ದಾವಣಗೆರೆಯಲ್ಲಿ ಭಕ್ತಸ್ತೋಮದ ನಡುವೆ ಬನಶಂಕರಿ ದೇವಿಯ ಬ್ರಹ್ಮ ರಥೋತ್ಸವ.  
ದಾವಣಗೆರೆ

ಬನಶಂಕರಿಯ ಅದ್ದೂರಿ ಬ್ರಹ್ಮ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ
  • ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರ ದಂಡು
  • ಇಡೀ ದಿನ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ
ದಾವಣಗೆರೆ: ಇಲ್ಲಿನ ರಾಜೇಂದ್ರ ಬಡಾವಣೆಯ ಶ್ರೀ ಬನಶಂಕರಿ ದೇವಸ್ಥಾನ ಸಮಿತಿ ವತಿಯಿಂದ 13ನೇ ವರ್ಷದ ಬನದ ಹುಣ್ಣಿಮೆ ಅಂಗವಾಗಿ ಶನಿವಾರ ಬನಶಂಕರಿ ದೇವಿಯ ಪ್ರಥಮ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಬಾಳೆಕಂದು, ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ರಥದಲ್ಲಿ ದೇವಿಯ ಉತ್ಸವ ಮೂರ್ತಿ ಕೂರಿಸಲಾಗಿತ್ತು. ಶಕ್ತಿನಗರದ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ರಥದ ಹಗ್ಗ ಎಳೆದ ಜನರು ಸಂಭ್ರಮಿಸಿದರು.
ದಾವಣಗೆರೆಯ ವಿವಿಧ ಬಡಾವಣೆ, ಸುತ್ತಮುತ್ತಲ ಊರುಗಳಿಂದ ಸಮಾಗಮಗೊಂಡಿದ್ದ ಭಕ್ತರು ಜಯಘೋಷ ಹಾಕಿದರು. ದೇವಿಗೆ ಹಣ್ಣು- ತೆಂಗಿನಕಾಯಿ ಸಲ್ಲಿಸಿದರು. ದೇವಿಯಲ್ಲಿ ಪ್ರಾರ್ಥನೆ ನಿವೇದಿಸಿಕೊಂಡರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಆರತಿ ಬೆಳಗುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬನಶಂಕರಿ, ಮಹಿಳೆಯರಿಗೆ ಪ್ರಿಯವಾದ ದೇವತೆ. ನಾನು ಸಹ ದೇವಿಯನ್ನು ಆರಾಧಿಸುತ್ತೇನೆ. ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಧರ್ಮ- ಸಂಸ್ಕೃತಿ ಪಾಲನೆ ಮುಂದಿನ ಪೀಳಿಗೆಗೂ ಉಳಿಸಬೇಕು ಎಂದು ಆಶಿಸಿದರು.
ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಿಯಿಂದ ಸದಾ ದುಷ್ಟರ ದಮನ ಆಗಲಿದೆ. ಬನಶಂಕರಿ ಆರಾಧನೆ ಜಾತ್ಯಾತೀತವಾಗಿದ್ದು ಎಲ್ಲ ವರ್ಗದವರೂ ಇಲ್ಲಿ ಭಾಗಿಯಾಗುತ್ತಾರೆ. ರಥೋತ್ಸವದಲ್ಲಿ ಭಾಗಿಯಾದರೆ ಪುಣ್ಯ ಪ್ರಾಪ್ತವಾಗಲಿದೆ ಎಂದು ಹೇಳಿದರು.
ಚನ್ನಗಿರಿ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ, ಬನಶಂಕರಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಎಸ್. ರಂಗನಾಥ ಮಾತನಾಡಿದರು.
ರೈತ ಮುಖಂಡ ಬಲ್ಲೂರು ರವಿಕುಮಾರ್, ಮಾಜಿ ಮೇಯರ್ ಎಸ್.ಟಿ.ವೀರೇಶ್, ಸೌಭಾಗ್ಯಾ ಮುಕುಂದ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್ ಕಬ್ಬೂರು, ಸಮಾಜದ ಗೌರವಾಧ್ಯಕ್ಷ ಎಂ.ಎಲ್.ಗೋವಿಂದಪ್ಪ ಎಂ.ಎಲ್, ಹಿರೇಗಂಗೂರು ನಾಗಪ್ಪ, ಆರ್.ನರಸಿಂಹಪ್ಪ ಇತರರಿದ್ದರು. ಬೆಳಗ್ಗೆ ಕ್ಷೀರಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ನಡೆಯಿತು.
ವೈಚಾರಿಕ ಸಂಸ್ಕೃತಿ ಬಿತ್ತಲಿ ದೇಗುಲಗಳು
ದೇವಸ್ಥಾನಗಳ ಮೂಲಕವಾಗಿ ಜನರಲ್ಲಿ ಭಕ್ತಿ ಜತೆಗೆ ವೈಚಾರಿಕ ಸಂಸ್ಕೃತಿ ಬೆಳೆಸಬೇಕು. ದಮನಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಚಿಂತಕ ಡಾ. ಎ.ಬಿ. ರಾಮಚಂದ್ರಪ್ಪ ಹೇಳಿದರು.
ದೇವಾಂಗ ಸಮಾಜದ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಉಪನ್ಯಾಸ ನೀಡಿದ ಅವರು, ದೇವಸ್ಥಾನಗಳು ಜನರಲ್ಲಿ ಅರಿವು
ಮೂಡಿಸುವ ಕೈಂಕರ್ಯ ಸಹ ಮಾಡಬೇಕು ಎಂದು ಸಲಹೆ ನೀಡಿದರು.
ಕೇರಳದಲ್ಲಿ ನಾರಾಯಣ ಗುರುಗಳು ಭಕ್ತಿಯ ಜತೆಗೆ ಅಭಿವೃದ್ಧಿಯ ಅರಿವು ಮೂಡಿಸಿದರು. ಇಂದು ದೇವರು ಮತ್ತು ಭಕ್ತರ ನಡುವೆ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಅವರು ಮೂಢನಂಬಿಕೆ ಬೆಳೆಸಿ ಭಕ್ತರ ವೈಚಾರಿಕ ಬೆಳವಣಿಗೆಗೆ ಹಿನ್ನಡೆಯಾಗಿದ್ದಾರೆ ಎಂದು ವಿಷಾದಿಸಿದರು.
ವಚನಕಾರ ದಾಸಿಮಯ್ಯ ಭಕ್ತಿಗೆ ನವ ವ್ಯಾಖ್ಯಾನ ನೀಡುವ ಜತೆಗೆ ಶ್ರಮಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದ ಅವರು, ಆರಾಧನೆಯಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಶುದ್ಧ ಕಾಯಕದಿಂದ ದೇವರು ಒಲಿಯುತ್ತಾನೆಂಬ ತಾತ್ವಿಕತೆ ಆತನ ವಚನಗಳಲ್ಲಿ ಕಾಣಬಹುದು ಎಂದರು.
ದೇವಾಂಗ ಸಮಾಜ, ಮನುಕುಲಕ್ಕೆ ಬಟ್ಟೆ ಕೊಟ್ಟು ಸೌಹಾರ್ದತೆ ಕಾಪಿಟ್ಟುಕೊಂಡು ಬಂದಿದೆ. ಈಗ ಭಕ್ತಿ ಎಂಬುದು ಅಪಾಯದಲ್ಲಿದೆ. ಪುರಾಣ ಮತ್ತು ಇತಿಹಾಸ ಬೇರೆ ಬೇರೆ. ಇತಿಹಾಸ ತಿರುಚುವ ಕೆಲಸ ನಡೆಯುತ್ತಿರುವುದು ಅಪಾಯಕಾರಿ ಎಂದರು.