ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಬಿ. ವಾಮದೇವಪ್ಪ, ಬ್ರಹ್ಮಾಕುಮಾರಿ ಲೀಲಾಜಿ, ಕಿರುವಾಡಿ ಗಿರಿಜಮ್ಮ, ಜಯಮ್ಮ ನೀಲಗುಂದ, ವೀಣಾ ಕೃಷ್ಣಮೂರ್ತಿ, ತಿಪ್ಪಮ್ಮ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ನೀತಾ ರಂಗಸ್ವಾಮಿ ಇತರರಿದ್ದರು.
- ನಿಮ್ಮಲ್ಲಿನ ದುರ್ಗೆಯನ್ನು ಬಡಿದೆಬ್ಬಿಸಿ
- ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿಕೆ
- ದಾವಣಗೆರೆ ಜಿಲ್ಲಾ ಪ್ರಥಮ ಸ್ತ್ರೀ ಸಾಹಿತ್ಯ ಸಮ್ಮೇಳನ
ದಾವಣಗೆರೆ: ಹೆಣ್ಣುಮಕ್ಕಳು ಹುಟ್ಟುವ ಮುನ್ನವೇ ಭ್ರೂಣಹತ್ಯೆ ನಡೆಯುತ್ತಿದೆ. ಹುಟ್ಟಿದ ಬಳಿಕವೂ ಜೀವನದಲ್ಲಿ ಸರಣಿ ಸಮಸ್ಯೆಗಳು ಎದುರಾಗುತ್ತವೆ. ಇದರ ವಿರುದ್ಧ ಮಹಿಳಾ ಸಾಹಿತಿಗಳು ಧ್ವನಿ ಎತ್ತಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇದುವರೆಗೆ 90 ಲಕ್ಷ ಹೆಣ್ಣು ಭ್ರೂಣಹತ್ಯೆಯಾಗಿವೆ. ಹೆಣ್ಣು ಬೇಡವೆಂದು ಗರ್ಭದಲ್ಲಿದ್ದಾಗಲೇ ಸಾಯಿಸುವ ಭ್ರೂಣ ಜೀವವಲ್ಲವಾ? ಮನೆಗಳಲ್ಲಿ ಅತ್ತೆ ಕೂಡ ಮೊದಲ ಮಗುವಾಗಿ ಗಂಡು ಬಯಸುತ್ತಿದ್ದಾಳೆ. ನಾವಿಂದು ಪ್ರಕೃತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೇವೆ. ಗರ್ಭಪಾತ ವಿರುದ್ಧ ಲೇಖಕಿಯರು ಕ್ರಾಂತಿ ಮೂಡಿಸಲಿ ಎಂದರು.
ಗ್ರಾಮದೇವತೆಗಳೇ ಇಂದು ಊರು ಕಾಯುತ್ತಿವೆ, ಗಂಡುದೇವರಲ್ಲ. ಅಂತಹ ದುರ್ಗೆ ಪ್ರತಿ ಮಹಿಳೆಯಲ್ಲೂ ಇದ್ದಾಳೆ. ಸಮಾಜದ ಸವಾಲುಗಳನ್ನು ಮೆಟ್ಟಿ ನಿಲ್ಲಲು ತಮ್ಮಲ್ಲಿನ ದುರ್ಗೆಯನ್ನು ಬಡಿದು ಎಬ್ಬಿಸಬೇಕು. ಸವಾಲುಗಳನ್ನು ಗಂಟುಮೂಟೆ ಕಟ್ಟಿ, ಅವನ್ನು ಮೆಟ್ಟಿಲಾಗಿ ಮಾಡಿ ಮುನ್ನಡೆಯಬೇಕು ಎಂದು ಹೇಳಿದರು.
ಸತ್ಯ, ಕನಸು ಹಾಗೂ ಹೋರಾಟದ ಹಾದಿ ಇದ್ದಲ್ಲಿ ಗುರಿ ನಿಶ್ಚಿತ. ಇದು ವಿಶ್ವದ ನಿಯಮ. ಎಲ್ಲ ಮಹಿಳೆಯರೂ ಅಂತರ್ಗತವಾಗಿ ನಾಯಕಿಯರೇ. ಅವರಿಗೆ ಅವಕಾಶ ಸಿಕ್ಕರೆ ಜಗತ್ತನ್ನೇ ಆಳಬಲ್ಲರು. ಇದಕ್ಕಾಗಿ ಬಂದ ಅವಮಾನವನ್ನೂ ಸಹಿಸಬೇಕು. ಈ ವಿಚಾರದಲ್ಲಿ ಅಕ್ಕಮಹಾದೇವಿಗಿಂತ ಮತ್ತೊಂದು ಮಾದರಿ ನಮಗೇ ಬೇಕಿಲ್ಲ ಎಂದರು.
ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆಯಲ್ಲೇ ನಡೆಸಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ತಾವೂ ಸಹ ಪತ್ರ ಬರೆದು ಮನವರಿಕೆ ಮಾಡುವುದಾಗಿಯೂ ಹೇಳಿದರು.
ಶಾಸಕ ಬಿ. ಪಿ. ಹರೀಶ್ ಮಾತನಾಡಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ದೊಡ್ಡ ಭವನದ ಅಗತ್ಯವಿದೆ. ಜಿಲ್ಲಾಧ್ಯಕ್ಷರು ದೊಡ್ಡ ನಿವೇಶನ ಪಡೆದರೆ ಮುಂಬರುವ ಅಧ್ಯಕ್ಷರು ಭವನ ನಿರ್ಮಿಸಲಿ ಎಂದರಲ್ಲದೆ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಬೇಕಿದೆ ಎಂದು ಆಶಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ ದಿಕ್ಸೂಚಿ ಭಾಷಣ ಮಾಡಿದರು. ಮಹಿಳಾ ನುಡಿ ತೇರು ಸ್ಮರಣ ಸಂಚಿಕೆ ಜತೆಗೆ 10 ಲೇಖಕಿಯರ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. \
ಬಾಪೂಜಿ ಸಂಸ್ಥೆ ಕಿರುವಾಡಿ ಗಿರಿಜಮ್ಮ, ಜಯಮ್ಮ ನೀಲಗುಂದ, ವೀಣಾ ಕೃಷ್ಣಮೂರ್ತಿ, ತಿಪ್ಪಮ್ಮ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಎ.ಜೆ. ನೀತಾ ಬಿ.ಇ. ರಂಗಸ್ವಾಮಿ, ನೀಲಾಂಬಿಕೆ, ಎಂ.ಎಸ್. ಸುನಂದಾದೇವಿ ಸಂಗಮೇಶ್ವರ ಗೌಡ್ರು, ವೀಣಾ ನಂಜಪ್ಪ, ಹೇಮಾ ಶಾಂತಪ್ಪ ಪೂಜಾರಿ, ಸುಮತಿ ಜಯಪ್ಪ ಇತರರಿದ್ದರು.
ಸ್ತ್ರೀಯರನ್ನು ಗೌರವಿಸುವುದೇ ಗಂಡಸ್ತನ!
ಉದ್ಘಾಟಕರಿಗೂ ಮುನ್ನ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಮಾತನಾಡಿದಾಗ ನಾಗಲಕ್ಷ್ಮೀ ಚೌಧರಿ ಮಾತಿನಲ್ಲೇ ತಿವಿದರು. ಮಹಿಳಾ ಸಮಾವೇಶದಲ್ಲೂ ಪುರುಷರು ನಮಗೆ ಕೆಲಸ ಇದೆ, ತಾವೇ ಮೊದಲು ಮಾತನಾಡಬೇಕೆಂದು ಬಯಸುತ್ತಾರೆ. ಗಂಡಸ್ತನ ಎಂದರೆ ಮಹಿಳೆಯರನ್ನು ಗೌರವಿಸುವುದು, ಶಿವ-ಪಾರ್ವತಿಯರಂತೆ ಅರ್ಧನಾರೀಶ್ವರರಾಗಿ ಇರುವುದಾಗಿದೆ. ಬದಲಾಗಿ ಹೆಣ್ಣು ಹಿಂದೆ ಬಿಟ್ಟು ಮುಂದೆ ಹೋಗುವುದಿಲ್ಲ ಎಂದು ಕುಟುಕಿದರು.