ದಾವಣಗೆರೆ ಜಿಲ್ಲೆ ಮಾಯಕೊಂಡದಲ್ಲಿ ಮಂಗಳವಾರ ಸುರಿದ ಮಳೆಯಿಂದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನ ಜಲಾವೃತಗೊಂಡು, ಆ ನೀರಿನಲ್ಲೇ ವಿದ್ಯಾರ್ಥಿಗಳು ಮನೆಯತ್ತ ತೆರಳಿದರು.
- ಕೆರೆಯಂತಾದ ಶಾಲಾ ಅಂಗಳ
- ರಾಗಿ ಹೊಲದಲ್ಲಿ ನಿಂತ ನೀರು
ದಾವಣಗೆರೆ : ದಾವಣಗೆರೆ ನಗರ ಸೇರಿ ಜಿಲ್ಲೆಯ ವಿವಿಧೆಡೆ ಬುಧವಾರ ಆಶ್ಲೇಷಾ ಮಳೆ ಅಬ್ಬರಿಸಿತು. ಇದು ಪ್ರಸ್ತುತ ಮುಂಗಾರಿನಲ್ಲಿ ಸುರಿದ ದೊಡ್ಡ ಮಳೆಯಾಗಿದ್ದು ರೈತರಲ್ಲಿ ಭರವಸೆ ಮೂಡಿಸಿದೆ.
ಮಧ್ಯಾಹ್ನ 3 ಗಂಟೆಯಿಂದ ಸತತವಾಗಿ ಸುರಿದ ಮಳೆಯಿಂದ ತಾಲೂಕಿನ ಮಾಯಕೊಂಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನ ಜಲಾವೃತಗೊಂಡು ಕೆರೆಯಂಗಳದಂತೆ ಕಂಡಿತು. ಸುರಿಯುವ ಮಳೆಯಲ್ಲೇ ವಿದ್ಯಾರ್ಥಿಗಳು ಮನೆಗೆ ತೆರಳಿದರು. ಮಾಯಕೊಂಡ ಹೋಬಳಿಯ ರಾಗಿ ಹೊಲಗಳಲ್ಲಿ ನೀರು ನಿಂತಿತ್ತು.
ತುಂಗಾ ಜಲಾಶಯದಿಂದ ಹೊರ ಹರಿವು ಕಡಿಮೆಯಾಗಿದ್ದರಿಂದ (40 ಸಾವಿರ ಕೂಸೆಕ್) ಹೊನ್ನಾಳಿ ಮತ್ತು ಹರಿಹರ ತಾಲೂಕುಗಳಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗಿತ್ತು.
ದಾವಣಗೆರೆಯಲ್ಲಿ ಉತ್ತಮ ಮಳೆಯಾಗಿದ್ದು ರಸ್ತೆಗಳಲ್ಲಿ ನೀರು ಹರಿದವು, ರಸ್ತೆ ಗುಂಡಿಗಳು ತುಂಬಿಕೊಂಡಿದ್ದವು. ಸಾರ್ವಜನಿಕರು, ವಾಹನ ಸವಾರರು ಜರ್ಕಿನ್ ಮತ್ತು ಕೊಡೆಗಳ ಮೊರೆ ಹೋಗಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ತೊಯ್ದು ತೊಪ್ಪೆಯಾದರು. ಹರಿಹರದಲ್ಲೂ ಮಧ್ಯಾಹ್ನದಿಂದ ಸತತವಾಗಿ ಮಳೆ ಸುರಿಯಿತು.
ಹೊನ್ನಾಳಿ, ಚನ್ನಗಿರಿ, ನ್ಯಾಮತಿ, ಜಗಳೂರು ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದ್ದು ಸಾಧಾರಣ ಮಳೆಯಾಯಿತು. ಚನ್ನಗಿರಿ ತಾಲೂಕು ಚಿರಡೋಣಿ, ಬಸವಾಪಟ್ಟಣ ಭಾಗದಲ್ಲಿ ಸುರಿದ ಮಳೆಯಿಂದ ಭತ್ತದ ನಾಟಿ ಸೇರಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.
‘ಮಂಗಳವಾರ ದಾವಣಗೆರೆ ನಗರದಲ್ಲಿ ಉತ್ತಮ ಮಳೆಯಾಗಿದೆ. ಆದರೆ ಜಿಲ್ಲಾದ್ಯಂತ ವ್ಯಾಪಕವಾಗಿಲ್ಲ. ಈ ಹಂಗಾಮಿನಲ್ಲಿ ಶೇ. 41ರಷ್ಟು ಮಳೆಯ ಕೊರತೆಯಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ತಿಳಿಸಿದರು.
3.5 ಮಿ.ಮೀ. ಮಳೆ, 2 ಮನೆಗೆ ಹಾನಿ
ಜಿಲ್ಲೆಯಲ್ಲಿ ಸೋಮವಾರ ಸರಾಸರಿ 3.5 ಮಿ.ಮೀ. ಮಳೆಯಾಗಿದೆ. ಚನ್ನಗಿರಿ ತಾಲೂಕಿನಲ್ಲಿ 2 ಮನೆಗಳು ಹಾನಿಗೀಡಾಗಿದ್ದು 1.80 ಲಕ್ಷ ರೂ. ನಷ್ಟ ಸಂಭವಿಸಿದೆ.
ಚನ್ನಗಿರಿ ತಾಲೂಕಿನಲ್ಲಿ 8.5 ಮಿ.ಮೀ, ದಾವಣಗೆರೆ 1.8 ಮಿ.ಮೀ, ಹರಿಹರ 1.6 ಮಿ.ಮೀ, ಹೊನ್ನಾಳಿ 1.9 ಮಿ.ಮೀ, ಜಗಳೂರು 1 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 2.5 ಮಿ.ಮೀ. ಮಳೆಯಾಗಿದೆ.