ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಲ್ಲಿಕಾ ಸಾಂಸ್ಕೃತಿಕ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಭಾಕರ ಕೋರೆ, ಮುರುಗೇಶ ನಿರಾಣಿ, ಸಿ.ಸಿ. ಪಾಟೀಲ್, ಡಾ.ಜಿ.ಎಂ. ಸಿದ್ದೇಶ್ವರ, ಡಾ. ಎಸ್.ಆರ್. ಶಂಕಪಾಲ್ ಇತರರಿದ್ದರು.
- ಇಂಜಿನಿಯರ್‌ಗಳಿಗೆ ಮುರುಗೇಶ ನಿರಾಣಿ ಕಿವಿಮಾತು
- ಜಿಎಂ ವಿವಿಯಲ್ಲಿ ಮಲ್ಲಿಕಾ ಸಾಂಸ್ಕೃತಿಕ ಉತ್ಸವ ಸಂಭ್ರಮ
- ನಿರಾಣಿ ಗ್ರೂಪ್‌ನಿಂದ ಶೀಘ್ರ ಪೆಟ್ರೋಲ್ ತಯಾರಿಕಾ ಕಾರ್ಖಾನೆ
ದಾವಣಗೆರೆ: ಇಂಜಿನಿಯರಿಂಗ್ ಪದವೀಧರರು ಸರ್ಕಾರಿ, ಅರೆಸರ್ಕಾರಿ ಕೆಲಸಗಳನ್ನು ಅವಲಂಬಿಸದೆ ಉದ್ಯಮಿಗಳಾಗಬೇಕು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಆಶಿಸಿದರು.
ನಗರದ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಲ್ಲಿಕಾ-26.0 ಸಾಂಸ್ಕೃತಿಕ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ವರ್ಷಕ್ಕೆ 1.20 ಲಕ್ಷ, ದೇಶದಲ್ಲಿ 12 ಲಕ್ಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊರಬರುತ್ತಿದ್ದು, ಉದ್ಯೋಗ ಸಿಗುವಲ್ಲಿ ಸ್ಪರ್ಧೆ ಇದೆ.
ನಿಗದಿತ ಪಠ್ಯಕ್ರಮದ ಜತೆಗೆ ಕೇಂದ್ರ ಸರ್ಕಾರದ ಹೊಸ ಕೈಗಾರಿಕಾ ನೀತಿ ಅಧ್ಯಯನ ಮಾಡಿ ಉದ್ಯಮಿಯಾಗಿ ಉದ್ಯೋಗ ನೀಡಬೇಕು ಎಂದು ಕಿವಿಮಾತು ಹೇಳಿದರು.
ಹೆಚ್ಚು ಅಂಕ ಪಡೆದ ಪದವೀಧರರು ದೇಶದ ಜಿಡಿಪಿಗೆ ಕೊಡುಗೆ ನೀಡಬೇಕು. ದೇಶ ಸೇವೆ ಕಡೆಗೆ ಗಮನ ಹರಿಸಬೇಕು. ಅನೇಕ ಸಾಧಕರ ಕುಟುಂಬ ಹಿನ್ನೆಲೆ ಗಮನಿಸಿದರೆ ಅವರೆಲ್ಲರೂ ಶೂನ್ಯದಿಂದಲೇ ಹೀರೋ ಆಗಿದ್ದಾರೆ. ಹೀಗಾಗಿ ಸಾಧನೆಗೆ ಹಣ, ಗಾಡ್‌ಫಾದರ್ ಅಥವಾ ಮಾರ್ಗದರ್ಶಕರಿಲ್ಲ ಎಂಬ ಮನೋಭಾವದಿಂದ ಮುಕ್ತರಾಗಿ ಎಂದರು.
ನಾನು ಇಂಜಿನಿಯರಿಂಗ್ ಬಳಿಕ 10 ಲಕ್ಷ ರೂ. ಯೋಜನೆಯಲ್ಲಿ ಉದ್ಯೋಗ ಆರಂಭಿಸಿದೆ. ದಿನಕ್ಕೆ 1 ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯದ ಕಾರ್ಖಾನೆಗಳನ್ನು ಮಹಾರಾಷ್ಟ್ರ, ಬಿಹಾರ ಇತರೆಡೆ ನಡೆಸುತ್ತಿದ್ದೇವೆ. ಇಂಧನ, ಎಲ್ಪಿಜಿ ಕೊರತೆ ಇರುವ ಈ ಕಾಲದಲ್ಲಿ ಕಬ್ಬು,. ಮೆಕ್ಕೆಜೋಳ, ಅಕ್ಕಿ ಬಳಸಿ ದಿನವೊಂದಕ್ಕೆ 28 ಲಕ್ಷ ಲೀ. ಎಥೆನಾಲ್ ಉತ್ಪಾದಿಸುವ ಏಷ್ಯಾದಲ್ಲೇ ದೊಡ್ಡ ಘಟಕ ನಿರಾಣಿ ಗ್ರೂಪ್‌ನದಾಗಿದೆ.
ನಿರಾಣಿ ಗ್ರೂಪ್‌ನಿಂದ ಕಳೆದ 25 ವರ್ಷದಲ್ಲಿ 72 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇವೆ. ರೈತರ ಉತ್ಪನ್ನಗಳಿಂದಲೇ ವಿಮಾನಗಳಿಗಾಗಿ ಪೆಟ್ರೋಲ್ ತಯಾರಿಸುವ ದೇಶದಲ್ಲೇ ಅತಿ ದೊಡ್ಡ ಕಾರ್ಖಾನೆಯನ್ನು ಇನ್ನು ಒಂದು ವರ್ಷದಲ್ಲಿ ಆರಂಭಿಸಲಿದ್ದೇವೆ ಎಂದ ಅವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೂಡ ಸ್ವಂತ ಉದ್ದಿಮೆಗಳತ್ತ ಗಮನ ಹರಿಸಬೇಕು ಎಂದು ಹೇಳಿದರು.
ಹೆಚಚು ಅಂಕ ಪಡೆದವರು ಉದ್ಯೋಗ ಪಡೆಯಬಹುದು. ಕಡಿಮೆ ಅಂಕ ಪಡೆದವರು ಹತಾಶರಾಗಬೇಕಿಲ್ಲ. ಅಂಥವರು ಮಂತ್ರಿಯೂ ಆಗಬಹುದು. ನನ್ನೊಂದಿಗೆ ಕಡಿಮೆ ಅಂಕ ಪಡೆದ ಸಿ.ಸಿ.ಪಾಟೀಲ್, ಜಿ.ಎಂ. ಸಿದ್ದೇಶ್ವರ ಅವರೇ ಇದಕ್ಕೆ ಸಾಕ್ಷಿಯಾಗಿದ್ದೇವೆ ಎಂದೂ ಚಟಾಕಿ ಹಾರಿಸಿದರು.
ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಚಿವ ಸಿ.ಸಿ.ಪಾಟೀಲ್, ಮಾಜಿ ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿ.ಎಂ. ವಿವಿ ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಉಪಕುಲಪತಿ ಡಾ.ಎಂ. ವೇಣುಗೋಪಾಲ ರಾವ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ. ಕಿರಣ್‌ಕುಮಾರ್, ಉಪ ನಿರ್ದೇಶಕರಾದ ಡಾ. ಸಂತೋಷ್ ಕುಮಾರ್, ಸುನಿಲ್‌ಕುಮಾರ್ ಇತರರಿದ್ದರು. ರ‌್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಬೆಳಗ್ಗಿನಿಂದಲೂ ಜಿಎಂ ವಿವಿ ಕಾರಿಡಾರಲ್ಲಿ ವಿದ್ಯಾರ್ಥಿಗಳ ದಂಡೇ ನೆರೆದಿತ್ತು. ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಮೈಮ್, ಗೀತಗಾಯನ, ಮ್ಯಾಡ್ ಆ್ಯಡ್ಸ್, ಡಾನ್ಸ್ ಜುಗಲ್ ಬಂದಿ ಮೊದಲಾದ ಕಾರ್ಯಕ್ರಮ ನಡೆದವು. ಸಂಜೆಯೂ ವಿದ್ಯಾರ್ಥಿಗಳಿಂದ ವಿವಿಧ ರಸಮಂಜರಿ ನಡೆದವು.
ಚಿತ್ರರಂಗಕ್ಕೆ ಬೇಕು ನಾಯಕಿಯರು!
ಕನ್ನಡ ಚಿತ್ರರಂಗದಲ್ಲಿ ನಾಯಕನಟಿಯರ ಕೊರತೆ ಇದೆ. ಹೀಗಾಗಿ ನಾವು ಮುಂಬಯಿಯಿಂದ ಕರೆಸಿಕೊಳ್ಳುತ್ತಿದ್ದೇವೆ. ಅವರಿಗೆ ಕನ್ನಡ ಭಾಷೆ ಸರಿಯಾಗಿ ಬರುವುದಿಲ್ಲ. ಹೀಗಾಗಿ ಇಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿನಿಯರು ಚಿತ್ರರಂಗಕ್ಕೆ ಬನ್ನಿ. ಸ್ಟೈಲಿಷ್ ಆದ ಹುಡುಗರು ಕೂಡ ಚಿತ್ರರಂಗದಲ್ಲಿ ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಲಿ ಎಂದು ಚಿತ್ರನಟ ನೆನಪಿರಲಿ ಪ್ರೇಮ್ ಆಹ್ವಾನ ನೀಡಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅವರು, ಇಂಜಿನಿಯರ್ ಓದಿನ ಬಳಿಕ ಸೇನಾ ವಿಭಾಗಗಳಲ್ಲಿ ಕೆಲಸ ಮಾಡಿ. ರೈತರಾಗಿ. ನೀವು ಏನಾದರೂ ಆಗಿ ಮೊದಲು ಮಾನವರಾಗಿ. ಮಾನವೀಯ ಗುಣ ಬೆಳೆಸಿಕೊಳ್ಳಿ. ಓದಿನ ತರುವಾಯ ನಿಮ್ಮ ಪಾಲಕರನ್ನು ಜತೆಯಲ್ಲಿರಿಸಿ ಗೌರವಿಸಿ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ ಎಂದೂ ಹೇಳಿದರು.