ಜಗಳೂರಿನಲ್ಲಿ ಗುರುವಾರ ವಿದ್ಯುತ್ ಸರಬರಾಜು ನಿಗಮದ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು. ಎಇಇ ಮಲ್ಲಿಕಾರ್ಜುನ, ನಾಗಭೂಷಣ್, ಎಇ ಶ್ರೀಧರ್, ಎಇ ಅಭಿಷೇಕ್, ಜೆಇ ರಂಗನಾಥ್ ಇತರರಿದ್ದರು. bescom
- ವಿದ್ಯುತ್ ನಿಗಮ ಖಾಸಗೀಕರಣಕ್ಕೆ ವಿರೋಧ
- ಸಿಬ್ಬಂದಿ ಅಸಮಧಾನ
ಜಗಳೂರು: ವಿದ್ಯುತ್ ಸರಬರಾಜು ನಿಗಮ ಖಾಸಗೀಕರಣ ಹಾಗೂ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಗುರುವಾರ ಬೆಸ್ಕಾಂ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. bescom
ಪಟ್ಟಣ ಬೆಸ್ಕಾಂ ಕಚೇರಿ ಮುಂಭಾಗದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೌನ ಪ್ರತಿಭಟನೆ ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ಮಹಾತ್ಮ ಗಾಂಧಿ ಹಳೆ ವೃತ್ತ ಸೇರಿತು.
ಬೆಸ್ಕಾಂ ಎಇಇ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡಲು ಖಾಸಗಿ ಸಂಸ್ಥೆ ಮನವಿ ಸಲ್ಲಿಸಿದೆ. ಇದು ಮುಂದುವರಿದಲ್ಲಿ ಸಾರ್ವಜನಿಕರು, ಸಿಬ್ಬಂದಿಗೆ ತೊಂದರೆಯಾಗಲಿದೆ. ಸರ್ಕಾರ ಅನುಷ್ಠಾನ ಮಾಡಿದ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಿಂದ ಸಾಕಷ್ಟು ವಿದ್ಯುತ್ ಬಿಲ್ ಬರಬೇಕಾಗಿದೆ. ಸರ್ಕಾರದ ಅನುದಾನ ಸರಿಯಾಗಿ ಬಳಸಿಕೊಂಡು ಬೆಸ್ಕಾಂ ಸುಸ್ಥಿತಿಯಲ್ಲಿದೆ ಎಂದರು.
ಖಾಸಗೀರಣದಿಂದಾಗಿ ವಿದ್ಯುತ್ ದರ ಹೆಚ್ಚಾಗಲಿದೆ. ರೈತರಿಗೆ ಕೊಡುವ ಉಚಿತ ವಿದ್ಯುತ್ ನಿಲ್ಲಿಸಿ ಮೀಟರ್ ಅಳವಡಿಸಲಾಗುತ್ತದೆ. ಅನೇಕ ಯುವಕರು ಉದ್ಯೋಗ ಕಳೆದುಕೊಳ್ಳುವ ಭಯವಿದೆ. ನೌಕರರ ಮುಂಬಡ್ತಿ ಹಿನ್ನಡೆಯಾಗುತ್ತದೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು, ನೌಕರರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ಮನವಿ ಮಾಡಿದರು.
ಬೆಸ್ಕಾಂ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗಭೂಷಣ್ ಮಾತನಾಡಿ, ಇಲಾಖೆಯ ಸಿಬ್ಬಂದಿ ಸಾರ್ವಜನಿಕ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಉಂಟಾಗದಂತೆ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಇದೀಗ ಖಾಸಗೀಕರಣ ಮಾಡಿದಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದರು.
ಎಇ ಶ್ರೀಧರ್, ಎಇ ಅಭಿಷೇಕ್, ಜೆಇ ರಂಗನಾಥ್, ಸನತ್, ಆಂಜನೇಯ, ಶಿವಶಂಕರ್, ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಎಸ್ಸಿ, ಎಸ್ಟಿ ಸಂಘದ ಮುಖಂಡ ಸಿ.ಎಸ್. ಲೋಕೇಶ್, ಅಶೋಕ್, ರಾಜು, ಸಿದ್ದನಾಯ್ಕ, ಸಂದೀಪ್, ಸುನೈನ, ಬೋರನಾಯಕ, ರೂಪಾ ಇತರರಿದ್ದರು.