ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಶನಿವಾರ 5 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. ನಿರಂಜನಾನಂದಪುರಿ ಶ್ರೀ, ಮಾಜಿ ಶಾಸಕ ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್ ಇತರರಿದ್ದರು. 
ದಾವಣಗೆರೆ

ಸೇತುವೆ ನಿರ್ಮಾಣಕ್ಕೆ ಶಾಶ್ವತ ಪರಿಹಾರ

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಸಚಿವ ಸತೀಶ್ ಜಾರಕಿಹೊಳಿ ಭರವಸೆ
  • ಬೆಳ್ಳೂಡಿ ರಸ್ತೆ ಕಾಮಗಾರಿಗೆ ಭೂಮಿಪೂಜೆ
  • ಹರಿಹರ ತಾಲೂಕಿಗೆ 36 ಕೋಟಿ ರೂ. ಅನುದಾನ
ಹರಿಹರ: ದುರಸ್ತಿ ಕಾಣದೆ ನನೆಗುದಿಗೆ ಬಿದ್ದಿರುವ ಬೆಳ್ಳೂಡಿ - ರಾಮತೀರ್ಥ ಸೇತುವೆ ನಿರ್ಮಾಣಕ್ಕೆ ಶೀಘ್ರವೇ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಬೆಳ್ಳೂಡಿ ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಕಾಗಿನೆಲೆ ಕನಕ ಪೀಠದ ನಿರಂಜನಾನಂದ ಪುರಿ ಶ್ರೀಗಳೊಂದಿಗೆ ಸೇತುವೆ ಸ್ಥಳಕ್ಕೆ ಭೇಟಿ ನೀಡಿ  ಮಾತನಾಡಿದರು.
ಸೇತುವೆ ದುರಸ್ತಿಗೆ ಮೂರು ಪರ್ಯಾಯ ಆಯ್ಕೆಗಳಿದ್ದು ತಜ್ಞರೊಂದಿಗೆ ಚರ್ಚೆ ನಡೆಸಿ ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು.
ಬಿದ್ದ-ಸುಸ್ಥಿತಿಯಲ್ಲಿರುವ ಸೇತುವೆ ಪರಿಶೀಲಿಸಿ ಹಳೆಯ ಸೇತುವೆಗೆ ಹೊಸ ಸೇತುವೆ ಜೋಡಿಸಲು ಅವಕಾಶವಿದ್ದರೆ ಅದನ್ನು ಮಾಡುವುದು, ಇಲ್ಲವೇ  ಪೂರ್ಣ ಕೆಡವಿ ಹೊಸ ಸೇತುವೆ ನಿರ್ಮಿಸಲಾಗುವುದು. ಇವರೆಡನ್ನು ಹೊರತುಪಡಿಸಿ ಮೂರನೇ ಪರ್ಯಾಯ ಮಾರ್ಗದ ಕುರಿತು  ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದರು.
 ಸೇತುವೆ ಬಿದ್ದ ಕಾರಣ ಸುತ್ತಲಿನ 10-15 ಗ್ರಾಮಗಳ ವಿದ್ಯಾರ್ಥಿಗಳು, ಸಾರ್ವಜನಿಕರು ತಾಲೂಕು ಕೇಂದ್ರಕ್ಕೆ 8-10 ಕಿ.ಮೀ.ಸುತ್ತು ಹಾಕಿ ಸಂಚರಿಸಬೇಕು. ದುರಸ್ತಿ ಮಾಡಿದರೆ ಈ ಅಂತರ  1 ಕಿ.ಮೀ.ಗೆ ತಗ್ಗಲಿದೆ  ಎಂದು  ಗ್ರಾಪಂ ಸದಸ್ಯರು, ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್,  ಹೊದಿಗೆರೆ ರಮೇಶ್,  ಮಂಜುನಾಥ್ ಪಟೇಲ್, ಗ್ರಾಪಂ ಅಧ್ಯಕ್ಷ ಸುದೀಪ್ ಗೌಡ್ರು, ಸದಸ್ಯ ಎಚ್. ಉಮೇಶ್, ತಾಪಂ ಮಾಜಿ ಸದಸ್ಯ  ಜಿ.ಬಿ. ಹಾಲೇಶ ಗೌಡ್ರು, ಆದಾಪುರದ ವೀರಭದ್ರಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ. ಕುಮಾರ್ ಇತರರಿದ್ದರು.
ರಸ್ತೆ ನಿರ್ಮಾಣಕ್ಕೆ 36 ಕೋಟಿ ರೂ. ಅನುದಾನ
ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ಹರಿಹರ ತಾಲೂಕಿಗೆ ಕಳೆದ 30 ತಿಂಗಳಲ್ಲಿ 36 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳ್ಳೂಡಿ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ರಸ್ತೆಗೆ 36 ಕೋಟಿ ರೂ. ಬಿಡುಗಡೆ ಮಾಡಿದ್ದು, ಮುಂದಿನ ಅವಧಿಯಲ್ಲಿ ಇನ್ನೂ 20 ಕೋಟಿ ರೂ. ನೀಡಲಾಗುವುದು ಎಂದರು. ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ 25ನ್ನು ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆ  ಮಾದರಿಯಲ್ಲಿ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಕಳಿಸಿದ್ದ ಪ್ರಸ್ತಾವನೆಗೆಗೆ ಮಂಜೂರಾತಿ ಸಿಕ್ಕಿಲ್ಲ ಎಂದು ತಿಳಿಸಿದರು.
ನಗರದ ರಾಘವೇಂದ್ರ ಮಠದ ಸಮೀಪ 1886ರಲ್ಲಿ ನಿರ್ಮಿಸಿದ ತುಂಗಭ ದ್ರಾ ಹಳೇ ಸೇತುವೆಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಕುರಿತು ಪರಿಶೀಲಿಸುವುದಗಿ  ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಡಾಂಬರು, ಸಿಮೆಂಟ್ ಬಿಟ್ಟು ಪ್ಲಾಸ್ಟಿಕ್ ವೇಸ್ಟ್ ಬಳಸಿ ರಸ್ತೆ ನಿರ್ಮಿಸುವ ತಂತ್ರಜ್ಞಾನ ವಿದೇಶಗಳಲ್ಲಿ ಅಳವಡಿಸಲಾಗುತ್ತಿದೆ, ಇಲ್ಲಿಯೂ ಅದನ್ನು ಜಾರಿ ಮಾಡುವುದು ಉತ್ತಮ, ಈ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.
ಸಂಚಾರಕ್ಕೆ ಹತ್ತಿರದ ದಾರಿ ಎನಿಸುವಲ್ಲಿನ ಸೇತುವೆ, ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಮಲೆನಾಡಿನ ಹಲವೆಡೆ ನದಿ, ಹಳ್ಳ, ಕೊಳ್ಳಗಳಿಗೆ ಸೇತುವೆ ಇಲ್ಲದೆ ಶಾಲಾ ಮಕ್ಕಳು ಮೂರ‌್ನಾಲ್ಕು ತಿಂಗಳು ಶಾಲೆಗೆ ಹೋಗಲಾರದಂತಾಗುತ್ತಿದೆ. ಅಂತಹ ಕಡೆ ಆದ್ಯತೆ ಮೇರೆಗೆ ಸೇತುವೆ ನಿರ್ಮಿಸಲಾಗುವುದು ಎಂದರು.
ಬಿಹಾರ ಫಲಿತಾಂಶ ಕಾಂಗ್ರೆಸ್‌ಗೆ ಪಾಠ
ಬಿಹಾರ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೊಂದು ಪಾಠ, ಎಲ್ಲೆಲ್ಲಿ ಲೋಪದೋಷವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಹಾರ ಚುನಾವಣೆ ಫಲಿತಾಂಶ ಅನೀರಿಕ್ಷಿತವಾದದ್ದು, ವೋಟ್ ಚೋರಿ ಬಗ್ಗೆ ಮೊದಲಿಂದಲೂ ಆರೋಪ ಕೇಳಿ ಬರುತ್ತದೆ ಎಂದರು.
ಬಿಹಾರದಲ್ಲಿ ಎಲ್ಲರನ್ನು ಒಗ್ಗೂಡಿಸಲು ಸಾಧ್ಯವಿಲ್ಲ, ಆದರೆ ಕರ್ನಾಟಕದಲ್ಲಿ ಎಲ್ಲ ಅಹಿಂದ ವರ್ಗವನ್ನು ಒಗ್ಗೂಡಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಬದಲಾವಣೆ ಇಲ್ಲ: ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಸದ್ಯಕ್ಕಿಲ್ಲ. ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ವಿಸ್ತರಣೆ ಮಾಡುವ ಸಂದರ್ಭದಲ್ಲಿ ವಾಲ್ಮೀಕಿ ಸಮಾಜಕ್ಕೆ ಇನ್ನೂ ಎರಡು ಸ್ಥಾನ ನೀಡುವಂತೆ ಒತ್ತಾಯ ಮಾಡಲಾಗಿದೆ ಎಂದು  ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.