್ಹ ಮತದಾರರಿದ್ದರು ಎಂಬುದರ ಸಮಗ್ರ ಮಾಹಿತಿಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಜಿಪಂ ಹಾಗೂ ತಾಪಂ ಮೀಸಲಾತಿ ಅಧಿಸೂಚನೆಯಲ್ಲಿ ಹಿಂದುಳಿದ ಎಸ್‌ಟಿ ವರ್ಗಗಳಿಗೆ ಅನ್ಯಾಯವಾಗಿದ್ದು ಅದಕ್ಕೆ ತಾವೇ ಕಾರಣ ಎಂಬ ಬಿಜೆಪಿಯವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದ ಅವರು, ಇದರಲ್ಲಿ ತನ್ನ ಯಾವುದೇ ಹಸ್ತಕ್ಷೇಪ ಅಥವಾ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಆರ್. ನಾಗಪ್ಪ, ಎ.ಆರ್. ಚಂದ್ರಶೇಖರಪ್ಪ, ಮುಖಂಡರಾದ ಎಚ್.ಎ. ಗದ್ದಿಗೇಶ್, ಮಧುಗೌಡ, ಎಚ್.ಬಿ. ಅಣ್ಣಪ್ಪ, ಬೆನಕಪ್ಪ ಹರಳಹಳ್ಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ, ಯುವ ಕಾಂಗ್ರೆಸ್ ಅಧ್ಯಕ್ಷ ಮನುವಾಲಜ್ಜಿ ಇತರರಿದ್ದರು.

ಚುನಾವಣಾ ಆಯುಕ್ತರನ್ನು ವಜಾ ಮಾಡಿ

ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿರುವ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಒತ್ತಾಯಿಸಿದರು. ಚುನಾವಣಾ ಆಯೋಗವು ಸಂವಿಧಾನ ಮತ್ತು ಕಾನೂನಿನ ಆಶಯಗಳಿಗೆ ಅನುಗುಣವಾಗಿ ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಆದರೀಗ ಚುನಾವಣಾ ಆಯೋಗದ ಕಾರ್ಯವೈಖರಿ ಅನುಮಾನಸ್ಪದವಾಗಿದ್ದು, ಗಂಭೀರ ಆರೋಪಗಳು ಕೇಳಿಬಂದಿವೆ. ಇದರ ವಿರುದ್ಧ ದೆಹಲಿಯಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಅನೇಕ ವಿದ್ಯಾರ್ಥಿ ಯುವ ಸಂಘಟನೆಗಳು ಭಾರಿ ಹೋರಾಟ ಕೈಗೊಂಡಿರುವುದು ಇದಕ್ಕೆ ಸಾಕ್ಷಿ ಎಂದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ರಿಂದ 15 ಸಾವಿರ ಮತಗಳನ್ನು ಕಡಿತಗೊಳಿಸಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಬಿಜೆಪಿಯ ಕುತಂತ್ರ ರಾಜ್ಯದ ಜನತೆಗೆ ತಿಳಿದಿದೆ ಎಂದ ಅವರು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಲೋಪದೋಷಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ಗ್ರೇಡ್-2 ತಹಸೀಲ್ದಾರ್ ಸುರೇಶ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ತಿಳಿಸಿದರು.