ಹೊನ್ನಾಳಿ ತಾಲೂಕಿನ ಎಚ್. ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಗ್ರಾಮ ಸೌಧ ಹಾಗೂ ಅಂಗನವಾಡಿ ಕೇಂದ್ರ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸಿದರು. ಡಿ.ಜಿ. ಶಾಂತನಗೌಡ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಅಬ್ದುಲ್ ಜಬ್ಬಾರ್ ಇತರರಿದ್ದರು.Priyanka Kharge 
ದಾವಣಗೆರೆ

ಕಾರ್ಮಿಕರ ಕೆಲಸಕ್ಕೆ ಕುತ್ತು ತರುತ್ತಿದೆ ಬಿಜೆಪಿ

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಸಚಿವ ಪ್ರಿಯಾಂಕ ಖರ್ಗೆ ಆರೋಪ
  • ನೂತನ ಗ್ರಾಮ ಸೌಧ, ಅಂಗನವಾಡಿ ಕೇಂದ್ರ ಕಟ್ಟಡದ ಉದ್ಘಾಟನೆ
ಹೊನ್ನಾಳಿ: ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗಿದ್ದ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟು, ನೂತನ ವಿಬಿ-ಜಿ ರಾಮ್-ಜಿ ಕಾಯ್ದೆ ಜಾರಿಗೆ ತರುವ ಮೂಲಕ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತೆ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಆರೋಪಿಸಿದರು.
ತಾಲೂಕಿನ ಎಚ್. ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಗ್ರಾಮ ಸೌಧ ಹಾಗೂ ಅಂಗನವಾಡಿ ಕೇಂದ್ರ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನರೇಗಾ ಯೋಜನೆಯು ವಿಶ್ವದಲ್ಲೇ ಅತ್ಯಂತ ಅದ್ಭುತ ಯೋಜನೆಯಾಗಿತ್ತು. ಈ ಹಿಂದೆ ಪ್ರಧಾನಿ ಮೋದಿ ಅವರೇ ಈ ಯೋಜನೆಯನ್ನು ಶ್ಲಾಘಿಸಿದ್ದರು. ಆದರೆ, ಈಗ ಅದರಲ್ಲಿ ಭ್ರಷ್ಟಾಚಾರವಿದೆ ಎಂದು ಹೇಳುವ ಮೂಲಕ ಯೋಜನೆಗೆ ಕತ್ತರಿ ಹಾಕುತ್ತಿದ್ದಾರೆ. ದೇಶದ 13 ಕೋಟಿ ಕಾರ್ಮಿಕರು ಈ ಯೋಜನೆಯನ್ನು ನಂಬಿದ್ದರು. ಆದರೆ ಹೊಸ ಯೋಜನೆಯು ಕಾರ್ಮಿಕರನ್ನು ಗುಲಾಮರನ್ನಾಗಿಸುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಇದರಿಂದ ರಾಜ್ಯದ ಜನತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಭರವಸೆಗಳನ್ನು ಈಡೇರಿಸುವಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಪ್ರತಿಪಾದಿಸಿದರು.
ಎಚ್. ಗೋಪಗೊಂಡನಹಳ್ಳಿಯ ಗ್ರಾಮ ಸೌಧ ಕಟ್ಟಡ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದ ಸಚಿವರು, ಈ ಪಂಚಾಯಿತಿ ಹಾಗೂ ನ್ಯಾಮತಿ ತಾಲೂಕಿನ ಚಟ್ನಹಳ್ಳಿ ಪಂಚಾಯಿತಿಗೆ ತಲಾ 75 ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸುವಂತೆ ಜಿಪಂ ಸಿಇಒ ಅವರಿಗೆ ಸೂಚಿಸಿದರು. ಅನುದಾನಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಆಡಳಿತಾವಧಿ ಮುಗಿದಿದೆ. ಗ್ರಾಮಗಳ ಅಭಿವೃದ್ಧಿ ಕುಂಠಿತವಾಗಬಾರದು ಎಂದರೆ ಸರ್ಕಾರ ಕೂಡಲೇ ಪಂಚಾಯಿತಿ ಸೇರಿ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು. ಎಂಎಲ್‌ಸಿಗಳಾದ ಡಾ. ಧನಂಜಯ ಸರ್ಜಿ, ಅಬ್ದುಲ್ ಜಬ್ಬಾರ್, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಸರ್ಕಾರದ ಆರ್‌ಡಿಪಿ ಪ್ರಧಾನ ಕಾರ್ಯದರ್ಶಿ ಸಮೀರಶುಕ್ಲ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ತಹಸೀಲ್ದಾರ್ ರಾಜೇಶಕುಮಾರ್, ತಾಪಂ ಇಒ ಡಿ.ಜಿ. ಅಶೋಕ್, ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ ಇತರರು ಇದ್ದರು.

ಇಚ್ಛಾಶಕ್ತಿಗೆ ಶ್ಲಾಘನೆ

ಸುಸಜ್ಜಿತವಾದ ಗ್ರಾಮ ಪಂಚಾಯಿತಿ ಸೌಧವನ್ನು ಕಟ್ಟಲು ಸಾಧ್ಯವಾಗದಿದ್ದರೆ ನಮ್ಮ ಹೊಲ ಮಾರಿಯಾದರೂ ಸರಿ, ಕಟ್ಟಡ ಪೂರೈಸುತ್ತೇವೆ ಎಂದು ನಿರ್ಧರಿಸಿ ಕೆಲಸ ಮಾಡಿದ ಗ್ರಾಪಂ ಸದಸ್ಯರ ಇಚ್ಛಾಶಕ್ತಿ ನಿಜಕ್ಕೂ ಶ್ಲಾಘನೀಯ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ. ಶಾಂತನಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಪಂ ನೂತನ ಕಟ್ಟಡವನ್ನು ಸದಸ್ಯರು ಹಾಗೂ ಗ್ರಾಮಸ್ಥರು ಬಹಳ ಕಷ್ಟಪಟ್ಟು ನಿರ್ಮಿಸಿದ್ದಾರೆ. 15ನೇ ಹಣಕಾಸು ಯೋಜನೆಯಡಿ ತಾಲೂಕಿಗೆ ಬರಬೇಕಾದ ಅನುದಾನ ಬಂದಿಲ್ಲ. ಹೀಗಾಗಿ ಸಚಿವರು ವಿಶೇಷ ಆಸಕ್ತಿ ವಹಿಸಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕು ಎಂದರು.