ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಗುರುವಾರ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯೆ ಪುಷ್ಪಲತಾ ನಾಡಿಗ ಮಾತನಾಡಿದರು. ಕೆ. ನಾಗರತ್ನ, ಪ್ರಸಾದ್ ಜಿ, ಉಮಾದೇವಿ ಇದ್ದರು. 
ದಾವಣಗೆರೆ

ಬಾಪೂಜಿ ಪಾಲಿಟೆಕ್ನಿಕ್ ರಜತ ಮಹೋತ್ಸವ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯೆ ಪುಷ್ಪಲತಾ ನಾಡಿಗ ಮಾಹಿತಿ
  • ಹಳೇ ವಿದ್ಯಾರ್ಥಿಗಳ ಸಭೆ
ದಾವಣಗೆರೆ : ನಗರದ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣವಾಗಿ 25 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಸಮಾರಂಭ ಶುಕ್ರವಾರ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯೆ ಪುಷ್ಪಲತಾ ನಾಡಿಗ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ 12 ಗಂಟೆಗೆ ಬಿಐಇಟಿ ಕಾಲೇಜು ಆವರಣದ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಸಮಾರಂಭ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.
ಕಾಲೇಜು 1985ರಲ್ಲಿ ಸ್ಥಾಪನೆಯಾಯಿತು. 2001ರಲ್ಲಿ ಕಾಲೇಜಿನ ಕಟ್ಟಡ ನಿರ್ಮಿಸಲಾಯಿತು. ಪ್ರಸ್ತುತ 7 ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು 780 ವಿದ್ಯಾರ್ಥಿಗಳಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೃತಕ ಬುದ್ಧಿಮತ್ತೆ ವಿಭಾಗವನ್ನು ಆರಂಭಿಸುವ ಚಿಂತನೆಯಿದೆ ಎಂದರು.
ಈ ಕಾಲೇಜಿನ ಬಹಳಷ್ಟು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ. ಡಿಪ್ಲೊಮಾ ಪೂರೈಸಿದವರಿಗೂ ಉದ್ಯೋಗ ಅವಕಾಶಗಳಿವೆ ಎಂದು ತಿಳಿಸಿದರು.
ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ 11ರ ವರೆಗೆ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಭೆ ನಡೆಯಲಿದೆ. 12 ಗಂಟೆಗೆ ಆರಂಭವಾಗುವ ರಜತ ಮಹೋತ್ಸವ ಸಮಾರಂಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ (ಆಡಳಿತ) ಅರ್ಚನಾ ಸಿ. ಭಾಗವಹಿಸುವರು ಎಂದು ಹೇಳಿದರು.
ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಆರ್.ಎಲ್. ಉಮಾಶಂಕರ್, ಉಪಾಧ್ಯಕ್ಷೆ ಕೆ.ಎ. ಗಿರಿಜಮ್ಮ, ಖಜಾಂಚಿ ಎ.ಎಸ್. ನಿರಂಜನ್, ಸದಸ್ಯರಾದ ಡಾ.ಎ.ಎಸ್. ವೀರಣ್ಣ, ಡಾ. ಸಂಪನ್ನ ಮುತಾಲಿಕ್, ನಿರ್ದೇಶಕ ಡಾ.ಬಿ. ಬಕ್ಕಪ್ಪ, ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ.ಎಚ್.ಬಿ. ಅರವಿಂದ್ ಪಾಲ್ಗೊಳ್ಳುವರು ಎಂದರು.
ರಜತ ಮಹೋತ್ಸವ ಸಂಭ್ರಮಾಚರಣೆ ಸಂಯೋಜಕರಾದ ಕೆ. ನಾಗರತ್ನ, ಪ್ರಸಾದ್ ಜಿ, ಉಮಾದೇವಿ ಸುದ್ದಿಗೋಷ್ಠಿಯಲ್ಲಿದ್ದರು.