ಮಾಯಕೊಂಡ ಹೋಬಳಿ ದಿಂಡದಹಳ್ಳಿ ಗ್ರಾಮದಲ್ಲಿ ಅಡಿಕೆ ಸಸಿಗಳನ್ನು ಪ್ಯಾಕೆಟ್ ಮಾಡುವ ಕಾಯಕದಲ್ಲಿ ನಿರತರಾಗಿರುವ ಕೃಷಿ ಕಾರ್ಮಿಕರು. seedling packing 
ದಾವಣಗೆರೆ

ಅಡಿಕೆ ಸಸಿ ಪ್ಯಾಕಿಂಗ್ ಕಾರ್ಯ ಚುರುಕು seedling packing

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಹೊರ ಜಿಲ್ಲೆಗಳಲ್ಲೂ ದುರ್ಗದ ಗೋಟುಗಳಿಗೆ ಭಾರಿ ಬೇಡಿಕೆ
  • ಕಾರ್ಮಿಕರಿಗೆ ಕೂಲಿ ಆಸರೆ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಯ ಸಸಿ ಸಾಕಣೆಗೆ ದಾವಣಗೆರೆ ಜಿಲ್ಲೆಯ ರೈತರು ಸಜ್ಜಾಗುತ್ತಿದ್ದಾರೆ. seedling packing
ತಾಲೂಕಿನ ಮಾಯಕೊಂಡ, ಆನಗೋಡು ಮತ್ತು ಅಣಜಿ ಹೋಬಳಿಗಳಲ್ಲಿ ಕೊಳವೆಬಾವಿ ನೀರಾವರಿ ನಂಬಿ ಅತಿ ಹೆಚ್ಚು ವಿಸ್ತೀರ್ಣದಲ್ಲಿ ಅಡಿಕೆ ತೋಟ ನಿರ್ಮಿಸಲಾಗಿದೆ. ಈ ಭಾಗದ ಕೆರೆಗಳಲ್ಲಿ ಫಲವತ್ತಾದ ಕಪ್ಪು ಜೇಡಿಮಣ್ಣು ಸಿಗುತ್ತದೆ. ಇದನ್ನು ಬಳಸಿ ಅಡಿಕೆ ಸಸಿ ಬೆಳೆಸುವುದರಿಂದ ಅವು ಉತ್ಕೃಷ್ಟವಾಗಿ ಬೆಳೆಯುತ್ತವೆ ಹಾಗೂ ನಾಟಿ ಮಾಡಿದ ನಂತರ ಸಾಕಷ್ಟು ವರ್ಷಗಳ ಕಾಲ ಉತ್ತಮ ಇಳುವರಿ ನೀಡುವ ಸಾಮರ್ಥ್ಯ ಹೊಂದುತ್ತವೆ ಎಂಬ ವಿಶ್ವಾಸ ರೈತರದು. ಹೀಗಾಗಿ ಹೊರ ಜಿಲ್ಲೆಗಳ ತೋಟಗಾರರು ಈ ಭಾಗದ ಸಸಿಗಳನ್ನು ಹುಡುಕಿ ಬಂದು ಖರೀದಿಸುತ್ತಾರೆ.
ಚಿತ್ರದುರ್ಗದ ಗೋಟುಗಳಿಗೆ ಬೇಡಿಕೆ: ಸಸಿಗಳನ್ನು ತಯಾರಿಸಲು ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ, ಹಿರೇಕಂದವಾಡಿ, ಚಿಕ್ಕಕಂದವಾಡಿ, ಚಿತ್ರಹಳ್ಳಿ, ಅಮೃತಾಪುರ, ಜಾನಕೊಂಡ, ಸಿಂಗಾಪುರ, ಮತಿಘಟ್ಟ, ಅರಶಿನಘಟ್ಟ, ಪಂಡರಹಳ್ಳಿ, ಕೊಂಡಾಪುರ, ತಾಳ್ಯ, ಜಾನಕಲ್ಲು ಮತ್ತು ಹೊರಕೆರೆದೇವರಪುರ ಭಾಗದ ಬೇಕಾಗುವ ಅಡಿಕೆ ಗೋಟುಗಳಿಗೆ ಭಾರಿ ಬೇಡಿಕೆ ಇದೆ. ಹಲವು ಭಾಗದ ರೈತರು ಇವುಗಳನ್ನೇ ಸಸಿ ಸಾಕಣೆಗೆ ಬಳಸುತ್ತಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೆಚ್ಚಾಗಿದ್ದು, ಸಸಿ ಮಾಡುವ ಗೋಟುಗಳ ಬೆಲೆ ಪ್ರತಿ ಸಾವಿರಕ್ಕೆ 4 ರಿಂದ 5 ಸಾವಿರ ನಿಗದಿಯಾಗಿದೆ.
ಗೋಟುಗಳನ್ನು ಮಣ್ಣಿನಲ್ಲಿ ಹಾಕಿ ಮೊಳಕೆ ಬರಿಸಿದ ನಂತರ, 2 ರಿಂದ 3 ಕೆಜಿ ಗಾತ್ರದ ಪ್ಲಾಸ್ಟಿಕ್ ಪ್ಯಾಕೆಟ್‌ಗಳಿಗೆ ಕಪ್ಪು ಜೇಡಿಮಣ್ಣು ತುಂಬಿಸಲಾಗುತ್ತದೆ. ಸಣ್ಣ ಸಸಿ ನೆಟ್ಟು ಮಡಿ ಮಾಡಲು ಕೃಷಿ ಕಾರ್ಮಿಕರಿಗೆ ಪ್ರತಿ ಪ್ಯಾಕೆಟ್‌ಗೆ 2 ರೂ. ರಂತೆ ಕೂಲಿ ನೀಡಲಾಗುತ್ತಿದೆ. ಈ ಸಸಿಗಳನ್ನು 1 ರಿಂದ 2 ವರ್ಷಗಳ ಕಾಲ ನೀರು, ಗೊಬ್ಬರ ನೀಡಿ ಜಾಗರೂಕತೆಯಿಂದ ಸಾಕಲಾಗುತ್ತದೆ.
ಮಾರುಕಟ್ಟೆಯಲ್ಲಿ 2 ಕೆಜಿ ಗಾತ್ರದ ಪ್ಯಾಕೆಟ್‌ಗಳಲ್ಲಿ ಒಂದು ವರ್ಷ ಸಾಕಣೆ ಮಾಡಿದ ಸಸಿ ಒಂದಕ್ಕೆ 40 ರಿಂದ 50 ಹಾಗೂ ಎರಡು ವರ್ಷದ ಸಸಿಗೆ 80 ರಿಂದ 100 ರವರೆಗೆ ಮಾರಾಟ ಮಾಡಲಾಗುತ್ತದೆ ಎಂದು ರೈತರು ಮಾಹಿತಿ ನೀಡಿದ್ದಾರೆ.
"

ದಾವಣಗೆರೆ ತಾಲೂಕಿನಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಸುಮಾರು 65 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇತ್ತು. ಆದರೆ ಭದ್ರಾ ಅಚ್ಚುಕಟ್ಟು ಮತ್ತು ಕೊಳವೆಬಾವಿ ಹೊಂದಿರುವ ರೈತರು ಅತಿ ಹೆಚ್ಚಾಗಿ ಅಡಿಕೆ ಬೆಳೆಯತ್ತ ಮುಖ ಮಾಡಿರುವುದರಿಂದ, ತಾಲೂಕಿನಲ್ಲಿ ಪ್ರಸಕ್ತ ಕೃಷಿ ಭೂಮಿ 45.5 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. ರೈತರು ಕೇವಲ ಅಡಿಕೆಯನ್ನೇ ನಂಬದೆ ಆಹಾರ ಧಾನ್ಯಗಳಾದ ರಾಗಿ, ಜೋಳ ಹಾಗೂ ದ್ವಿದಳ ಧಾನ್ಯಗಳಾದ ತೊಗರಿ, ಅವರೆ, ಅಲಸಂದೆ ಬೆಳೆಯಲೂ ಮುಂದಾಗಬೇಕು.

— ಡಿ.ಎಂ. ಶ್ರೀಧರಮೂರ್ತಿ , ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ ತಾಲೂಕು.

ದಾವಣಗೆರೆ ಜಿಲ್ಲಾದ್ಯಂತ 1.10 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. ಪ್ರತಿ ವರ್ಷ ಸರಾಸರಿ 2 ರಿಂದ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ನಾಟಿ ಹೆಚ್ಚುತ್ತಲೇ ಇದೆ. ಅಡಿಕೆ ಸಸಿಗಳನ್ನು ರೈತರು ತಾವೇ ಸಾಕಣೆ ಮಾಡಿ ಮಾರುವುದು ಆರ್ಥಿಕವಾಗಿ ಅನುಕೂಲಕರ.

— ರಾಘವೇಂದ್ರ ಪ್ರಸಾದ್ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ.

ನಮ್ಮ ಭಾಗದ ಸಸಿಗಳಿಗೆ ಉತ್ತಮ ಬೇಡಿಕೆ ಇದೆ. ಸರ್ಕಾರ ಕೆರೆ ತುಂಬಿಸುವ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರೆ ರೈತರ ಕೊಳವೆಬಾವಿಗಳ ಅಂತರ್ಜಲ ಹೆಚ್ಚಾಗಲು ಅನುಕೂಲವಾಗುತ್ತದೆ.

— ಬಿ.ಎಚ್. ಓಬಳೇಶ್ ಪ್ರಗತಿಪರ ಕೃಷಿಕ, ಲೋಕಿಕೆರೆ.