ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಜತೆ ರಾಜನಹಳ್ಳಿ ಶಿವಕುಮಾರ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್ ಇದ್ದರು.
- ಮುಖಂಡ ಯಶವಂತರಾವ್ ಜಾಧವ್ ಹೇಳಿಕೆ
- ಇನ್ನೆರಡು ವರ್ಷ ಕ್ಷೇತ್ರದಲ್ಲಿ ನಿರಂತರ ಹೋರಾಟ
- ಮುಂದಿನ ದಿನದಲ್ಲಿ ಶಾಮನೂರು ಕುಟುಂಬಕ್ಕೆ ಪಾಠ
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಕಾರ್ಯಕರ್ತರು ಎದೆಗುಂದಬೇಕಿಲ್ಲ. ನಿಮ್ಮ ಜತೆ ಮುಖಂಡರಿದ್ದೇವೆ. ಪಕ್ಷದ ಸಂಘಟನೆಗೆ ಎರಡು ವರ್ಷಗಳ ಕಾಲ ನಿರಂತರ ಹೋರಾಟದಲ್ಲಿ ತೊಡಗಿಕೊಳ್ಳೋಣ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ದಾವಣಗೆರೆ ದಕ್ಷಿಣ ಮತದಾರರು 63870 ಮತಗಳನ್ನು ನೀಡಿ ಬಿಜೆಪಿಗೆ ಶಕ್ತಿ ತುಂಬಿದ್ದಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಅಂತರ 27800ರಷ್ಟಿತ್ತು. ಈ ಬಾರಿ 5708ಕ್ಕೆ ಅಂತರ ಕುಗ್ಗಿದೆ. ಸೋಲಿನಿಂದ ಕಾರ್ಯಕರ್ತರಿಗೆ ಆಗಿರುವ ದುಃಖ ದೊಡ್ಡದು. ಹಣ, ಅಧಿಕಾರ ಯಾವುದಕ್ಕೂ ಆಸೆ ಪಡದೆ ಕೆಲಸ ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮನೆ ಎದುರು ಪಟಾಕಿ ಹಚ್ಚಿದರು. ಈ ಬಗ್ಗೆ ನನಗೆ ಸಿಟ್ಟು, ಬೇಸರವಿಲ್ಲ. ಸಚಿವ, ಸಂಸದ, ಶಾಸಕ ಮೂವರು ಒಂದೇ ಕುಟುಂಬದವರು. ಆದರೆ ನನ್ನಂತಹ ಬಿಜೆಪಿ ಮುಖಂಡರು ಬಡತನದಿಂದ ಬಂದವರು. ನಮ್ಮೆಲ್ಲರ ಪಾಲಕರು ಅಧಿಕಾರಸ್ಥರಲ್ಲ. ನಾವು ಯಾರೂ ಬಾಲ ಹಿಡಿದು ಬೆಳೆದಿಲ್ಲ. ಸೋಲಿಗೆ ಅಂಜಿ ಹೋಗುವವರಲ್ಲ ಎಂದರು.
ಮೂರು ವರ್ಷಗಳಿಂದ ಸಚಿವರಿಗೆ 1 ರೂ. ವಿಶೇಷ ಅನುದಾನ ತರಲು ಸಾಧ್ಯವಾಗಿಲ್ಲ. ಸರ್ಕಾರ ದಕ್ಷಿಣ ಕ್ಷೇತ್ರಕ್ಕೆ ಚುನಾವಣೆ ಗಿಮಿಕ್ ಆಗಿ 100 ಕೋಟಿ ರೂ. ನೀಡಿದೆ. ಒಳ್ಳೆಯ ಕೆಲಸಕ್ಕೆ ಬಿಜೆಪಿ ಬೆಂಬಲಿಸಲಿದೆ. ಕಾಂಗ್ರೆಸ್‌ನ ಅಕ್ರಮಗಳ ವಿರುದ್ಧ ಹೋರಾಡುತ್ತೇವೆ. ಬಿಜೆಪಿಗರಿಗೆ ಯಾವ ಹೆದರಿಕೆಯೂ ಇಲ್ಲ ಎಂದ ಅವರು, ಎರಡು ವರ್ಷಗಳಲ್ಲಿ ಮರುಚುನಾವಣೆ ಬರಲಿದ್ದು, ಜನರು ಶಾಮನೂರು ಕುಟುಂಬಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬಹಿರಂಗ ಪ್ರಚಾರ ಮುಗಿದ ನಂತರವೂ ಸಚಿವರು ನಿಯಮ ಮೀರಿ ಪ್ರತಿ ಮತಗಟ್ಟೆಗೆ ಹೋದರು. ಸಚಿವರು ಅಕ್ರಮವಾಗಿ ಚುನಾವಣೆ ಎದುರಿಸಿದ್ದಾರೆ. ಮಾಹಿತಿ ನೀಡಿದ್ದರೂ ಎಸ್ಪಿ ಹಾಗೂ ಚುನಾವಣಾಧಿಕಾರಿಗಳು ಸೂಕ್ತ ಕಾರ್ಯ ನಿರ್ವಹಿಸಲಿಲ್ಲ. ಅರ್ಜಿ ಕೊಡಲು ಹೋದರೆ ಚುನಾವಣಾಧಿಕಾರಿ ಕಚೇರಿ ಬಾಗಿಲು ಹಾಕಿರುತ್ತಿದ್ದರು ಎಂದು ದೂರಿದರು.
ಭದ್ರತಾ ಕೊಠಡಿಯ ಬೀಗ ವ್ಯತ್ಯಾಸ ಆಗಿದೆ. ಇದಕ್ಕೆ ಚುನಾವಣಾಧಿಕಾರಿಯೇ ಹೊಣೆ ಎಂದು ದೂರಿದ ಅವರು, ಬೀಗ ಕಳೆದಿದೆ ಎಂದು ಚಿಲಕ ಒಡೆದದ್ದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ನಡೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ರಾಜು ಗೌಡ ಇದ್ದರು.
ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಜತೆ ರಾಜನಹಳ್ಳಿ ಶಿವಕುಮಾರ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್ ಇದ್ದರು.