ಹೊನ್ನಾಳಿ: ಪಟ್ಟಣದ ಬನ್ನಿ ಮಹಾಕಾಳಮ್ಮ ದೇವಾಲಯದ ಸಮೀಪ ಮಂಗಳವಾರ ತಡರಾತ್ರಿ ಇಲ್ಲಿನ ದುರ್ಗಿಗುಡಿ ನಿವಾಸಿ ಅಮಿತ್ (30) ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪಟ್ಟಣ ಪಂಚಾಯಿತಿಯಲ್ಲಿ ದಿನಗೂಲಿ ಆಧಾರದ ಮೇಲೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಮಿತ್ ಈಚೆಗೆ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮಂಗಳವಾರ ರಾತ್ರಿ ತಾಯಿ ನಾಗರತ್ನಮ್ಮ ಅವರೊಂದಿಗೆ ಬನ್ನಿಮಹಾಕಾಳಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ರಾತ್ರಿ ಸುಮಾರು 11-30ರ ಸಮಯದಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಹತ್ಯೆ ಮಾಡಲಾಗಿದೆ. ದೇವಾಲಯದ ಬಳಿ ಕಾದು ಕುಳಿತಿದ್ದ ದುಷ್ಕರ್ಮಿಗಳು ಅಮಿತ್ ಹಾಗೂ ಅವರ ತಾಯಿಯ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಮಾರಕಾಸ್ತ್ರಗಳಿಂದ ಅಮಿತ್ ತಲೆಗೆ ಹೊಡೆದು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಮಿತ್ನನ್ನು ತಕ್ಷಣವೇ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವದ ಕಾರಣ ಅವರು ಮೃತಪಟ್ಟಿದ್ದಾರೆ.
ಆಗಸ್ಟ್ 6ರಂದು ಗಣೇಶ್ ಎಂಬಾತನಿಗೂ ನನ್ನ ಮಗನಿಗೂ ಜಗಳವಾಗಿತ್ತು. ಅದೇ ಹಳೆಯ ದ್ವೇಷವನ್ನು ಇಟ್ಟುಕೊಂಡು ಗಣೇಶ್, ಚಂದ್ರು, ಸಚಿನ್, ಆಕಾಶ್, ಸಂದೀಪ್ ಹಾಗೂ ಸುಹಾಸ್ ಎಂಬ ಆರು ಮಂದಿ ನನ್ನ ಮಗನಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ನಾಗರತ್ನಮ್ಮ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ ಡಿವೈಎಸ್ಪಿ ರುದ್ರೇಶ್ ಉಜ್ಜಿನಕೊಪ್ಪ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಘಟನಾಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಎಚ್.ಟಿ. ಶೇಖರ್ ತಿಳಿಸಿದರು.