ದಾವಣಗೆರೆಯಲ್ಲಿ ಗುರುವಾರ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾಗೆ ಗಿತ್ತೆ ಮಾಧವ ವಿಠ್ಠಲರಾವ್, ರಂಗೇಗೌಡ ಸಿ. ಚಾಲನೆ ನೀಡಿದರು. ಶೇಖರ್ ಎಚ್.ಟಿ, ಶರಣ ಬಸವೇಶ್ವರ, ಇತರ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.
- ಜಿಲ್ಲಾ ಪೊಲೀಸ್ ವತಿಯಿಂದ ಆಯೋಜನೆ
- ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗಿ
ದಾವಣಗೆರೆ : ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಗುರುವಾರ, ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ, ನ್ಯಾಯಾಧೀಶ ರಂಗೇಗೌಡ ಸಿ. ಅವರು ಜಾಥಾಗೆ ಚಾಲನೆ ನೀಡಿದರು.
ಪೊಲೀಸ್ ಅಧೀಕ್ಷಕ ಶೇಖರ್ ಎಚ್.ಟಿ, ನಗರ ಡಿವೈಎಸ್ಪಿ ಶರಣ ಬಸವೇಶ್ವರ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವಸಂತ್, ಸುನೀಲ್ ಕುಮಾರ, ನಂಜುಂಡಸ್ವಾಮಿ, ಶಿಲ್ಪಾ ಇನ್ನಿತರ ಅಧಿಕಾರಿಗಳು ಇದ್ದರು.
ನಂತರ ಪಶುಸಂಗೋಪನಾ ಇಲಾಖೆ ಸಭಾಂಗಣದಲ್ಲಿ ನಗರ ಪೊಲೀಸ್ ಉಪವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಮಾತನಾಡಿ, ಕಾನೂನು ಬಾಹಿರವಾಗಿ ಮಾದಕ ವಸ್ತುಗಳ ಬಳಕೆ, ಮಾರಾಟ, ಸಾಗಾಟ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಹಾಗೂ ಕೆಎಸ್‌ಪಿ ಆ್ಯಪ್ ಮೂಲಕವೂ ತಿಳಿಸಬಹುದು. ಮಾಹಿತಿ ನೀಡಿದವರ ವಿವರವನ್ನು ಗುಪ್ತವಾಗಿ ಇಡಲಾಗುವುದು ಎಂದು ತಿಳಿಸದರು.
ಯುವ ಶಕ್ತಿಯೇ ಭಾರತದ ಸಂಪತ್ತು, ಯುವ ಸಮೂಹ ಮಾದಕ ದ್ರವ್ಯಗಳಿಗೆ ದಾಸರಾಗದೆ ಉತ್ತಮ ಭವಿಷ್ಯವನ್ನು ರೂಪಿಸುಕೊಳ್ಳುವಂತೆ ಕಿವಿಮಾತು ಹೇಳಿದರು.
ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವಸಂತ್, ಸುನೀಲ್ ಕುಮಾರ, ನಂಜುಂಡಸ್ವಾಮಿ, ಶಿಲ್ಪಾ, ಎಸ್‌ಪಿಎಸ್‌ಎಸ್ ಸೈನ್ಸ್ ಪಿಯು ಕಾಲೇಜು ಪ್ರಾಚಾರ್ಯೆ ಶರ್ಮಿಳಾ, ಪಶುಸಂಗೋಪನಾ ಇಲಾಖೆ ಅಧಿಕಾರಿ ಡಾ. ಸತೀಶ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳು, ಸಾಗಾಟ ಹಾಗೂ ಮಾರಾಟ ಮಾಡಿದರೆ ಕೈಗೊಳ್ಳುವ ಕಾನೂನು ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.