ದೆಹಲಿಯಲ್ಲಿ ಬುಧವಾರ ನಡೆದ ಸಂಸತ್ ಅಧಿವೇಶನದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು.
- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಗ್ರಹ
- ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪ
- ಮೊಬೈಲ್ ನೆಟ್‌ವರ್ಕ್ ಸೌಲಭ್ಯ
ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಹಾಲೇಶಪುರ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಸ್ಥಾಪನೆಯ ಕುರಿತು ಬುಧವಾರ, ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ದಾವಣಗೆರೆ ಕ್ಷೇತ್ರದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರದ ಗಮನ ಸೆಳೆದರು.
ಡಿಜಿಟಲ್ ಇಂಡಿಯಾ ಮಿಷನ್‌ನ ಮೂಲ ಉದ್ದೇಶಗಳಲ್ಲಿ ಪ್ರಮುಖವಾದುದು ಡಿಜಿಟಲ್ ಅಂತರವನ್ನು ನಿವಾರಿಸುವುದು ಮತ್ತು ಅಂತಿಮ ಹಂತದ ಸಂಪರ್ಕವನ್ನು ಖಚಿತಪಡಿಸುವುದಾಗಿದೆ.
ಆದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚನ್ನಗಿರಿ ತಾಲೂಕಿನ ಹಾಲೇಶಪುರ, ಅರಳಿಕಟ್ಟೆ, ಚಿಕ್ಕಕೋಗಲೂರು ಗ್ರಾಮಗಳು, ಹೊನ್ನಾಳಿ ತಾಲೂಕಿನ ಮುಸ್ಸೇನಹಾಳು ಗ್ರಾಮ ಮತ್ತು ಹರಪನಹಳ್ಳಿ ತಾಲೂಕಿನ ಕೋಂಗನಹೊಸೂರು ಮತ್ತು ಒಳತಾಂಡ ಗ್ರಾಮಗಳ ಜನತೆ ಇಂದು ಕೂಡ ಮೂಲ ಮೊಬೈಲ್ ನೆಟ್‌ವರ್ಕ್ ಸೌಲಭ್ಯವಿಲ್ಲದೇ ದೈನಂದಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಈ ವಿಷಯವನ್ನು ಹಲವಾರು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಬಗ್ಗೆ ಈಗಾಗಲೇ ಶಿವಮೊಗ್ಗ ವಲಯ ಕಚೇರಿಗೆ ನಾಲ್ಕು ಪತ್ರಗಳು, ಬಳ್ಳಾರಿ ವಲಯ ಕಚೇರಿಗೆ ಎರಡು ಹಾಗೂ ಸಂವಹನ ಸಚಿವಾಲಯಕ್ಕೆ ಎರಡು ಪತ್ರಗಳನ್ನು ಕಳುಹಿಸಲಾಗಿದೆ. ಸಂವಹನ ಸಚಿವಾಲಯದಿಂದ ಉತ್ತರ ಬಂದಿದ್ದರೂ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಸ್ಥಾಪನೆ ಕುರಿತು ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ.
ಪರಿಣಾಮವಾಗಿ ಇಲ್ಲಿ ವಾಸಿಸುವ ವಿದ್ಯಾರ್ಥಿಗಳು, ರೈತರು, ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್, ಆನ್‌ಲೈನ್ ಶಿಕ್ಷಣ, ಟೆಲಿಮೆಡಿಸಿನ್, ತುರ್ತು ಸಂಪರ್ಕ ಸೇರಿ ಅನೇಕ ಸೇವೆಗಳಿಗೆ ಅಡಚಣೆಯಾಗುತ್ತಿದೆ. ಈ ರೀತಿಯ ದೀರ್ಘ ಕಾಲದ ಸಂಪರ್ಕ ಕೊರತೆಯು ಗ್ರಾಮೀಣ-ನಗರ ಡಿಜಿಟಲ್ ಅಂತರವನ್ನು ಹೆಚ್ಚಿಸುತ್ತಿದ್ದು, ಮೂಲ ಸೇವೆಗಳು ತೊಂದರೆಯನ್ನು ಎದುರಿಸುತ್ತಿವೆ ಎಂದರು.
ಆದ್ದರಿಂದ, ಉಲ್ಲೇಖಿತ ಗ್ರಾಮಗಳಲ್ಲಿ ತಕ್ಷಣ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಸ್ಥಾಪಿಸುವಂತೆ ಸಂವಹನ ಸಚಿವರು ಬಿಎಸ್‌ಎನ್‌ಎಲ್ ಸಂಸ್ಥೆಗೆ ನಿರ್ದೇಶನ ನೀಡುವಂತೆ ವಿನಂತಿಸಿದರು.
ಇದರಿಂದ ನಮ್ಮ ಕ್ಷೇತ್ರದ ಗ್ರಾಮೀಣ ಪ್ರದೇಶಕ್ಕೆ ಸಮಾನ ಮತ್ತು ನಂಬಿಕೆಗೆ ಅರ್ಹವಾದ ಡಿಜಿಟಲ್ ಸಂಪರ್ಕ ದೊರೆಯುತ್ತದೆ ಎಂದು ಹೇಳಿದರು.
ವೇತನ ಪರಿಷ್ಕರಣೆಗೆ ಒತ್ತಾಯ
2017ರಿಂದ ಬಾಕಿ ಇರುವ ಬಿಎಸ್‌ಎನ್‌ಎಲ್ ನೌಕರರ 3ನೇ ವೇತನ ಪರಿಷ್ಕರಣೆ ನೀಡುವುದರಲ್ಲಿ ‘ಅಫೋರ್ಡಬಿಲಿಟಿ ಕ್ಲಾಸ್’ಎಂಬ ಷರತ್ತು ವಿಧಿಸಲಾಗಿದೆ.
ಈ ಷರತ್ತು ಅನ್ಯಾಯಕರವಾಗಿದೆ, ಏಕೆಂದರೆ ಬಿಎಸ್‌ಎನ್‌ಎಲ್ ಲಾಭಕ್ಕಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲ. ಇದು ರಾಷ್ಟ್ರ ಸೇವೆಗೆ ಮೀಸಲಾಗಿರುವ ಸಾರ್ವಜನಿಕ ವಲಯದ ಸಂಸ್ಥೆ. ಆದ್ದರಿಂದ, ನ್ಯಾಯದ ದೃಷ್ಟಿಯಿಂದ ಈ ಅಫೋರ್ಡಬಿಲಿಟಿ ಷರತ್ತನ್ನು ರದ್ದುಪಡಿಸಿ, 3ನೇ ವೇತನ ಪರಿಷ್ಕರಣೆಯನ್ನು 2026ರ ಮಾರ್ಚ್ 31ರ ಒಳಗಾಗಿ ಬಿಎಸ್‌ಎನ್‌ಎಲ್ ನೌಕರರಿಗೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಸದೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.