ದಾವಣಗೆರೆ ಜಿಲ್ಲೆಯ ಐದು ಪ್ರತ್ಯೇಕ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಹಣ, ಸ್ವತ್ತಿನೊಂದಿಗೆ ಚಿತ್ರದಲ್ಲಿ ಎಸ್ಪಿ ಎಚ್.ಟಿ. ಶೇಖರ್,ಎಎಸ್ಪಿ ಪರಮೇಶ್ವರ ಹೆಗಡೆ, ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ್ ಇತರ ಅಧಿಕಾರಿಗಳಿದ್ದರು.
- ಕಾರು ಸಹಿತ 30 ಲಕ್ಷ ರೂ. ಮೌಲ್ಯದ ಸ್ವತ್ತು ವಶ
- ಹೊನ್ನಾಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ
- ಸುದ್ದಿಗೋಷ್ಠಿಯಲ್ಲಿ ಎಸ್ಪಿ ಎಚ್.ಟಿ. ಶೇಖರ್ ಮಾಹಿತಿ
ದಾವಣಗೆರೆ: ಹೊನ್ನಾಳಿ ತಾಲೂಕು ಅರಕೆರೆ ಬಳಿ ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಮೆಹಬೂಬ್, ದಾವಣಗೆರೆಯ ಹನುಮಂತಪ್ಪ ಆಲಿಯಾಸ್ ಜಂಗ್ಲಿ, ವಿ. ಅಜ್ಜಪ್ಪ ಲಿಯಾಸ್ ಅಜಯ್ ಹಾಗೂ ಬಿ. ಅನಿಲ್ ಬಂಧಿತ ಆರೋಪಿಗಳಾಗಿದ್ದು, 30 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಎಚ್.ಟಿ.ಶೇಖರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದ ಮಾಲತೇಶ್ ಎಂಬುವರು ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರ ಗ್ರಾಮದಲ್ಲಿನ 10.58 ಎಕರೆ ಜಮೀನನ್ನು ಹೊಸಪೇಟೆಯ ವೈದ್ಯರೊಬ್ಬರಿಗೆ ಮಾರಾಟ ಮಾಡಿ 1.21ಕೋಟಿ ರೂ. ಪಡೆದಿದ್ದರು.
ಇದರಲ್ಲಿ ಸಾಲ ತೀರುವಳಿ ಹಾಗೂ ನೋಂದಣಿಗೆ ಬಳಸಿ ಮಿಕ್ಕಿದ 76 ಲಕ್ಷ ರೂ. ವನ್ನು ತೆಗೆದುಕೊಂಡು ಮರಳುತ್ತಿದ್ದರು. ಎರಡು ಪ್ರತ್ಯೇಕ ಬ್ಯಾಗ್‌ನಲ್ಲಿ 38, 36 ಲಕ್ಷ ಹಾಗೂ ಜೇಬಿನಲ್ಲಿ 2 ಲಕ್ಷ ಇರಿಸಿಕೊಂಡು ಸ್ನೇಹಿತ ಮೌನಾಚಾರಿ ಎಂಬುವರ ಜತೆಗೆ ಒಮಿನಿ ಕಾರಿನಲ್ಲಿ ಮಾ. 30ರಂದು ಹರಿಹರ ಮಾರ್ಗವಾಗಿ ತಮ್ಮ ಊರಿಗೆ ಹೊರಟಿದ್ದರು.
ಮತ್ತೊಂದು ಕಾರಿನಲ್ಲಿದ್ದ ಆರೋಪಿಗಳು ಕೊಮಾರನಹಳ್ಳಿ ಕಣಿವೆ ಬಳಿ ಮಾಲತೇಶ್ ಅವರ ಒಮಿನಿಗೆ ಡಿಕ್ಕಿ ಹೊಡೆದು ಬೆದರಿಸಿ 38 ಲಕ್ಷ ರೂ. ಚೀಲ ಸುಲಿಗೆ ಮಾಡಿ ಪರಾರಿಯಾಗಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು 23.30 ಲಕ್ಷ ನಗದು, 6 ಲಕ್ಷ ರೂ. ಮೌಲ್ಯದ ಒಂದು ಕಾರು, 70 ಸಾವಿರ ರೂ. ಮೌಲ್ಯದ ಮೂರು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ್, ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ಹೊನ್ನಾಳಿ ಠಾಣೆಯ ಪಿಐ ಎಚ್.ಸುನೀಲ್ ಕುಮಾರ್, ಪಿಎಸ್‌ಐಗಳಾದ ಹೊಳಬಸಪ್ಪ ಹೋಳಿ, ಪ್ರಭು ಡಿ ಕೆಳಗಿನಮನಿ ಹಾಗೂ ಅವರ ಸಿಬ್ಬಂದಿ ಮತ್ತು ತುಂಗಾ ಶ್ವಾನದಳ ಈ ಕಾರ್ಯಾಚರಣೆ ನಡೆಸಿದೆ ಎಂದು ಎಸ್ಪಿ ಶ್ಲಾಘಿಸಿದರು.
ಪ್ರತ್ಯೇಕ ಕೇಸ್, ಆರು ಆರೋಪಿಗಳ ಬಂಧನ
ನ್ಯಾಮತಿ ಹಾಗೂ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿನ ಸುಲಿಗೆ, ಕಳ್ಳತನದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಆರೋಪಿಗಳನ್ನು ಬಂಧಿಸಿರುವ ದಾವಣಗೆರೆ ಪೊಲೀಸರು 11.81 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಎಚ್.ಟಿ. ಶೇಖರ್ ವಿವರಿಸಿದರು.
ನ್ಯಾಮತಿ ತಾಲೂಕು ಯರಗನಾಳ್ ಗ್ರಾಮದಲ್ಲಿ ಏ. 29ರಂದು ಬೀಗ ಹಾಕಿದ್ದ ಮನೆಯಲ್ಲಿ 4.91ಲಕ್ಷ ರೂ. ಕಳ್ಳತನ ಮಾಡಲಾಗಿತ್ತು. ಮನೆ ಮಾಲಕಿ ಶಾರದಾ ದೂರು ನೀಡಿದ್ದರು.
ನ್ಯಾಮತಿ ಠಾಣೆಯ ಪಿಐ ಎಚ್.ಎಂ.ಸಿದ್ದೇಗೌಡ ನೇತೃತ್ವದಲ್ಲಿ ಪಿಎಸ್‌ಐ ಹೊಳಬಸಪ್ಪ ಹೋಳಿ ಅವರ ತಂಡವು ತನಿಖೆ ನಡೆಸಿ, ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಪಿ.ಎಸ್. ಶಿವರಾಜ್‌ನನ್ನು ಬಂಧಿಸಿ, ಕಳವಾಗಿದ್ದ ಹಣ, ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ವಶಪಡಿಸಿಕೊಂಡಿದೆ ಎಂದರು.
ದಾವಣಗೆರೆ ಹದಡಿ ರಸ್ತೆಯ ಹೋಟೆಲ್ ಎದುರು ನಿಲ್ಲಿಸಿದ್ದ ಟಿವಿಎಸ್ ಎಂಟಾರ್ಕ್ ಸ್ಕೂಟರ್ ಕಳ್ಳತನ ಮಾಡಿದ್ದ ಶಿವಮೊಗ್ಗದ ಆರೋಪಿಗಳಾದ ಸಾದಿಕ್ ಉಲ್ಲಾ ಖಾನ್ ಆಲಿಯಾಸ್ ಫೈರೋಜ್ ಸನಾವುಲ್ಲಾ ಖಾನ್, ಸೈಯದ್ ಹುಸೇನ್‌ನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾನಗರ, ದಾವಣಗೆರೆ ರೈಲ್ವೆ ಠಾಣೆಗಳಲ್ಲಿ ತಲಾ ಒಂದು ಪ್ರಕರಣ, ಬೆಳಗಾವಿ ಜಿಲ್ಲೆ ಮಾರಿಹಾಳ ಠಾಣೆ ವ್ಯಾಪ್ತಿಯ ಎರಡು ಕಳವು ಪ್ರಕರಣ ಪತ್ತೆ ಮಾಡಲಾಗಿ,ಆರೋಪಿಗಳಿಂದ 4ಲಕ್ಷ ರೂ. ಮೌಲ್ಯದ ನಾಲ್ಕು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿದ್ಯಾನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಏ.18ರಂದು ಲೀಲಾವತಿ ಎಂಬುವರ ಮೇಲೆ ಆರೋಪಿಗಳಿಬ್ಬರು ಹಲ್ಲೆ ಮಾಡಿ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಸುಲಿಗೆ ಮಾಡಿದ್ದರು. ಆರೋಪಿತರಾದ ದಾವಣಗೆರೆಯ ಎಂ. ರಂಜಿತಾ, ಹೊಸದುರ್ಗದ ಎಂ.ಅಭಿಷೇಕ್ ಆಲಿಯಾಸ್ ಅಭಿಯನ್ನು ಬಂಧಿಸಲಾಗಿ 8 ಗ್ರಾಂ ತೂಕದ ಸರ ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆಯ ಬಾಪೂಜಿ ಸಮುದಾಯ ಭವನದಲ್ಲಿ ಏ. 17ರಂದು ಮದುವೆಗೆ ತಂದಿದ್ದ 50 ಸಾವಿರ ರೂ. ಮೌಲ್ಯದ, 324 ಗ್ರಾಂ ತೂಕದ ಬೆಳ್ಳಿ ಆರತಿ ತಟ್ಟೆ ಕಳವಾಗಿತ್ತು. ಆರೋಪಿ ಶಿವಮೊಗ್ಗದ ಆರ್.ಪಿ. ರೇವತಿಯನ್ನು ಬಂಧಿಸಿ ಕಳವಾದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಮೂರೂ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಪಿಐ ವೈ.ಎಸ್. ಶಿಲ್ಪಾ, ಪಿಎಸ್‌ಐ ಜಿ.ಸಚಿನ್ ಬಿರಾದಾರ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಎಚ್.ಟಿ.ಶೇಖರ್ ಶ್ಲಾಘಿಸಿದರು.ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಪರಮೇಶ್ವರ ಹೆಗಡೆ, ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ್ ಇತರ ಅಧಿಕಾರಿಗಳಿದ್ದರು.
ಆಡಿಯೋ ಪ್ರಕರಣ ಶೀಘ್ರವೇ ಎಫ್‌ಐಆರ್
ದಾವಣಗೆರೆ ದಕ್ಷಿಣ ಉಪಚುನಾವಣೆ ಕುರಿತಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಸಿರಾಜ್ ಅಹ್ಮದ್ ಸಂಭಾಷಣೆಯ ಆಡಿಯೋ ವೈರಲ್ ಸಂಬಂಧಿಸಿದಂತೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನಷ್ಟು ದಾಖಲಾತಿ ಕೇಳಲಾಗಿದೆ. ಅದನ್ನು ಪಡೆದ ನಂತರದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗುವುದು ಎಂದು ಎಸ್ಪಿ ಎಚ್.ಟಿ. ಶೇಖರ್ ತಿಳಿಸಿದರು.
ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ಸಂಬಂಧ, ಮಕ್ಕಳ ಕಲ್ಯಾಣ ಸಮಿತಿ ನೀಡಿದ ವರದಿ ಆಧರಿಸಿ ಒಂದು ಎಫ್‌ಐಆರ್ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಸ್ವಾಮೀಜಿ ಪಡೆದಿದ್ದ ಜಾಮೀನು ವಜಾ ಕೋರಿ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಶನಿವಾರ ಈ ಸಂಬಂಧ ವಿಚಾರಣೆ ಇದ್ದು ನಂತರದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದೂ ಎಸ್ಪಿ ಪ್ರತಿಕ್ರಿಯಿಸಿದರು.