ಅರೇಹಳ್ಳಿ-ಕಾರಿಗನೂರು ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿ ಗಿಡಗಂಟಿ ಬೆಳೆದಿರುವುದು. Road
- ಗ್ರಾಮೀಣ ರಸ್ತೆ ಸಂಪೂರ್ಣ ಗುಂಡಿಮಯ
- ರಿಪೇರಿ ಮಾಡಿಸಲು ಗ್ರಾಮಸ್ಥರ ಒತ್ತಾಯ
ಬಸವಾಪಟ್ಟಣ: ಅರೇಹಳ್ಳಿಯಿಂದ ಕಾರಿಗನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿಮೀ ರಸ್ತೆ ಕಳೆದ ದಶಕಗಳಿಂದ ದುರಸ್ತಿ ಕಾಣದೇ ಸಂಪೂರ್ಣ ಹಾಳಾಗಿದ್ದು ಸ್ಥಳೀಯರು ನಿತ್ಯ ಈ ರಸ್ತೆಯಲ್ಲಿ ಸಂಚರಿಸಲು ಕಷ್ಟ ಅನುಭವಿಸಬೇಕಾಗಿದೆ. Road
ಕಾರಿಗನೂರು ಗ್ರಾಪಂ ವ್ಯಾಪ್ತಿಯ ಈ ರಸ್ತೆಯು ಅರೇಹಳ್ಳಿ ಗ್ರಾಮದ ಜನರಿಗೆ ಜೀವನಾಡಿಯಂತಿದೆ. ದಾವಣಗೆರೆ ನಗರ ಸೇರಿದಂತೆ ಇತರೆ ಭಾಗಗಳಿಗೆ ಹೋಗಬೇಕಾದರೆ ಇದು ಅತ್ಯಂತ ಸಮೀಪದ ಮಾರ್ಗವಾಗಿದೆ. ವ್ಯಾಪಾರ-ವಹಿವಾಟು, ಶಿಕ್ಷಣ, ಆರೋಗ್ಯ ಇನ್ನಿತರ ಕೆಲಸಗಳಿಗಾಗಿ ನೂರಾರು ಜನರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.
ಆದರೆ, ಈ ರಸ್ತೆಯು ತಗ್ಗು ದಿನ್ನೆಗಳಿಂದ ಕೂಡಿದ್ದು, ವಾಹನ ಸವಾರರಿಗೆ ಕಷ್ಟದಿಂದ ವಾಹನ ಚಲಾಯಿಸಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಪ್ರತಿದಿನ ಅಪಾಯದ ನಡುವೆ ಸಂಚರಿಸುವಂತಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಪ್ರಯಾಣದ ಅವಧಿ ಹೆಚ್ಚುವುದರ ಜೊತೆಗೆ ವಾಹನಗಳ ನಿರ್ವಹಣಾ ವೆಚ್ಚವೂ ಏರಿಕೆಯಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಂಟಿಗಳು ಮತ್ತು ಕಾಡು ಸಸ್ಯಗಳು ದಟ್ಟವಾಗಿ ಬೆಳೆದಿದ್ದು, ರಸ್ತೆ ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರದ ಕೊಂಬೆ ಗಳು ವಾಲಿಕೊಂಡಿದ್ದು ಸಂಚಾರಕ್ಕೆ ಅಡ್ಡಿ
ಯಾಗುತ್ತಿವೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಿದೆ. ಕಳೆದ ಹತ್ತು ವರ್ಷಗಳಿಂದ ರಸ್ತೆಯ ದುರಸ್ತಿ ನಡೆದಿಲ್ಲ. ಪರಿಣಾಮವಾಗಿ ರಸ್ತೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಉದ್ಭವಿಸುತ್ತಿವೆ.
ಮಳೆಗಾಲ ಆರಂಭವಾಗುವ ಮುನ್ನ ರಸ್ತೆ ಬದಿಯ ಗಿಡಗಂಟಿಗಳ ತೆರವು ಮಾಡಿ, ಗುಂಡಿಗಳ ಮುಚ್ಚುವ ಹಾಗೂ ರಸ್ತೆ ಅಭಿವೃದ್ಧಿ ಪಡಿಸುವ ಕೆಲಸವಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.