ಜಗಳೂರಿನಲ್ಲಿ ಸೋಮವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಸ್‌ಪಿ ಎಚ್.ಟಿ. ಶೇಖರ್ ಇದ್ದರು.MP
- ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಪ್ರಗತಿ ಪರಿಶೀಲನಾ ಸಭೆ
- ರಸ್ತೆ ದುರಸ್ತಿಗೆ ತಾಕೀತು
ಜಗಳೂರು: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ವಿಳಂಬ ಮಾಡುತ್ತಿರುವುದಲ್ಲದೆ, ಪೈಪ್‌ಲೈನ್ ಅಳವಡಿಕೆಗಾಗಿ ಪ್ರಮುಖ ಸಿಸಿ ರಸ್ತೆಗಳನ್ನು ಅಗೆಯಲಾಗಿದೆ. ಈ ಎಲ್ಲ ರಸ್ತೆಗಳನ್ನು ಶೀಘ್ರ ದುರಸ್ತಿಪಡಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸಾವಿರಾರು ರೂ. ಲಂಚ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿವೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಇನ್ಮುಂದೆ ಆಸ್ಪತ್ರೆಗಳ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯಾಗಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಶಿಥಿಲಗೊಂಡ ಸರ್ಕಾರಿ ಶಾಲೆಗಳು, ಮಂಜೂರಾದ ಹೊಸ ಕಟ್ಟಡಗಳು, ಶಿಕ್ಷಕರ ಕೊರತೆ ಹಾಗೂ ಪಿಎಂಶ್ರೀ ಶಾಲೆಗಳ ಪ್ರಗತಿ, ಮೈದಾನ, ಶೌಚಗೃಹ ಮತ್ತು ಪ್ರಯೋಗಾಲಯಗಳ ಸ್ಥಿತಿಗತಿ ಕುರಿತ ಸಂಪೂರ್ಣ ವರದಿ ಸಲ್ಲಿಸುವಂತೆ ಡಿಡಿಪಿಐ ಅವರಿಗೆ ತಾಕೀತು ಮಾಡಿದರು. ಇದೇ ವೇಳೆ, ಕೊಟ್ಟೂರು-ಜಗಳೂರು-ಚಿತ್ರದುರ್ಗ ರೈಲ್ವೆ ಮಾರ್ಗದ ಕುರಿತು ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಎಂ.ಜಿ. ಗಂಗಾಧರಸ್ವಾಮಿ ಮಾತನಾಡಿ, ಬರಗಾಲ ಎದುರಾಗುವ ಮುನ್ಸೂಚನೆ ಇದ್ದು, ರೈತರು ಹವಾಮಾನ ಆಧಾರಿತ ಪರ್ಯಾಯ ಬೆಳೆ ಬೆಳೆಯಲು ಅಧಿಕಾರಿಗಳು ಪ್ರೋತ್ಸಾಹಿಸಬೇಕು. ಸದ್ಯಕ್ಕೆ ರೈತರು ಹೊಸದಾಗಿ ಅಡಕೆ ನಾಟಿ ಮಾಡುವುದು ಬೇಡ. ದಾವಣಗೆರೆ-ಬೆಂಗಳೂರು ರೈಲ್ವೆ ಲೈನ್ ಯೋಜನೆ ಕುರಿತು ಈಗಾಗಲೇ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಶಿಥಿಲಗೊಂಡ ಶಾಲಾ ಕಟ್ಟಡಗಳ ಮೇಲ್ಛಾವಣಿ ಕುಸಿದು ಅನಾಹುತ ಸಂಭವಿಸಿದರೆ ಇಂಜಿನಿಯರ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೇ ನೇರ ಹೊಣೆ. ಈಗಾಗಲೇ ಲೋಕಾಯುಕ್ತ ದಾಳಿ ಹಾಗೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ನಾಲ್ವರು ಪಿಡಿಒಗಳನ್ನು ಅಮಾನತುಗೊಳಿಸಿ, ಕ್ಯುಮುಲೇಟಿವ್ ಇನ್‌ಕ್ರಿಮೆಂಟ್ ಕಟ್ ಮಾಡಲಾಗಿದೆ ಎಂದು ಎಚ್ಚರಿಸಿದರು.
ಜಿಪಂ ಅಧಿಕಾರಿಗಳು, ಜಿಲ್ಲಾ ಅರಣ್ಯಾಧಿಕಾರಿ ಹರ್ಷವರ್ಧನ್, ತೋಟಗಾರಿಕಾ ಇಲಾಖೆ ಜೆಡಿ ರಾಘವೇಂದ್ರಪ್ರಸಾದ್, ಕೃಷಿ ಇಲಾಖೆ ಜೆಡಿ ಜಿಯಾಉಲ್ಲಾ ಸೇರಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಜಿಪಂ ಕಾರ್ಯದರ್ಶಿಗಳು, ಉಪ ಕಾರ್ಯದರ್ಶಿಗಳು, ದಿಶಾ ಸಮಿತಿ ಸದಸ್ಯರಾದ ರೇವಣಸಿದ್ದಪ್ಪ, ಮೂರ್ತೆಪ್ಪ, ಚಂದ್ರಶೇಖರ್, ಸುವರ್ಣ ಇದ್ದರು.
ಹೊಸ ಶಾಲಾ ಕಟ್ಟಡಗಳು 5 ವರ್ಷವೂ ಬಾಳಿಕೆ ಬರುವುದಿಲ್ಲವೇ?
ಶಾಲಾ ಕಟ್ಟಡ ನಿರ್ಮಿಸಿದ ಕೇವಲ ಒಂದು ವರ್ಷದೊಳಗೇ ಮಳೆಗೆ ಸೋರಲು ಹೇಗೆ ಸಾಧ್ಯ? ಗುಣಮಟ್ಟವಿಲ್ಲದ ಕಾಮಗಾರಿಗಳನ್ನು ನಾನು ಸಹಿಸುವುದಿಲ್ಲ. ಸಂಸದರ ನಿಧಿಯಿಂದ ಹೊಸ ಕಟ್ಟಡ ಕಟ್ಟಿದ ತಕ್ಷಣವೇ ಮೇಲೆ ಶೀಟ್ ಹಾಕಿಕೊಡಿ ಎಂದು ಕೇಳುತ್ತಾರೆ. ಒಂದು ಕಟ್ಟಡ ಕನಿಷ್ಠ ಐದು ವರ್ಷವಾದರೂ ಸುಸ್ಥಿತಿಯಲ್ಲಿ ಇರಬೇಕು. ಕಾಮಗಾರಿ ನಡೆಯುವಾಗ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ಸೂಕ್ಷ್ಮವಾಗಿ ಗಮನಹರಿಸಬೇಕು ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಜಗಳೂರಿನಲ್ಲಿ ಜೂಜಾಟಕ್ಕೆ ಬ್ರೇಕ್ ಹಾಕಿ!
ಜಗಳೂರು ತಾಲೂಕಿನಲ್ಲಿ ಹೊರ ಜಿಲ್ಲೆಗಳ ಜೂಜುಕೋರರು ಬಂದು ಜೂಜಾಟ ದಂಧೆ ನಡೆಸುತ್ತಿದ್ದಾರೆ. ಇದರಿಂದ ಇಲ್ಲಿನ ಬಡ ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಸಾರ್ವಜನಿಕರೇ ಪೊಲೀಸ್ ಠಾಣೆ ಮುಂದೆ ಬಂದು ಕೂರಬೇಕಾಗುತ್ತದೆ ಎಂದು ಶಾಸಕ ದೇವೇಂದ್ರಪ್ಪ ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ಈಗಾಗಲೇ 160 ಜೂಜು ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಕುಮ್ಮಕ್ಕು ನೀಡುವ ಸಿಬ್ಬಂದಿ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
"
ಜಗಳೂರಿನ ಶಿಥಿಲ ಆಸ್ಪತ್ರೆ ಜಾಗದಲ್ಲಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ 50 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಜಿಲ್ಲಾಧಿಕಾರಿಗಳು 5 ಎಕರೆ ಭೂಮಿ ಮಂಜೂರು ಮಾಡಿದ್ದಾರೆ. ಆದರೆ ಅಧಿಕಾರಿಗಳು ಇಲ್ಲದ ಕಾನೂನು ನಿಯಮ ಹೇಳಿ ಕಾಲಹರಣ ಮಾಡಿದ್ದಾರೆ. ಈಗ ನೂತನ ಆರೋಗ್ಯ ಸಚಿವರು ಒಪ್ಪಿಗೆ ನೀಡಿದ್ದು, ಶೀಘ್ರ ಟೆಂಡರ್ ಆಗಲಿದೆ. ತಾಲೂಕಿನಲ್ಲಿ ದಿನಕ್ಕೆ ನಾಲ್ಕು ಹೆರಿಗೆಯಾದರೆ ಮಾತ್ರ 24 ಗಂಟೆ ಆಂಬುಲೆನ್ಸ್ ಸೇವೆ ನೀಡುತ್ತೇವೆ ಎನ್ನುವ ಇಲಾಖೆಯ ನಿಯಮ ಅವೈಜ್ಞಾನಿಕ. ಈ ವ್ಯವಸ್ಥೆ ಸರಿಯಾಗಬೇಕು.
— ಬಿ. ದೇವೇಂದ್ರಪ್ಪ ಶಾಸಕ.