ಬುಳ್ಳಾಪುರ ತಾಂಡಾದಲ್ಲಿನ ಶಿಥಿಲಾವಸ್ಥೆ ತಲುಪಿದ ಸರ್ಕಾರಿ ಶಾಲಾ ಕಟ್ಟಡ.Ballapura Thanda 
ದಾವಣಗೆರೆ

ಬಳ್ಳಾಪುರ ತಾಂಡಾ ಮೂಲ ಸೌಕರ್ಯಗಳಿಂದ ವಂಚಿತ! Ballapura Thanda

ಪ್ರಮುಖ ಮುಖ್ಯಾಂಶಗಳು

  • ಬಸ್ಸೇ ಕಾಣದ, ಕುಗ್ರಾಮವಾಗಿಯೇ ಉಳಿದ ಊರು
  • ಜಲ ಜೀವನ್ ಮಿಷನ್ ವಿಫಲ
  • ಶಿಥಿಲಾವಸ್ಥೆ ತಲುಪಿರುವ ಶಾಲಾ ಕಟ್ಟಡ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳ ಸನಿಹದಲ್ಲಿದ್ದರೂ ಇಂದಿಗೂ ಹಲವು ತಾಂಡಾಗಳು ಮತ್ತು ಹಟ್ಟಿಗಳು ಕುಗ್ರಾಮಗಳಾಗಿಯೇ ಉಳಿದಿವೆ. ಇದಕ್ಕೆ ಜೀವಂತ ಸಾಕ್ಷಿ ಬಳ್ಳಾಪುರ ತಾಂಡಾ. Ballapura Thanda
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಇಲ್ಲಿನ ಲಂಬಾಣಿ ಸಮುದಾಯದ ಜನರು ಇಂದಿಗೂ ಸೌಲಭ್ಯವಂಚಿತರಾಗಿ ಬದುಕುತ್ತಿದ್ದಾರೆ.
ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ತಾಂಡಾ 50 ರಿಂದ 55 ಮನೆಗಳಿರುವ ಸಣ್ಣ ಗ್ರಾಮ. ಮಾಯಕೊಂಡದಿಂದ ಕೇವಲ 4 ಕಿಮೀ ದೂರದಲ್ಲಿದೆ. ಹದಗೆಟ್ಟ ರಸ್ತೆ, ಚರಂಡಿಗಳಿಲ್ಲದ ದುಸ್ಥಿತಿ, ಕುಡಿಯುವ ನೀರಿನ ಕೊರತೆ, ಶಿಥಿಲಾವಸ್ಥೆ ತಲುಪಿರುವ ಶಾಲಾ ಕಟ್ಟಡ ಹಾಗೂ ಸಾರಿಗೆ ಸೌಲಭ್ಯದ ಕೊರತೆ ಇದು ಗ್ರಾಮದ ಚಿತ್ರಣ.
ಶಿಕ್ಷಣವಂಚಿತರಾಗುತ್ತಿರುವ ವಿದ್ಯಾರ್ಥಿನಿಯರು: ತಾಂಡಾದಿಂದ 15 ರಿಂದ 20 ವಿದ್ಯಾರ್ಥಿಗಳು ಮಾಯಕೊಂಡದ ಕೆಪಿಎಸ್ ಶಾಲೆ ಮತ್ತು ಕಾಲೇಜಿಗೆ ನಿತ್ಯವೂ ಓಡಾಡುತ್ತಿದ್ದಾರೆ. ರಸ್ತೆ ದುಸ್ಥಿತಿಯಿಂದ ಗುಡ್ಡದ ಸಮೀಪದ ಹಾದಿಯಲ್ಲಿ ಹದಿಹರೆಯದ ಹೆಣ್ಣುಮಕ್ಕಳು ನಡೆದುಕೊಂಡು ಹೋಗುವುದು ಪಾಲಕರಿಗೆ ಆತಂಕ ತಂದಿದೆ. ಸುರಕ್ಷತೆಯ ಭೀತಿಯಿಂದ ಹಲವರು ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇನ್ನು ಈ ಗ್ರಾಮದ ಜನರು ಇಂದಿನವರೆಗೂ ಬಸ್ ಮುಖವನ್ನೇ ಕಂಡಿಲ್ಲ!
ಗ್ರಾಮದೊಳಗೆ ಜಲಜೀವನ್ ಮಿಷನ್ ಕಾಮಗಾರಿ ಸಂಪೂರ್ಣ ವಿಫಲವಾಗಿದ್ದು, ಕೇವಲ ಮಿನಿ ಟ್ಯಾಂಕ್ ನೀರೇ ನಿವಾಸಿಗಳಿಗೆ ಗತಿಯಾಗಿದೆ. 55 ಮನೆಗಳ ಪೈಕಿ ಕಂದಾಯ ಇಲಾಖೆಯು ಕೇವಲ 25 ಮನೆಗಳಿಗಷ್ಟೇ ಹಕ್ಕುಪತ್ರ ವಿತರಿಸಿದೆ ಎಂದು ನಿವಾಸಿಗಳು ದೂರಿದ್ದಾರೆ.

ಮತದಾನ ಹಾಗೂ ಪಡಿತರಕ್ಕೆ ಪರ ಊರೇ ಗತಿ!

ಗ್ರಾಮಸ್ಥರು ಪಡಿತರ ಹಾಗೂ ಮತದಾನದ ಹಕ್ಕನ್ನು ಚಲಾಯಿಸಲು ಕೂಡ ಮೈಲಿಗಟ್ಟಲೆ ಅಲೆಯಬೇಕು. ಎಂಪಿ ಮತ್ತು ಎಂಎಲ್‌ಎ ಚುನಾವಣೆಗಳಿಗೆ 4 ಕಿಮೀ ದೂರದ ಮಾಯಕೊಂಡಕ್ಕೆ ಹೋಗಬೇಕು. ಇನ್ನು ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆಗಳಿಗಾಗಿ ಹೆದ್ನೇ ಗ್ರಾಮದ ಮತಗಟ್ಟೆಗೆ ತೆರಳಬೇಕು. ತಿಂಗಳ ರೇಷನ್‌ಗಾಗಿ 7 ಕಿ.ಮೀ ದೂರದ ಹುಚ್ಚವ್ವನಹಳ್ಳಿಯ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಹೋಗಬೇಕಾಗಿದೆ.
"

ಚುನಾವಣೆ ವೇಳೆ ಬರುವ ಜನ ಪ್ರತಿನಿಧಿಗಳು ಗೆದ್ದ ಮೇಲೆ ತಿರುಗಿ ನೋಡುವುದಿಲ್ಲ. ನಮ್ಮ ತಾಂಡಾದಲ್ಲೇ ಪಡಿತರ ವಿತರಣೆ ಮಾಡಬೇಕು, ಮತಗಟ್ಟೆ ಸ್ಥಾಪಿಸಬೇಕು. ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ನೂತನ ಶಾಲಾ ಕಟ್ಟಡ ನಿರ್ಮಿಸಬೇಕು. ಇಲ್ಲದಿದ್ದರೆ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ.

— ಕುಮಾರ್ ನಾಯ್ಕಶ್ರಿ ಗ್ರಾಮಸ್ಥ.

ಬುಳ್ಳಾಪುರ ತಾಂಡಾದಿಂದ ನಿತ್ಯ ಮಾಯಕೊಂಡದ ಕಾಲೇಜಿಗೆ ಹೋಗುವ ದಾರಿಯಲ್ಲಿ ಬೆಳೆಗಳು ಎತ್ತರವಾಗಿ ಬೆಳೆದಿರುವಾಗ ನಡೆದು ಹೋಗಲು ತುಂಬಾ ಭಯವಾಗುತ್ತದೆ. ಸರ್ಕಾರ ತಕ್ಷಣವೇ ನಮ್ಮ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು.

— ಆರತಿ ಆರ್ ವಿದ್ಯಾರ್ಥಿನಿ.


ತಾಂಡಾದಲ್ಲಿ ಕೆಲವು ಕುಟುಂಬಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಲಾಗಿದೆ. ನಮ್ಮನ್ನೂ ಸೇರಿ ಉಳಿದ ಅರ್ಧದಷ್ಟು ಜನರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಸರ್ಕಾರ ಕೂಡಲೇ ನಮಗೂ ಮನೆಯ ಹಕ್ಕುಪತ್ರಗಳನ್ನು ನೀಡಬೇಕು.

— ಪಾರಿಬಾಯಿ ಬುಳ್ಳಾಪುರ ತಾಂಡಾ ನಿವಾಸಿ.