ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಮಾಜಿ ಶಾಸಕ ಎಸ್. ರಾಮಪ್ಪ, ದಿನೇಶ್ ಕೆ. ಶೆಟ್ಟಿ, ಅನಿತಾಬಾಯಿ ಮಾಲತೇಶ್, ನಿಖಿಲ್ ಕೊಂಡಜ್ಜಿ, ಅಯೂಬ್ ಪೈಲ್ವಾನ್. ಕೆ.ಜಿ. ಶಿವಕುಮಾರ್, ಎಸ್. ಮಲ್ಲಿಕಾರ್ಜುನ್ ಇದ್ದರು. 
ದಾವಣಗೆರೆ

ಪ್ರಜಾಪ್ರಭುತ್ವದ ಬುಡ ಅಲ್ಲಾಡಿಸುವ ಬಿಜೆಪಿ

ಪ್ರಮುಖ ಮುಖ್ಯಾಂಶಗಳು

  • ತಾಳಕ್ಕೆ ತಕ್ಕಂತೆ ಕುಣಿವ ಸ್ವಾಯತ್ತ ಸಂಸ್ಥೆಗಳು
  • ಕಾಂಗ್ರೆಸ್ ಸಭೆಯಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಕಿಡಿ
  • ಕಾರ್ಯಕರ್ತರು ಎಸ್‌ಐಆರ್ ಬಗ್ಗೆ ಜಾಗ್ರತೆ ವಹಿಸಲಿ
ದಾವಣಗೆರೆ: ಬಿಜೆಪಿ ಸರ್ಕಾರ ಬಂದ ನಂತರದಲ್ಲಿ ಎಸ್‌ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ನೆಪದಲ್ಲಿ ಪ್ರಜಾಪ್ರಭುತ್ವದ ಬುಡವನ್ನೇ ಅಲ್ಲಾಡಿಸುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಕಿಡಿ ಕಾರಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ, ಕಾರ್ಯಕರ್ತರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಎಸ್‌ಐಆರ್ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ. ಇದು ಚುನಾವಣೆ ಗೆಲುವಿಗಾಗಿ ಮಾತ್ರವಲ್ಲದೆ ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿನ ಪ್ರಯತ್ನವಾಗಿದೆ. ಬಿಜೆಪಿ ಉದ್ದೇಶಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅವಕಾಶ ಮಾಡಿಕೊಡಬಾರದು ಎಂದರು.
ಮೊದಲೆಲ್ಲ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮದ ಮೂಲಕ ಅತಿ ಹೆಚ್ಚಿನ ಮತದಾರರು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿದೆ. ಅವೆಲ್ಲವೂ ಆ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಚುನಾವಣಾ ಆಯೋಗ ಕೂಡ ಇದರಿಂದ ಹೊರತಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಪ್ರಾಮಾಣಿಕ, ಪಾರದರ್ಶಕ ಚುನಾವಣೆ ನಡೆಸಬೇಕು. ಹಾಗಾದಲ್ಲಿ ಪ್ರಜಾಪ್ರಭುತ್ವ ಸದೃಢವಾಗಿ ಇರಲಿದೆ. ಆದರೆ ಅದರ ತದ್ವಿರುದ್ಧದ ಪ್ರಯತ್ನ ನಡೆದಿದೆ. ಚುನಾವಣೆಯಲ್ಲಿ ಅವ್ಯವಹಾರ ಆಗದಂತೆಯೂ, ಮತದಾರರ ಪಟ್ಟಿಯಲ್ಲಿ ಅರ್ಹರು ಕೈಬಿಟ್ಟು ಹೋಗದಂತೆಯೂ ಕಾರ್ಯಕರ್ತರು ಜಾಗ್ರತೆ ವಹಿಸಬೇಕು ಎಂದರು.
ಪ್ರತಿ ಕ್ಷೇತ್ರದಲ್ಲಿ ಮತದಾರರಿಗೂ ಬಿಎಲ್‌ಒಗಳು ತಲಾ ಎರಡು ಎಲುಮರೇಷನ್ ಅರ್ಜಿಗಳನ್ನು ನೀಡಲಿದ್ದಾರೆ. ಅವನ್ನು ಕ್ರಮಬದ್ಧವಾಗಿ ಹಾಗೂ ಸರಿಯಾಗಿ ಭರ್ತಿ ಮಾಡಬೇಕಿದೆ. ಈ ದಿಸೆಯಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು, ಗ್ರಾಮದ ಮುಖಂಡರು ಮನೆ ಮನೆಗೆ ತೆರಳಿ ಸರಿಯಾದ ಮಾರ್ಗದರ್ಶನ ಮಾಡಬೇಕಿದೆ.
ಸರಿಯಾದ ವಿವರ ಭರ್ತಿ ಮಾಡಿದಲ್ಲಿ ಆಯಾ ಮತದಾರರ ಹೆಸರು ಆ.5ರಂದು ಬಿಡುಗಡೆಯಾಗುವ ಕರಡು ಪಟ್ಟಿ ಹಾಗೂ ನಂತರದಲ್ಲಿ ಅಂತಿಮ ಯಾದಿಯಲ್ಲಿ ಬರಲಿದೆ. ಇಲ್ಲವಾದಲ್ಲಿ ಅವರು ಶಾಶ್ವತವಾಗಿ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದರು.
ಕಾಂಗ್ರೆಸಿರಲಿ, ಅಥವಾ ಬೇರೆ ಪಕ್ಷದ ಮತದಾರರಿರಲಿ ಅವರ ಮತದಾನದ ಹಕ್ಕನ್ನು ಉಳಿಸುವ ಕೆಲಸ ಆಗಬೇಕು. ಚುನಾವಣಾ ಆಯೋಗ ನೀಡಿದ 11 ದಾಖಲೆಗಳಲ್ಲಿ ಒಂದಾದರೂ ದಾಖಲೆ ಇರುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮತದಾರರ ಜಾತಿಪ್ರಮಾಣ ಪತ್ರ, ನಿವಾಸಿ ದೃಢೀಕರಣ ಪತ್ರ ಇರಬೇಕು. ಇದಕ್ಕಾಗಿ ಎಲ್ಲೆಡೆ ಗ್ರಾಪಂಗಳಲ್ಲಿ ತೆರೆಯಲಾದ ಸಹಾಯವಾಣಿ ನೆರವು ಪಡೆಯಬೇಕಿದೆ. ಒಂದು ತಿಂಗಳವಧಿಯಲ್ಲಿ ಈ ಎಲ್ಲ ಕೆಲಸ ಮಾಡಬೇಕಿದೆ. ಎಸ್‌ಐಆರ್ ಕುರಿತ ಗಂಭೀರ ಪ್ರಯತ್ನ ಪಕ್ಷಕ್ಕೆ ಸೀಮಿತವಲ್ಲ. ಇದು ರಾಷ್ಟ್ರದ ವಿಚಾರವಾಗಿದೆ ಎಂಬುದನ್ನು ಕಾರ್ಯಕರ್ತರು ಮರೆಯಬಾರದು ಎಂದರು.
ಕಾಂಗ್ರೆಸ್‌ಗೆ ಕಾರ್ಯಕರ್ತರೇ ಬೆನ್ನೆಲುಬು. ನಿಮ್ಮೆಲ್ಲರ ಶ್ರಮದಿಂದಾಗಿ ಹೆಚ್ಚಿನ ಶಾಸಕರ ಆಯ್ಕೆ, ಅಧಿಕಾರ ಸಿಗುವಂತಾಗಿದೆ. ಹೀಗಾಗಿ ಕಾರ್ಯಕರ್ತರಿಗೆ ನಮ್ಮ ಇಲಾಖೆ ಕಚೇರಿ ಬಾಗಿಲು ಸದಾ ತೆರೆದಿರಲಿದೆ. ಅವರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲಾಗುವುದು ಎಂದೂ ಹೇಳಿದರು.
ಕಳೆದ ಒಂದೂವರೆ ವರ್ಷದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿಲ್ಲ. ಇದರಿಂದ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ನಿಮ್ಮ ನೇತೃತ್ವದಲ್ಲಿ ಪಾಲಿಕೆ, ತಾಪಂ, ಜಿಪಂ ಚುನಾವಣೆಗಳು ನಡೆಯಲಿ ಎಂದು ಮುಖಂಡ ಎ. ನಾಗರಾಜ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ದಕ್ಷಿಣ ಶಾಸಕ ಸಮರ್ಥ್ ಮಲ್ಲಿಕಾರ್ಜುನ್, ಮಾಜಿ ಶಾಸಕ ಎಸ್. ರಾಮಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಮುಖಂಡರಾದ ನಿಖಿಲ್ ಕೊಂಡಜ್ಜಿ, ಅಯೂಬ್ ಪೈಲ್ವಾನ್. ಕೆ.ಜಿ. ಶಿವಕುಮಾರ್, ಎಸ್. ಮಲ್ಲಿಕಾರ್ಜುನ್ ಇದ್ದರು.