ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡರಾದ ಆಲೂರು ನಿಂಗರಾಜ್, ಪ್ರೊ. ಎಚ್.ವಿಶ್ವನಾಥ್, ಎಂ. ಹಾಲೇಶ್, ಎಚ್.ಸಿ. ಗುಡ್ಡಪ್ಪ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
- ಹಳೆಯ ಮೀಸಲಿನನ್ವಯ ನೇಮಕಾತಿಗೆ ಕಿಡಿ
- ಸಚಿವರ ರಾಜೀನಾಮೆಗೆ ಒಕ್ಕೂಟದ ಆಗ್ರಹ
- ಬಲಗೈ ಸಮಾಜದ ಕೆಲವರ ಷಡ್ಯಂತ್ರ ಆರೋಪ
ದಾವಣಗೆರೆ: ಒಳಮೀಸಲಾತಿ ಬದಲಾಗಿ ಹಳೆಯ ಮೀಸಲಾತಿ ರೋಸ್ಟರ್ ಪ್ರಕಾರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ವಿರೋಧಿಸಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟವು ಮಾ. 6ರಂದು ದಾವಣಗೆರೆ ಬಂದ್‌ಗೆ ಕರೆ ನೀಡಿದೆ.
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ವರದಿಯಂತೆ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರಿ ಹುದ್ದೆಗಳ ಭರ್ತಿ ಮಾಡಬೇಕಿದ್ದ ಸರ್ಕಾರ, ಹಳೆಯ ಮೀಸಲಾತಿ ಅನುಸರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದು ಸರಿಯಲ್ಲ ಎಂದು ಮುಖಂಡ ಆಲೂರು ನಿಂಗರಾಜ್, ಪ್ರೊ. ಎಚ್.ವಿಶ್ವನಾಥ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮಾದಿಗ ಸಮಾಜ ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಕಳೆದ 30 ವರ್ಷದಿಂದ ಹೋರಾಟ ಮಾಡುತ್ತ ಬಂದಿದ್ದರೂ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರೆತಿಲ್ಲ. ಹಳೆಯ ಮೀಸಲಾತಿ ಪ್ರಕಾರವೇ 56,432 ಹುದ್ದೆಗಳನ್ನು ತುಂಬಲು ಹೊರಟಿದ್ದು ಸರಿಯಲ್ಲ. ಒಳಮೀಸಲಾತಿ ಜಾರಿಯಾದಲ್ಲಿ ಮಾದಿಗ ಸಮಾಜಕ್ಕೆ 3750 ಹುದ್ದೆಗಳು ಮಾದಿಗ ಸಮಾಜಕ್ಕೆ ದಕ್ಕಲಿವೆ. ಇಲ್ಲವಾದಲ್ಲಿ ನೂರು ಹುದ್ದೆಯೂ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೆ ಬಲಗೈ ಸಮಾಜದ ಕೆಲ ಸಚಿವರ ಕುತಂತ್ರದಿಂದಾಗಿ ಸರ್ಕಾರ ಈ ನೇಮಕಾತಿಗೆ ಮುಂದಾಗಿದೆ. ಮಾದಿಗ ಸಮಾಜಕ್ಕೆ ಪ್ರಮುಖ ಖಾತೆಗಳನ್ನೇ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಇದೀಗ ಮಾದಿಗ ಸಮಾಜದ ಶವಗಳ ಮೇಲೆ ಸರ್ಕಾರ ಅಧಿಕಾರ ಮಾಡಲು ಹೊರಟಿದೆ. ಮಾದಿಗ ಸಮಾಜದ ಶಾಸಕರು, ಸಚಿವರು ಇನ್ನಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕು ಎಂದು ಆಲೂರು ನಿಂಗರಾಜ್ ಆಗ್ರಹಿಸಿದರು.
ಸರ್ಕಾರ ಕೂಡಲೆ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ನೇಮಕಾತಿ ತಡೆಹಿಡಿಯಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಗ್ರಾಪಂ ಸದಸ್ಯರಿಂದ ಮುಖ್ಯಮಂತ್ರಿ ನಿವಾಸದವರೆಗೂ ಪೌರಕಾರ್ಮಿಕರು ಸ್ವಚ್ಛತಾಕಾರ್ಯಕ್ಕೆ ಇಳಿಯುವುದಿಲ್ಲ ಎಂದೂ ಎಚ್ಚರಿಕೆ ನೀಡಿದರು.
ಮುಖಂಡ ಎಚ್.ಸಿ. ಗುಡ್ಡಪ್ಪ ಮಾತನಾಡಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ಹೋರಾಟ ಮಾಡಿರಬಹುದು. ಆದರೆ ಮಾದಿ ಸಮಾಜ 30 ವರ್ಷದಿಂದ ಹೋರಾಟ ಮಾಡುತ್ತಲೇ ಇದೆ. ಹೀಗಾಗಿ ಸಾಮಾನ್ಯ ವರ್ಗದವರನ್ನೂ ಒಳಗೊಂಡಂತೆ ಯಾವುದೇ ಹುದ್ದೆಗಳ ನೇಮಕಾತಿಯನ್ನು ತಡೆಹಿಡಿಯಬೇಕು ಎಂದರು.
ಷೆಡ್ಯೂಲ್ 9 ಬಗ್ಗೆ ಛಲವಾದಿ ನಾರಾಯಣಸ್ವಾಮಿ ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಸದಾಶಿವ ಆಯೋಗ, ಮಾದುಸ್ವಾಮಿ ಉಪಸಮಿತಿ ಹಾಗೂ ನಾಗಮೋಹನದಾಸ್ ವರದಿಗಳು ತಯಾರಿಗೆ ಸರ್ಕಾರ ಸುಮಾರು 700 ಕೋಟಿ ರೂ. ವ್ಯಯಿಸಿದ್ದರೂ ಮಾದಿಗರಿಗೆ ಫಲ ಸಿಕ್ಕಿಲ್ಲ ಎಂದು ಹೇಳಿದರು.
ಎಂ. ಹಾಲೇಶ್ ಮಾತನಾಡಿ ಮಾ.6ರಂದು ಅಗತ್ಯ ಸೇವೆಗಳ ಹೊರತಾಗಿ ಎಲ್ಲ ಬಂದ್ ಆಗಲಿವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದು ಎಂದರು. ಬಂದ್ ದಿನದಂದು ನಗರದ ವಿದ್ಯಾರ್ಥಿಗಳಿಂದ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಿದ್ದು, ಯಾವುದೇ ಅನಾಹುತವಾದಲ್ಲಿ ಸಮಾಜ ಕಲ್ಯಾಣ ಸಚಿವರೇ ಹೊಣೆ ಆಗಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜೆ. ಮಂಜುನಾಥ್, ಎಚ್. ಮಲ್ಲೇಶ್ ಹರಿಹರ, ರಾಘವೇಂದ್ರ ಕಡೇಮನಿ, ಎಚ್.ಚಿದಾನಂದಪ್ಪ, ಜಿ. ಆಂಜಿನಪ್ಪ ಕಡತಿ, ಪಾಂಡೋಮಟ್ಟಿ ಪ್ರಭಾಕರ್, ಬಿ.ಜೆ. ಮಹಾಂತೇಶ್, ಚಿಕ್ಕನಹಳ್ಳಿ ಲಿಂಗರಾಜ, ಕೆ. ರವಿಕುಮಾರ್, ನಗನಹಳ್ಳಿ ರಾಮಚಂದ್ರಪ್ಪ ಇದ್ದರು.