Channagiri: ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ಒತ್ತಾಯಿಸಿ ಬಿಜೆಪಿ ವತಿಯಿಂದ ಚನ್ನಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
- ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ
- ತಹಸೀಲ್ದಾರ್ ಎನ್.ಜೆ.ನಾಗರಾಜ್ ಅವರಿಗೆ ಮನವಿ
- ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ
ಚನ್ನಗಿರಿ: ಮೆಕ್ಕೆಜೋಳ, ಭತ್ತ ಸೇರಿ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಜಾರಿಗೊಳಿಸಿ, ಖರೀದಿ ಕೇಂದ್ರವನ್ನು ತೆರೆಯುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎನ್.ಜೆ.ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿಂದ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಕೇಂದ್ರ ಸರ್ಕಾರದ ಏಜೆನ್ಸಿಗಳ ಮೂಲಕ ಖರೀದಿಸಿ, ಪ್ರತಿ ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೋರಾಟಕ್ಕೆ ರೈತರ ಪರವಾಗಿ ಇಳಿದ ನಂತರದಲ್ಲಿ ಸರ್ಕಾರ ಸ್ಪಂದಿಸಿ ಕೂಡಲೇ ಪ್ರತಿಕ್ರಿಯೆಯನ್ನು ನೀಡಿದೆ ಎಂದರು.
ಸರ್ಕಾರ ಮೆಕ್ಕೆಜೋಳಕ್ಕೆ ನೀಡಿರುವಂಥ ಬೆಂಬಲ ಬೆಲೆ ಸಾಲುವುದಿಲ್ಲ. ರೈತರು ಸಂತೃಪ್ತಿ ಹೊಂದುವಂತೆ ನೀಡಬೇಕು.
ಮೋದಿ ಅವರು ಪ್ರಧಾನಿಯಾದ ಸಮಯದಲ್ಲಿ ಅನಂತಕುಮಾರ್, ರಸಗೊಬ್ಬರ ಸಚಿವರಾಗಿದ್ದರು. ರೈತರು ಬಳಕೆ ಮಾಡುವಂಥ ಯೂರಿಯಾ ಗೊಬ್ಬರದಲ್ಲಿ ಕೆಲ ಲೋಪಗಳು ಕಂಡು ಬಂದ ತಕ್ಷಣ ಬದಲಿಸುವಂತ ಕೆಲಸ ಮಾಡಲಾಯಿತು ಎಂದು ತಿಳಿಸಿದರು.
ಸರ್ಕಾರಗಳು ರೈತರಿಗೆ ಸ್ಪಂದಿಸದಿದ್ದರೆ ಅವರು ಬೀದಿಗೆ ಬರಬೇಕಾಗುತ್ತದೆ. ರಾಜ್ಯದಲ್ಲಿ ಬಂಗಾರಪ್ಪ, ಯೂಡಿಯೂರಪ್ಪ ಮುಖ್ಯಮಂತ್ರಿಯಾಗಿ ರೈತರ ಪರವಾಗಿ ಕೆಲಸ ಮಾಡಿದರು.
ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಮಯದಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದರು. ಈ ಬಾರಿ ಸಿಎಂ ಆದ ನಂತರದಲ್ಲಿ ಯಾರ ಕಪಿಮುಷ್ಠಿಯಲ್ಲಿ ಇದ್ದಾರೋ ಗೊತ್ತಿಲ್ಲ. ಆತ್ಮವಂಚನೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ರಾಜ್ಯದ ಜನತೆಗಾಗಿ ಆಡಳಿತವನ್ನು ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಡಿ.ಸಿ.ಕುಮಾರಸ್ವಾಮಿ, ಹೆಬ್ಬಳಗೆರೆ ಕೆಂಚಪ್ಪ, ನಲ್ಲೂರು ರುದ್ರೇಗೌಡ್ರು, ನಿವೃತ್ತ ಪ್ರಾಚಾರ್ಯ ಶಿವಣ್ಣ, ಕಂಚಿಗನಾಳು ರವಿಕುಮಾರ್, ರಂಗಸ್ವಾಮಿ, ಕಾಯಿ ಮಂಜಣ್ಣ, ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಿದೇವಮ್ಮ, ಸದಸ್ಯೆ ಕಮಲ ಹರೀಶ್, ಪಟ್ಲಿ ನಾಗರಾಜ್, ರೂಪ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷೆ ಶಶಿಕಲಾ, ತರಕಾರಿ ಮಂಜು ಇತರರಿದ್ದರು.