ದಾವಣಗೆರೆಯ ಸಿದ್ಧಗಂಗಾ ಶಾಲಾವರಣದಲ್ಲಿ ಡ್ರಗ್ಸ್‌ಮುಕ್ತ ಕರ್ನಾಟಕ ಅಭಿಯಾನದ ರಥ ತಲುಪಿದ ಸಂದರ್ಭದಲ್ಲಿ ಡಿ.ಎಸ್. ಜಯಂತ್ ಮಾತನಾಡಿದರು. ಡಿ.ಎಸ್. ಹೇಮಂತ್, ಸತೀಶ್ ಪೂಜಾರಿ, ಎಸ್.ಟಿ. ವೀರೇಶ್, ಗಿರೀಶ್ ದೇವರಮನಿ, ಎಂ.ಜಿ.ಶ್ರೀಕಾಂತ್, ನಾಗರಾಜ ಸುರ್ವೆ ಇತರರಿದ್ದರು.  
ದಾವಣಗೆರೆ

ದೇಶಸೇವೆ ಮೂಲಕ ನಿಜ ಹೀರೋಗಳಾಗಿ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಸಿದ್ದಗಂಗಾ ಶಾಲೆಯ ಡಾ.ಡಿ.ಎಸ್. ಜಯಂತ್ ಹೇಳಿಕೆ
  • ಡ್ರಗ್ಸ್‌ಮುಕ್ತ ಕರ್ನಾಟಕ ಅಭಿಯಾನ ರಥಕ್ಕೆ ಸ್ವಾಗತ
  • ವ್ಯಸನದಿಂದ ಹೆಚ್ಚಲಿವೆ ಅಪರಾಧ ಚಟುವಟಿಕೆಗಳು
ದಾವಣಗೆರೆ: ವಿದ್ಯಾರ್ಥಿಗಳು ಸಮಾಜಸೇವೆ, ದೇಶಸೇವೆ ಮೂಲಕ ನಿಜಜೀವನದ ಹೀರೋ ಆಗಬೇಕು ಎಂದು ಸಿದ್ಧಗಂಗಾ ಪಪೂ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್ ಹೇಳಿದರು.
ಮಾದಕ ವ್ಯಸನ ವಿರುದ್ಧದ ಜಾಗೃತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಿವರ್ತನ ಟ್ರಸ್ಟ್ ರಾಜ್ಯವ್ಯಾಪಿ ಆರಂಭಿಸಿರುವ ಡ್ರಗ್ಸ್‌ಮುಕ್ತ ಕರ್ನಾಟಕ ಅಭಿಯಾನದ ರಥ ಶುಕ್ರವಾರ ಸಿದ್ಧಗಂಗಾ ಶಾಲೆಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದರು.
ಮಾದಕ ವ್ಯಸನಮುಕ್ತ ದೇಶಕ್ಕಾಗಿ ಶ್ರಮಿಸುವುದು ಕೂಡ ಒಂದು ಹೋರಾಟ. ನಿಮ್ಮ ಪರಿಸರದಲ್ಲಿ ಮಾದಕ ವ್ಯಸನಿಗಳಿದ್ದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಕರೆ ಮಾಡಿ ಮಾಹಿತಿ ನೀಡಬೇಕು. ಡ್ರಗ್ಸ್ ಬಗ್ಗೆ ನೀವು ಜಾಗೃತರಾಗುವ ಜತೆಗೆ ಇತರರೂ ಇದರ ದಾಸರಾಗುವುದನ್ನು ತಡೆಗಟ್ಟುವುದು ಭಾರತೀಯ ನಾಗರಿಕರಾದ ನಿಮ್ಮ ಜವಾಬ್ದಾರಿಯೂ ಆಗಿದೆ ಎಂದರು.
ಪಠ್ಯದಲ್ಲಿ ಮಾದಕ ವಸ್ತುಗಳ ಪರಿಚಯವಿದೆ. ಕ್ಯಾನ್ಸರ್ ಚಿಕಿತ್ಸೆಗೆ ವೈದ್ಯಕೀಯವಾಗಿ ಇದನ್ನು ನೋವು ನಿವಾರಕ ಆಗಿಯೂ ಬಳಸಲಾಗುತ್ತಿದೆ. ಆದರೆ ಬೇರೆ ರಾಸಾಯನಿಕ ಬಳಸಿ ಡ್ರಗ್ಸ್ ಅದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿಸುವ ಮಾಫಿಯಾ ನಡೆದಿದೆ. ಸಂಬಂಧಪಟ್ಟವರಿಗೆ ಮಾಹಿತಿ ನೀಡುವ ಮೂಲಕ ಸಮಾಜಘಾತುಕ ಶಕ್ತಿ, ಅಹಿತಕರ ಘಟನೆಗಳು ಆಗದಂತೆ ಗಮನ ಹರಿಸಬೇಕು ಎಂದು ಹೇಳಿದರು.
ಒಮ್ಮೆ ಮಾದಕ ವ್ಯಸನಕ್ಕೆ ಈಡಾದರೆ ಈ ಚಟದಿಂದ ಮುಕ್ತರಾಗಲು ಸಾಧ್ಯವಿಲ್ಲ. ಈ ದುಶ್ಚಟ ವ್ಯಾಪಿಸಿದರೆ ಆತ ಬದುಕಿದ್ದೂ ಸತ್ತಂತೆ, ಮನೆಯಲ್ಲಿ ಅದಕ್ಕಾಗಿ ದುಡ್ಡು ಹೊಂದಿಸಲು ಪರಿತಪಿಸುತ್ತಾನೆ. ಕದ್ದುಮುಚ್ಚಿ ಅದನ್ನು ಪಡೆಯುತ್ತಾನೆ. ಇದರಿಂದ ಕ್ರಿಮಿನಲ್ ಚಟುವಟಿಕೆಗಳೂ ಹೆಚ್ಚಲಿವೆ. ಇದರಿಂದ ಅನೇಕರ ವಿದ್ಯಾರ್ಥಿ ಜೀವನವೇ ಹಾಳಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ ಭಾರತ ದೇಶ ವೇಗವಾಗಿ ಸಶಕ್ತವಾಗಿ ಬೆಳೆಯುತ್ತಿದ್ದು, ಇದನ್ನು ನೇರವಾಗಿ ಎದುರಿಸಲಾಗದ ನೆರೆ ರಾಷ್ಟ್ರಗಳು ದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆ ಹಾಳುಗೆಡವಲು ಮಾದಕ ವಸ್ತು ಮಾರಾಟ ಮಾಡುವ ಕುತಂತ್ರದ ದಾರಿ ಹಿಡಿದಿವೆ ಎಂದು ಹೇಳಿದರು.
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತೀಶ್ ಪೂಜಾರಿ ಮಾತನಾಡಿ ಭಾರತ ದೇಶ ಶೇ. 40ರಷ್ಟು ಯುವಜನರ ಜನಸಂಖ್ಯೆ ಹೊಂದಿದೆ. ಈ ಬಲ ಕುಗ್ಗಿಸಲು ನೆರೆ ರಾಷ್ಟ್ರಗಳು ಡ್ರಗ್ಸ್ ಜಾಲ ಹಬ್ಬಿಸುತ್ತಿವೆ. ನಮ್ಮ ದೇಶದ ಸೈನಿಕರು ಗಡಿರೇಖೆಯಲ್ಲಿ ಹೋರಾಟ ಮಾಡುತ್ತಿದ್ದಾರೆ. ನಾವೂ ಸಹ ದೇಶದ ರಕ್ಷಣೆಗೆ ಡ್ರಗ್ಸ್ ಮಾಫಿಯಾ ಮಟ್ಟ ಹಾಕಬೇಕು ಎಂದು ತಿಳಿಸಿದರು.
ಪರಿವರ್ತನಾ ಟ್ರಸ್ಟ್ ಸಂಚಾಲಕ ಸಂದೇಶ್ ಮಾತನಾಡಿ ಯುವಜನರ ಭವಿಷ್ಯವನ್ನು ಸರಿದಾರಿಗೆ ತರುವುದು ಎಲ್ಲರ ಜವಾಬ್ದಾರಿಯಾಗಿದೆ. ಇಲ್ಲವಾದಲ್ಲಿ ಯುವಕರು ಡ್ರಗ್ಸ್ ಜಾಲದಲ್ಲಿ ಬಲಿಯಾಗಲಿದ್ದಾರೆ. ಹೀಗಾಗಿ ಡಿ.9ರಂದು ಮೈಸೂರಿನಿಂದ ಆರಂಭವಾದ ಈ ಜಾಗೃತಿ ಅಭಿಯಾನ, 10 ಜಿಲ್ಲೆಗಳ ಬಳಿಕ ದಾವಣಗೆರೆಗೆ ಬಂದಿದೆ. ಜ. 27ರಂದು ಬೆಂಗಳೂರಲ್ಲಿ ಸಮಾಪನೆಗೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಸಂಸ್ಥೆಯ ನಿರ್ದೇಶಕ ಡಿ.ಎಸ್. ಹೇಮಂತ್, ಪರಿಸರ ಸಂರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಗಿರೀಶ್ ದೇವರಮನಿ, ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್, ಗ್ರೀನ್ ಇಂಡಿಯಾ ಯುವ ಬ್ರಿಗೇಡ್‌ನ ನಾಗರಾಜ ಸುರ್ವೆ,ಕನ್ನಡ ಸೇನೆ ಜಿಲ್ಲಾಧ್ಯಕ್ಷ ಆಂಜಿನಪ್ಪ ಇದ್ದರು. ವಿದ್ಯಾರ್ಥಿಗಳಿಗೆ ಡ್ರಗ್ಸ್ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಗರದ ವಿವಿಧ ಕಾಲೇಜುಗಳಲ್ಲಿಯೂ ಆಂದೋಲನ ನಡೆಸಲಾಯಿತು.

ಡ್ರಗ್ಸ್ ದಂಧೆ ವ್ಯಾಪ್ತಿಯು ಇಂದು ಎಲ್ಲೆಡೆ ಹಬ್ಬಿದೆ. ಡ್ರಗ್ಸ್ ಕೇವಲ ವ್ಯಕ್ತಿಗತವಾಗಿ ಅಲ್ಲದೆ ಕುಟುಂಬ, ಸಮಾಜ ಹಾಗೂ ದೇಶದ ಸ್ಥಿತಿಯನ್ನೂ ಹದಗೆಡಿಸಲಿದೆ. ಲಕ್ಷಾಂತರ ಕೋಟಿ ರೂ.ಗಳ ವ್ಯವಹಾರ ಡ್ರಗ್ಸ್ ದಂಧೆಯಲ್ಲಿ ನಡೆಯುತ್ತಿದೆ. ಈ ಹಣವನ್ನು ಭಯೋತ್ಪಾದನಾ ಕೃತ್ಯಕ್ಕೆ, ಮದ್ದು-ಗುಂಡು ಖರೀದಿಗೆ ಬಳಸಲಾಗುತ್ತಿದೆ.