ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ದಾಸ ಶ್ರೇಷ್ಠ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕೆ.ಎಸ್. ಬಸವಂತಪ್ಪ, ಪರಮೇಶ್ವರ ಹೆಗಡೆ, ಶೀಲವಂತ ಶಿವಕುಮಾರ, ಚಿದಾನಂದ, ಎಚ್.ಬಿ ಗೋಣೆಪ್ಪ, ಗುರುನಾಥ, ಪರಶುರಾಮ, ಎಸ್.ಎಸ್. ಗಿರೀಶ್, ಬೀರಪ್ಪ ಭಾಗವಹಿಸಿದ್ದರು.
- ಶಾಸಕ ಬಸವಂತಪ್ಪ ಹೇಳಿಕೆ
- ಜಿಲ್ಲಾಡಳಿತದಿಂದ ಕನಕದಾಸ ಜಯಂತಿ ಕಾರ್ಯಕ್ರಮ
- ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ
ದಾವಣಗೆರೆ: ಕನಕದಾಸರು ಜಾತಿ ವ್ಯವಸ್ಥೆಯನ್ನು ತೊಲಗಿಸಲು ಆಳವಾದ ಅನುಭವದ ಮೂಲಕ ಸಮಾಜ ಕಟ್ಟುವಿಕೆಯ ಕೆಲಸ ಮಾಡಿದರು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ, ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನಕದಾಸರು ಬರೆದಿರುವ ಪ್ರತಿಯೊಂದು ಕೃತಿಗಳು ಪ್ರಸ್ತುತ ಸಮಾಜಕ್ಕೆ ಪೂರಕವಾಗಿವೆ. ರಾಮ ಧಾನ್ಯ ಚರಿತೆಯ ಮೂಲಕ ಧಾನ್ಯಗಳಿಗೆ ಧ್ವನಿಯಾಗಿ ಸಮಾಜದ ಮೇಲು-ಕೀಳಿನ ಪರಿಸ್ಥಿತಿಯನ್ನು ಬಿಡಿಸಿಟ್ಟರು ಎಂದರು.
‘ನಾನು’ ಎಂಬ ಅಹಂಕಾರ ಇಲ್ಲದಿದ್ದರೆ ನಾವು ಸಹ ಸ್ವರ್ಗಕ್ಕೆ ಹೊಗಬಹುದು ಎಂಬುದನ್ನು ಸಮಾಜಕ್ಕೆ ತಿಳಿಸಿದರು. ‘ಬಾಗಿಲನ್ನು ತೆರೆದು ಸೇವೆಯನ್ನು ಕೊಡು ಹರಿಯೆ’ ಎಂಬ ಹಾಡಿನ ಮೂಲಕ ಕನಕನ ಕಿಂಡಿ ಉದ್ಭವಿಸಿದ ಹಾಗೂ ಕೇಶವನ ಪ್ರತಿಷ್ಠಾಪನೆಯಾಗಿದ್ದನ್ನು ತಿಳಿಸಿದರು.
ಮದ್ಯವನ್ನು ಜೇನುತುಪ್ಪವಾಗಿಸಿ ಪವಾಡ ಮೆರೆದರು. ಇಂದು ಇತಿಹಾಸದ ಮತ್ತು ಪುರಾಣದ ಮಹಾಪುರುಷರನ್ನು ದೇವರನ್ನಾಗಿಸುವ ಪರಿಪಾಠವಿದೆ. ಇದು ಬದಲಾಗಬೇಕು, ಮನುಷ್ಯ ದೇವರಾದರೆ ಸಮಸ್ಯೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ದಾರ್ಶನಿಕರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸಿ, ಎಲ್ಲ ಸಮುದಾಯದವರು ಒಟ್ಟಿಗೆ ಸೇರಿ ಆಚರಣೆ ಮಾಡಿದಾಗ ಸಮಾನತೆ ಸಾಧ್ಯ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಅಬಕಾರಿ ಇಲಾಖೆಯ ಅಧಿಕಾರಿ ಚಿದಾನಂದ, ಡಿಡಿಪಿಐ ಕೊಟ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಎಚ್.ಬಿ ಗೋಣೆಪ್ಪ, ಗುರುನಾಥ, ಪರಶುರಾಮ, ಎಸ್.ಎಸ್. ಗಿರೀಶ್, ಬೀರಪ್ಪ ಸೇರಿದಂತೆ ಕುರುಬ ಸಮಾಜದ ಮುಖಂಡರು ಭಾಗವಹಿಸಿದ್ದರು.