ದಲಿತ-ದಮನಿತರ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಸತೀಶ್ ಅರವಿಂದ್, ರಾಮಾಂಜನೇಯ, ಸುರೇಶ್ ಶಿಡ್ಲಪ್ಪ, ವೆಂಕಟೇಶ್, ಪವಿತ್ರ, ಮಾಡಾಳ್ ಶಿವಕುಮಾರ್, ಯಲ್ಲಪ್ಪ, ಗೋವಿಂದಪ್ಪ, ರಘು, ಉಮೇಶ್, ನಾಗೇಶ್ ಇದ್ದರು. 
ದಾವಣಗೆರೆ

ದಲಿತರ ಮೇಲೆ ದೌರ್ಜನ್ಯ ಪ್ರಕರಣ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ
  • ಉಪ ವಿಭಾಗಾಧಿಕಾರಿಗೆ ಮನವಿ

ದಾವಣಗೆರೆ : ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿಯ ಬೆಳಲಗೆರೆ ಗ್ರಾಮದಲ್ಲಿ ಇತ್ತೀಚೆಗೆ, ದೇವಸ್ಥಾನ ಪ್ರವೇಶ ಮಾಡಿದ ದಲಿತ ಯುವಕರನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ-ದಮನಿತರ ಹೋರಾಟ ಸಮಿತಿಯ ಜಿಲ್ಲಾ ಘಟಕ ಆಗ್ರಹಿಸಿದೆ.

ಸಮಿತಿಯ ಜಿಲ್ಲಾ ಪದಾಧಿಕಾರಿಗಳು ಮಂಗಳವಾರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಈ ಕುರಿತು ಮನವಿ ಪತ್ರ ರವಾನಿಸಿದರು.
ಬೆಳಲಗೆರೆ ಗ್ರಾಮದಲ್ಲಿ ಜು. 31ರಂದು ಅದೇ ಊರಿನ ದಲಿತ ಸಮುದಾಯದ 6 ಜನ ಯುವಕರು ದೊಡ್ಡಯ್ಯ ಸ್ವಾಮಿ ದೇವಸ್ಥಾನವನ್ನು ಪ್ರವೇಶಿಸಿದ್ದನ್ನು ನೋಡಿದ ಸವರ್ಣೀಯರು ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ವಿಷಯ ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಘಟನೆ ನಡೆದು 11 ದಿನ ಕಳೆದಿವೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ 42 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಕೂಡ ಇದುವರೆಗೂ ಆರೋಪಿಗಳನ್ನು ಬಂಧಿಸದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಹಲ್ಲೆಗೊಳಗಾದ 6 ಜನ ಯುವಕರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ದಲಿತ ಯುವಕರ ಮೇಲೆ ಹಲ್ಲೆ ಮಾಡಿದ 42 ಆರೋಪಿಗಳನ್ನು ಬಂಧಿಸಬೇಕು. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಶಿಕ್ಷೆಗೊಳಪಡಿಸಬೇಕು, ನೊಂದವರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ವಕೀಲ ಮತ್ತು ಸಂಚಾಲಕ ಸತೀಶ್ ಅರವಿಂದ್, ರಾಮಾಂಜನೇಯ, ಸುರೇಶ್ ಶಿಡ್ಲಪ್ಪ, ವೆಂಕಟೇಶ್, ಪವಿತ್ರ, ಮಾಡಾಳ್ ಶಿವಕುಮಾರ್, ಯಲ್ಲಪ್ಪ, ಗೋವಿಂದಪ್ಪ, ರಘು, ಉಮೇಶ್, ನಾಗೇಶ್ ಇದ್ದರು.