ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟನೆ ವೇಳೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿ.ಎಂ. ಗಂಗಾಧರಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್, ರೇಷ್ಮಾ ಕೌಸರ್ ಇತರರಿದ್ದರು.
- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಮತ
- ವಿದ್ಯಾರ್ಥಿಗಳಿಗಿರಲಿ ಆರೋಗ್ಯಕರ ಜೀವನಶೈಲಿ
- ಉದ್ಯೋಗ ಮೇಳ 421 ಅಭ್ಯರ್ಥಿಗಳಿಗೆ ನೇಮಕಪತ್ರ
ದಾವಣಗೆರೆ: ಪ್ರೌಢಶಾಲಾ ಹಂತದಲ್ಲೇ ವೃತ್ತಿ ಸಮಾಲೋಚನೆ ನಡೆಸಬೇಕು. ಹೀಗಾದಲ್ಲಿ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಲಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೈಕ್ಷಣಿಕ ಪಠ್ಯಕ್ರಮದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಬೇಕು. ಕ್ರೀಡೆ, ಸಂಗೀತ ಸೇರಿ ಮಕ್ಕಳ ಆಸಕ್ತ ವಿಷಯಗಳ ಸಂಬಂಧ ಕೌಶಲ ತರಬೇತಿ ನೀಡಬೇಕು. ಉದ್ಯೋಗಾವಕಾಶಗಳ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸಮಾಲೋಚನೆ ನಡೆಸಬೇಕಿದೆ ಎಂದು ಆಶಿಸಿದರು.
ಮಕ್ಕಳಲ್ಲಿ ಭಾರತದ ಶಕ್ತಿಯಾದ ಸಂಸ್ಕೃತಿ-ಮೌಲ್ಯಗಳನ್ನು ಬಿತ್ತಬೇಕು. ಕಠಿಣ, ಮಿದು ಹಾಗೂ ಸಂವಹನ ಕೌಶಲಗಳನ್ನೂ ಕಲಿಸಬೇಕು. ಈ ಬಗ್ಗೆ ಎಲ್ಲ ಶಿಕ್ಷಣ ಸಂಸ್ಥೆಗಳೂ ಪ್ರಾಯೋಗಿಕ ಯೋಜನೆ ಮಾಡಬೇಕು. ಆರ್ಥಿಕ ಸಾಕ್ಷರತೆಯನ್ನೂ ಬೆಳೆಸಬೇಕು ಎಂದೂ ಹೇಳಿದರು.
ಇಂದಿನ ವಿದ್ಯಾರ್ಥಿಗಳು ಒಬ್ಬರನ್ನು ರೋಲ್‌ಮಾಡೆಲ್ ಆಗಿ ಇರಿಸಿಕೊಂಡು ಅವರ ಹಾದಿ ಅನುಸರಿಸಬೇಕು. 35 ವರ್ಷದೊಳಗಿನವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದು ಆರೋಗ್ಯಕರ ಜೀವನಶೈಲಿ ನಡೆಸಬೇಕು. ವ್ಯಸನಮುಕ್ತರಾಗಬೇಕು ಎಂದು ಹೇಳಿದರು.
ಕೌಶಲ ತರಬೇತಿ ಪಡೆದ 17715 ವಿದ್ಯಾರ್ಥಿಗಳಲ್ಲಿ 2326 ಮಂದಿ ಉದ್ಯೋಗ ಪಡೆದಿದ್ದಾರೆ. ಉದ್ಯೋಗ ಮೇಳದಲ್ಲಿ ನೇಮಕಾತಿ ಪತ್ರ ಪಡೆದವರು ಇತರೆ ಜಿಲ್ಲೆಗಳಲ್ಲಿ ಒಂದೆರಡು ತಿಂಗಳು ಕೆಲಸ ಮಾಡಬೇಕು. ವಾತಾವರಣ ಪೂರಕವಾಗದಿದ್ದಲ್ಲಿ ಬೇರೆ ವೃತ್ತಿ ಹುಡುಕಿಕೊಳ್ಳಬೇಕು ಎಂದೂ ಸಲಹೆ ನೀಡಿದರು.
ವಿದ್ಯಾರ್ಥಿಗಳು ಸ್ಕಿಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಯುವನಿಧಿ ಪ್ಲಸ್ ತರಬೇತಿ ಪಡೆದು ಉದ್ದಿಮೆಗಳನ್ನು ನಡೆಸಬೇಕು ಎಂದರಲ್ಲದೆ ಎಸ್ಸೆಸ್ ಕೇರ್ ಟ್ರಸ್ಟ್‌ನಿಂದ ಕೌಶಲ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ ಎಸ್ಸೆಸ್ಸೆಲ್ಸಿ, ಪಿಯು ಓದಿದವರು ಡೇಟಾ ಎಂಟ್ರಿ, ಡಿ ದರ್ಜೆ ಕೆಲಸ ಕೇಳಿ ಬರುತ್ತಿದ್ದಾರೆ. ಕಂಪ್ಯೂಟರ್ ಜ್ಞಾನ, ಕೈಗಾರಿಕಾ ಕಾನೂನುಗಳ ತಿಳಿವಳಿಕೆ ಇದ್ದವರು ಐಆರ್‌ಡಿಎಂ ಕೋರ್ಸ್ ಮಾಡಬೇಕು. ಐಆರ್‌ಡಿಎ, ಸೆಬಿ ಪರೀಕ್ಷೆ ಎದುರಿಸಿದರೆ ಉದ್ಯೋಗ ನಿಕ್ಕಿ. ಕನ್ನಡದ ಜತೆಗೆ ಸಂವಹನ ಭಾಷೆಯಾಗಿ ಇಂಗ್ಲಿಷ್, ಹಿಂದಿಯನ್ನೂ ಕಲಿಯಬೇಕು ಎಂದು ಹೇಳಿದರು.
ಎಐನಿಂದಾಗಿ ದೇಶದಲ್ಲಿ 9 ಕೋಟಿ ಉದ್ಯೋಗ ಬದಲಾವಣೆ ಆಗಲಿದೆ. 17 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಮೋಹನದಾಸ್ ಪೈ ಹೇಳಿದ್ದಾರೆ. ಹೀಗಾಗಿ ಒಂದೊಂದು ಕಾಲಘಟ್ಟದಲ್ಲಿ ಬದಲಾವಣೆ ಸಹಜ. ಇದಕ್ಕೆ ಹೊಂದಿಕೊಳ್ಳುವ ಚುರುಕುತನ ಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ ಜಿಎಸ್‌ಟಿ ಸೇರಿ ಕೇಂದ್ರ ಸರ್ಕಾರದ ವಿವಿಧ ಕಾನೂನುಗಳ ಜತೆಗೆ ಆರ್‌ಟಿಐ ಕಾರ್ಯಕರ್ತರು ಕೋರ್ಟ್ ಮೂಲಕ ನೇಮಕಾತಿಗೆ ತಡೆ ಹಾಕುತ್ತಿರುವ ಪರಿಣಾಮ ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗಗಳು ಕಳೆದುಹೋಗುತ್ತಿವೆ. ಯುವಕರಿಗೆ ಉದ್ಯೋಗ ಸಿಗುವುದು ಕಷ್ಟವಿದ್ದು ಎಲ್ಲರೂ ಸರ್ಕಾರಿ ಹುದ್ದೆ ನೆಚ್ಚಬಾರದು ಎಂದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಬಸವರಾಜ್, ಜಿಪಂ ಯೋಜನಾ ಅಧಿಕಾರಿ ಮಲ್ಲಾನಾಯ್ಕ, ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಕಾಲೇಜಿನ ಪ್ರಾಚಾರ್ಯ ಬಸವರಾಜ್ ಸಿ. ತಹಸೀಲ್ದಾರ್, ರವಿಚಂದ್ರ ಇತರರಿದ್ದರು.
ಉದ್ಯೋಗ ಮೇಳದಲ್ಲಿ ಆಯ್ಕೆಯಾದ 421 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಯಿತು. 555 ಮಂದಿ ಎರಡನೇ ಹಂತದ ಸಂದರ್ಶನಕ್ಕೆ ಆರ್ಹರಾದರು. ಎಸ್ಸೆಸ್ಸೆಲ್ಸಿ, ಪಿಯು, ಐಟಿಐ, ಡಿಪ್ಲಮೋ, ಎಂಬಿಎ, ಎಂಎಸ್ಸಿ, ಬಿಕಾಂ, ಎಂಕಾಂ, ಇಂಜಿನಿಯರಿಂಗ್ ಪದವೀಧರರು ಸೇರಿ 1944 ಅಭ್ಯರ್ಥಿಗಳು ನೋಂದಣಿಯಾಗಿದ್ದರು. ಈ ಪೈಕಿ 61 ಮಂದಿ ವಿಕಲಾಂಗರಿದ್ದರು. ಒಟ್ಟು 50 ಕಂಪನಿಗಳು ಭಾಗವಹಿಸಿದ್ದವು.