ಹರಿಹರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು. ಗುರುಬಸವರಾಜ, ಬಸವರಾಜ ಇದ್ದರು.ambedkar
- ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯ
- ಹರಿಹರದಲ್ಲಿ ಸಂವಿಧಾನ ದಿನಾಚರಣೆ
- ಕನಸಿನ ಸಮಾನ ಭಾರತ ನಿರ್ಮಿಸಿ
ಹರಿಹರ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ಸಮಾನ ಭಾರತವನ್ನು ನಿರ್ಮಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ, ವಿವಿಧ ಇಲಾಖೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಚಿಂತನೆ, ದೂರದೃಷ್ಟಿ ಮತ್ತು ಕೊಡುಗೆಗಳು ಸಮಾಜದ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿ ಭಾರತೀಯನ ಏಳ್ಗೆಗೆ ಮೀಸಲಾಗಿದ್ದವು. ಅವರು ರೂಪಿಸಿದ ಸಂವಿಧಾನವು ಜಾತಿ, ಮತ, ಲಿಂಗ ಬೇಧವಿಲ್ಲದೆ ಸಮಸ್ತ ನಾಗರೀಕರಿಗೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಭದ್ರತೆಯನ್ನು ನೀಡುತ್ತದೆ ಎಂದರು.
ದೇಶ ಹಲವು ಜಾತಿ, ಧರ್ಮ, ಮತ, ಪಂಥ ಹಾಗೂ ಮಲೆನಾಡು, ಮರಳುಗಾಡು, ಕರಾವಳಿ ಹೀಗೆ ವಿವಿಧ ಬಿನ್ನತೆ ಹೊಂದಿದ್ದರೂ ಎಲ್ಲವನ್ನು ಒಟ್ಟು ಗೂಡಿಸಿ ಎಲ್ಲರಿಗೂ ಸಮಾನ ಬದುಕು ಕಟ್ಟಿಕೊಳ್ಳಲು ಕಾರಣ ಆಗಿದ್ದು, ನಮ್ಮ ಸಂವಿಧಾನ. ಹಲವು ದೇಶಗಳಲ್ಲಿ ಅನೇಕ ಸಮಸ್ಯೆಗಳು ಇವೆ. ಎಲ್ಲ ಸಮಸ್ಯೆ ಮೆಟ್ಟಿ ನಿಲ್ಲುವಂತಹ ಸಂವಿಧಾನ ನೀಡಿದ ಅಂಬೇಡ್ಕರ್ ಅವರನ್ನು ಎಲ್ಲರೂ ಸ್ಮರಿಸಬೇಕು ಎಂದರು.
ವಿಶ್ವದಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನ
ಉತ್ತಮ ನೌಕರಿ ನೀಡಿದ ಸಂವಿಧಾನದ ಕಾರ್ಯಕ್ರಮಗಳಲ್ಲಿ ಎಲ್ಲ ಅಧಿಕಾರಿಗಳು ಭಾಗವಹಿಸಬೇಕು. ಇಲ್ಲದಿದ್ದಲ್ಲಿ ಅದು ಸಂವಿಧಾನಕ್ಕೆ ಮಾಡಿದ ಅಪಚಾರ ಆಗಲಿದೆ ಎಂದು ಕಾರ್ಯಕ್ರಮಕ್ಕೆ ಗೈರಾಗಿದ್ದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಮಾತನಾಡಿ, ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಲಿಖಿತ ಸಂವಿಧಾನ ನೀಡಿದ್ದು, ವಿಶ್ವ ಕಂಡ ಅತ್ಯಂತ ಜ್ಞಾನಿ ಅಂಬೇಡ್ಕರ್ ಅವರು. ಆರ್ಥಿಕತೆ, ಜಾತಿ, ಸ್ವಾತಂತ್ರ್ಯ, ಒಕ್ಕೂಟ ವ್ಯವಸ್ಥೆಯ ಅಂಶಗಳನ್ನು ಸೇರಿಸಿ ಸಂವಿಧಾನ ರಚಿಸಿದ್ದ ಅವರು 32 ಪದವಿಗಳನ್ನು ಹೊಂದಿದ್ದರು. ಸದೃಢ, ಭವ್ಯ ಭಾರತದ ಪರಿಕಲ್ಪನೆಯ ಕನಸು ಕಂಡಿದ್ದರು ಎಂದರು.
ಸರ್ವರಿಗೂ ಸಮಾನತೆ
ಉಪನ್ಯಾಸ ನೀಡಿದ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಬಿ.ರೇವಣನಾಯ್ಕ ಮಾತನಾಡಿ, ವಿಶ್ವದ ನಾನಾ ದೇಶಗಳಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ತತ್ವಗಳಾದ ಅಮೇರಿಕಾ ಕ್ರಾಂತಿಯ ಸರ್ವರಿಗೂ ಸಮಾನತೆ, ಫ್ರೆಂಚ್ ಕ್ರಾಂತಿಯ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಹಾಗೂ ರಷ್ಯಾ ಕ್ರಾಂತಿಯ ಸಾಮರ್ಥ್ಯಕ್ಕನುಗುಣವಾಗಿ ದುಡಿಯುವುದು ಅಗತ್ಯಕ್ಕನುಗುಣವಾಗಿ ಪಡೆಯುವುದು ಎನ್ನುವ ತತ್ವದ ಅಡಿಯಲ್ಲಿ ನಮ್ಮ ಸಂವಿಧಾನವನ್ನು ಆಂಬೇಡ್ಕರ್ ಅವರು ರಚಿಸಿದ್ದಾರೆ ಎಂದರು.
ಬುದ್ಧನ ಶಾಂತಿ, ಬಸವಣ್ಣನ ಸಮಾನತೆ, ಕನಕದಾಸರ ವರ್ಗರಹಿತ ಸಮಾಜ, ಮಹಾತ್ಮ ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸಾ ಮಾರ್ಗದ ಅಡಿಯಲ್ಲಿ ರೂಪಿಸಿದ ಈ ಸಂವಿಧಾನದ ಅಡಿಯಲ್ಲಿ ನಾವು ಬದುಕುತ್ತಿದ್ದೇವೆ ಎಂದು ತಿಳಿಸಿದರು.
ಬೆಳಗ್ಗೆ ನಗರದ ಹರಿಹರೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಿಂದ ಗುರುಭವನದ ವರೆಗೆ ಮೆರವಣಿಗೆ, ಸಂವಿಧಾನ ಪೀಠಿಕೆ ವಾಚನ ನಡೆಯಿತು.
ತಾಪಂ ಇಒ ಎಚ್.ಬಸವರಾಜ, ಆರಕ್ಷಕ ನಿರೀಕ್ಷಕ ಆರ್.ಎಫ್.ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ, ಪೌರಯುಕ್ತ ಎಂ.ಪಿ.ನಾಗಣ್ಣ, ಸಮಾಜ ಕಲ್ಯಾಣ ಇಲಾಖೆ ಹನುಮಂತಪ್ಪ ಟಿ.ಲಮಾಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ್ ಮಹಾಂತೇಶ, ನಗರಸಭೆ ಮಾಜಿ ಸದಸ್ಯ ಆಟೋ ಹನುಮಂತಪ್ಪ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.