ದಾವಣಗೆರೆಯಲ್ಲಿ ಶುಕ್ರವಾರ ಪೌರಕಾರ್ಮಿಕನ ಮೇಲೆ ನಡೆದ ಹಲ್ಲೆ ಖಂಡಿಸಿ ಆಜಾದ್ ನಗರ ಠಾಣೆ ಆವರಣದಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.  
ದಾವಣಗೆರೆ

ಕಸ ಬೇರ್ಪಡಿಸಿ ಎಂದಿದ್ದಕ್ಕೆ ಹಲ್ಲೆ

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆಯ ಮೆಹಬೂಬ್ ನಗರದಲ್ಲಿ ಘಟನೆ
  • ಕಸ ಸಂಗ್ರಹಿಸಲು ತೆರಳಿದ್ದಾಗ ಹಲ್ಲೆ
ದಾವಣಗೆರೆ : ಇಲ್ಲಿನ ಮೆಹಬೂಬ್ ನಗರ 4ನೇ ಕ್ರಾಸ್‌ನಲ್ಲಿ ಶುಕ್ರವಾರ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಕೊಡುವಂತೆ ತಿಳಿಸಿದ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಘಟನೆಯನ್ನು ಖಂಡಿಸಿ ಪೌರ ಕಾರ್ಮಿಕರು ಆಜಾದ್ ನಗರ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಕಸ ಸಾಗಿಸುವ ವಾಹನದ ಚಾಲಕ ಕರಿಬಸಪ್ಪ ಹಲ್ಲೆಗೊಳಗಾದ ವ್ಯಕ್ತಿ. ಎಂದಿನಂತೆ ಬೆಳಗ್ಗೆ ಮನೆ ಮನೆ ಕಸ ಸಂಗ್ರಹಿಸಲು ತೆರಳಿದ್ದಾಗ ಒಂದು ಮನೆಯವರು ಡೈಪರ್ ಸೇರಿದಂತೆ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿರಲಿಲ್ಲ. ಡೈಪರ್‌ನ್ನು ಕವರ್‌ಗೆ ಹಾಕಿ, ಹಸಿ ಮತ್ತು ಒಣ ಕಸ ಬೇರ್ಪಡಿಸಿ ಕೊಡುವಂತೆ ಕರಿಬಸಪ್ಪ ಹೇಳಿದ್ದಾರೆ.
ಆಗ ವಾಹನದಲ್ಲಿದ್ದ ಕರಿಬಸಪ್ಪ ಅವರ ಮೇಲೆ ಆರೋಪಿಗಳು ಹಲ್ಲೆ ಮಾಡಿ, ಟೀಶರ್ಟ್ ಹರಿದು ಹಾಕಿದ್ದಾರೆ. ಘಟನೆಯಲ್ಲಿ ಕಸ ಸಂಗ್ರಹಣೆ ವಾಹನದ ಕನ್ನಡಿ ಮುರಿದಿದೆ. ‘ನನ್ನ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಲು ಮುಂದಾಗಿದ್ದರು. ನನಗೆ ಮತ್ತು ಸಹಾಯಕಿಗೆ ನಿಂದನೆ ಮಾಡಿದ್ದಾರೆ’ ಎಂದು ಕರಿಬಸಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಪೌರ ಕಾರ್ಮಿಕರ ಪ್ರತಿಭಟನೆ

ಹಲ್ಲೆ ಘಟನೆಯನ್ನು ಖಂಡಿಸಿ ಪೌರ ಕಾರ್ಮಿಕರು ಕಸ ಸಾಗಿಸುವ ಆಟೋಗಳನ್ನು ಆಜಾದ್ ನಗರ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು. ಕಳೆದ 4-5 ತಿಂಗಳಲ್ಲಿ ಈ ರೀತಿಯ ಮೂರ್ನಾಲ್ಕು ಘಟನೆಗಳಾಗಿವೆ. ಇದರಿಂದ ನಾವು ಕೆಲಸ ಮಾಡುವುದೇ ಕಷ್ಟವಾಗಿದೆ ಎಂದು ಪೌರಕಾರ್ಮಿಕರು ದೂರಿದರು. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಿದರು.
ನೂರು, ಅಜ್ಜು ಮತ್ತು ಇತರರ ವಿರುದ್ಧ ದೂರು ದಾಖಲಾಗಿದ್ದು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.