ದೊಗ್ಗಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಕಳವಾಗಿದ್ದ ಬೆಳ್ಳಿ ವಸ್ತುಗಳನ್ನು ಪೊಲೀಸರು ಗ್ರಾಮಸ್ಥರಿಗೆ ಹಿಂದಿರುಗಿಸಿದರು. ಎಸ್ಪಿ ಶೇಖರ್, ಡಿವೈಎಸ್ಪಿ ಬಸವರಾಜ ಇನ್ನಿತರ ಅಧಿಕಾರಿಗಳು ಇದ್ದರು.
- ವಿವಿಧ ಪೊಲೀಸ್ ಠಾಣೆಯ 87 ಪ್ರಕರಣ
- ಪೊಲೀಸ್ ಅಧೀಕ್ಷಕ ಶೇಖರ್ ಎಚ್.ಟಿ. ನೇತೃತ್ವ
ದಾವಣಗೆರೆ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಜಪ್ತಿ ಮಾಡಿದ ಒಟ್ಟು 3.91 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಜಿಲ್ಲಾ ಪೊಲೀಸ್ ಕವಾಯತು ಮೈದಾನದ ಡಿಎಆರ್ ಕಚೇರಿ ಆವರಣದಲ್ಲಿ ಮಂಗಳವಾರ ವಾರಸುದಾರರಿಗೆ ಹಿಂದಿರುಗಿಸಲಾಯಿತು.
2025ರ ಡಿ. 20ರಿಂದ ಇಲ್ಲಿಯವರೆಗೆ ವರದಿಯಾಗಿ ಪತ್ತೆಯಾಗಿರುವ 87 ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಸ್ವತ್ತುಗಳನ್ನು ಪೊಲೀಸ್ ಅಧೀಕ್ಷಕ ಶೇಖರ್ ಎಚ್.ಟಿ. ನೇತೃತ್ವದಲ್ಲಿ ವಾರಸುದಾರರಿಗೆ ವಾಪಸ್ ನೀಡಲಾಯಿತು.
ಈ ಪ್ರಕರಣಗಳ ಸಂಬಂಧ 22.94 ಲಕ್ಷ ರೂ. ಮೌಲ್ಯದ ವಿವಿಧ ಮಾದರಿಯ 31 ವಾಹನಗಳು, 90.67 ಲಕ್ಷ ರೂ. ನಗದು, 2.16 ಕೋಟಿ ರೂ. ಮೌಲ್ಯದ, 1 ಕೆಜಿ 668.314 ಗ್ರಾಂ ಬಂಗಾರದ ಆಭರಣಗಳು ಹಾಗೂ 18 ಕೆಜಿ ಬೆಳ್ಳಿ ಆಭರಣಗಳು, 56.55 ಲಕ್ಷ ರೂ. ಮೌಲ್ಯದ ವಿವಿಧ ಮಾದರಿಯ 377 ಮೊಬೈಲ್ ಫೋನ್‌ಗಳು, ಅಡಿಕೆ, ಬೋರ್‌ವೆಲ್ ವೈರ್, ಮೋಟರ್ ಸೇರಿ 4.87 ಲಕ್ಷ ರೂ. ಮೌಲ್ಯದ ಕೃಷಿ ಉಪಕರಣಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಕೆಲವು ಪ್ರಕರಣಗಳಲ್ಲಿ ಪೊಲೀಸರು ಗುಜರಾತ್, ಮಧ್ಯಪ್ರದೇಶ ಇನ್ನಿತರ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿರುವುದಾಗಿ ಎಸ್ಪಿ ಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ.ಎಸ್, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್ಪಿ ನಾಗಪ್ಪ ಬಂಕಾಳಿ, ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಉಮೇಶ್ ಜಿ.ಬಿ., ಶಿಲ್ಪಾ, ನಂಜುಂಡಸ್ವಾಮಿ, ರಾಘವೇಂದ್ರ, ವಸಂತ್, ಸಿದ್ದೇಗೌಡ, ಪಿಎಸ್‌ಐ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.
ಅರ್ಧ ಹೆಲ್ಮೆಟ್, ದೋಷಪೂರಿತ ಸೈಲೆನ್ಸರ್ ನಾಶ
ನಗರದಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ, ಕಾನೂನು ಬಾಹಿರವಾದ ಉತ್ತಮ ಗುಣಮಟ್ಟದಿಂದ ಕೂಡಿಲ್ಲದ 2 ಸಾವಿರಕ್ಕೂ ಹೆಚ್ಚು ಅರ್ಧ ಹೆಲ್ಮೆಟ್ಗಳನ್ನು ಹಾಗೂ ದ್ವಿಚಕ್ರ ವಾಹನಗಳಲ್ಲಿ ಆಳವಡಿಸಿಕೊಂಡಿದ್ದ ಕರ್ಕಶ ಧ್ವನಿ ಹೊರಡಿಸುವ 85ಕ್ಕೂ ಹೆಚ್ಚು ದೋಷಪೂರಿತ ಸೈಲೆನ್ಸರ್‌ಗಳನ್ನು ಹಾಗೂ ಇತರೆ ವಾಹನಗಳಲ್ಲಿ ಅಳವಡಿಸಿಕೊಂಡಿದ್ದ 25 ಶ್ರಿಲ್ ಹಾರ್ನ್‌ಗಳನ್ನು, 10 ಸ್ಪೀಕರ್ ಡಕ್‌ಗಳನ್ನು ಬುಲ್ಡೋಜರ್ ಮೂಲಕ ನಾಶಪಡಿಸಲಾಯಿತು.
ರೌಡಿಶೀಟರ್‌ಗಳಿಗೆ ಎಚ್ಚರಿಕೆ
ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ರೌಡಿಶೀಟರ್‌ಗಳನ್ನು ಕರೆದು ಎಚ್ಚರಿಕೆ ನೀಡಲಾಗಿದೆ ಎಂದು ಎಸ್ಪಿ ಶೇಖರ್ ಎಚ್.ಟಿ. ತಿಳಿಸಿದರು.
ಜಿಲ್ಲೆಯಲ್ಲಿ 468, ದಾವಣಗೆರೆ ನಗರ ಒಂದರಲ್ಲೇ 145 ರೌಡಿಶೀಟರ್‌ಗಳಿದ್ದಾರೆ. ಹಫ್ತಾ ವಸೂಲಿ, ಭೂಮಾಫಿಯಾ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಅವರು ತೊಡಗಿಕೊಂಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಉಲ್ಲಂಘಿಸಿದರೆ ಗಡಿಪಾರು ಮಾಡುವುದು ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದರು.