ದಾವಣಗೆರೆಯ ಕ್ರೀಡಾ ವಸತಿನಿಲಯದ ಹೊರನೋಟ.  
ದಾವಣಗೆರೆ

ಕುಸ್ತಿಯೂರಲ್ಲಿ ಕಿರಿಯರ ತರಬೇತಿಗೆ ಕಿರಿಕಿರಿ?

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾ ಇಲಾಖೆ ಸುತ್ತೋಲೆ ತಂದ ಸಂಕಟ
  • ಗೊಂದಲದಲ್ಲಿ ಜೂನಿಯರ್ ವಿದ್ಯಾರ್ಥಿಗಳು
  • ಪರಮೇಶ್ವರ್ ಭೇಟಿಗೆ ಕುಸ್ತಿಪಟುಗಳ ತಯಾರಿ
ದಾವಣಗೆರೆ: ಮಧ್ಯಕರ್ನಾಟಕ ಜಿಲ್ಲೆ ದಾವಣಗೆರೆ, ಪ್ರಸಿದ್ಧ ಕುಸ್ತಿಕಲಿಗಳ ಕೊಡುಗೆ ಕೊಟ್ಟ ಊರು. ಅನೇಕರನ್ನು ಪಳಗಿಸಿ ಪಟುವಾಗಿಸಿದ ಇತಿಹಾಸ ಇಲ್ಲಿನ ಗರಡಿಮನೆಗಳದು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರತಿನಿಧಿಸಿದವರು ಹಲವರು. ದುಗ್ಗಮ್ಮನ ಜಾತ್ರೆ, ಗಣ್ಯರ ಜನ್ಮದಿನ ಇತರೆ ಸಂದರ್ಭದಲ್ಲಿ ಬಯಲು ಜಂಗೀಕುಸ್ತಿಗೇ ಪ್ರಾಶಸ್ತ್ಯ. 8 ವರ್ಷದ ಚಿಣ್ಣರೂ ಅಖಾಡಕ್ಕಿಳಿದು ತೊಡೆ ತಟ್ಟುವುದು ಇಲ್ಲಿನ ಖಯಾಲಿ.
ಕ್ರೀಡಾ ಇಲಾಖೆಯ ಹೊಸ ಸುತ್ತೋಲೆಯಿಂದಾಗಿ ಕುಸ್ತಿಯೂರಿಗೇ ಹೊಸ ಕುತ್ತು ಎದುರಾಗಿದೆ. ಜೂನಿಯರ್‌ಗಳ ಕುಸ್ತಿ ಕಲಿಯುವಾಸೆಗೆ ಕಮರುವ ಕಾಲ ಸನ್ನಿಹಿತವಾದಂತಿದೆ. ಕುಸ್ತಿಯಾಸಕ್ತ 16 ವರ್ಷದೊಳಗಿನ ಮಕ್ಕಳಿಗೆ ನಗರದ ಕ್ರೀಡಾ ವಸತಿ ನಿಲಯದಲ್ಲಿ ಪ್ರವೇಶಾತಿ ಸಿಗುವುದು ಗೊಂದಲದಲ್ಲಿದೆ. ಇಲ್ಲಿ ಕಲಿಯುತ್ತಿದ್ದವರು ದೂರದ ಹಳಿಯಾಳ, ಬೆಳಗಾವಿ, ಧಾರವಾಡದ ಕ್ರೀಡಾ ಹಾಸ್ಟೆಲ್‌ಗಳತ್ತ ಮುಖ ಮಾಡಬೇಕಿದೆ!
ಹೊಸ ಸುತ್ತೋಲೆ ಪ್ರಕಾರ ಐದರಿಂದ ಏಳನೇ ತರಗತಿ ಮಕ್ಕಳಿಗೆ ಏಕ ಕ್ರೀಡೆಯಲ್ಲಿ ತರಬೇತಿ ನೀಡುವ ಬದಲು ಎಲ್ಲಾ ಕ್ರೀಡೆಗಳಲ್ಲಿ ತರಬೇತಿ ನೀಡುವ ಜತೆಗೆ ದೈಹಿಕ ಕ್ಷಮತೆ ಮತ್ತು ಸಾಮಾನ್ಯ ಕ್ರೀಡಾ ಕೌಶಲಗಳನ್ನು ಬೆಳೆಸಲು ಅಗತ್ಯ ವ್ಯವಸ್ಥೆ ರೂಪಿಸುವ ಉದ್ದೇಶ ವ್ಯಕ್ತವಾಗಿದೆ.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವಸತಿ ನಿಲಯಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. 5ರಿಂದ 7ನೇ ತರಗತಿ ಮಕ್ಕಳಿಗೆ ಬುನಾದಿ ತರಬೇತಿ ಕ್ರೀಡಾ ವಸತಿ ನಿಲಯಗಳಲ್ಲಿ ಅವಕಾಶ ನೀಡಿ ಫಿಟ್ನೆಸ್‌ಗೆ ಒತ್ತು ನೀಡುವ ಉದ್ದೇಶವೇನೋ ಸರಿ ಇದೆ. ಆದರೆ ಕುಸ್ತಿಗೆ ಹೆಸರಾದ ದಾವಣಗೆರೆಯಲ್ಲಿ 5ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳು ತರಬೇತಿ ಮುಂದುವರಿಕೆ ವಿಚಾರ ಗೋಜಲಲ್ಲಿದೆ.
160 ಕ್ರೀಡಾಪಟುಗಳ ಸಾಮರ್ಥ್ಯವುಳ್ಳ ದಾವಣಗೆರೆ ಕ್ರೀಡಾ ಹಾಸ್ಟೆಲ್‌ನಲ್ಲಿ ಹಿರಿಯರ ಕಬಡ್ಡಿಗೆ 40, ಖೋಖೋದಲ್ಲಿ ಹಿರಿಯರು 40 ಮತ್ತು ಕಿರಿಯರ ವಿಭಾಗದಲ್ಲಿ 20 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗಿದೆ. ಕುಸ್ತಿಯಲ್ಲಿ 60 ಹಿರಿಯ ವಿದ್ಯಾರ್ಥಿಗಳಿಗಷ್ಟೇ ಮಣೆ ಹಾಕಲಾಗಿದೆ.
ಪುನರ‌್ರಚನೆಯಾದಂತೆ ಕ್ರೀಡಾಪಟುಗಳ ಹಂಚಿಕೆಯಾಗಬೇಕು. ಕಿರಿಯರ ವಿಭಾಗಗಳಿರುವ ಕ್ರೀಡಾ ಹಾಸ್ಟೆಲ್‌ಗಳಲ್ಲಿ ಮರುವಿಂಗಡಣೆ ಮಾದರಿಯಲ್ಲಿ ಹಿರಿಯರ ವಿಭಾಗ ಸೃಜನೆಯಾಗಿದ್ದಲ್ಲಿ ಕಿರಿಯ ಕ್ರೀಡಾಪಟುಗಳನ್ನು ಅಲ್ಲಿಯೇ ಮುಂದುವರಿಸಬೇಕು ಎಂಬ ಷರತ್ತಿವೆ. ಆದರೆ ನಿರ್ದಿಷ್ಟ ಸಂಖ್ಯೆಯ ಮಾನದಂಡವನ್ನು ಹೇಗೆ ಸರಿದೂಗಿಸಬಹುದು ಎಂಬುದಿನ್ನೂ ಕುತೂಹಲದಲ್ಲಿದೆ. ಹಳಬರನ್ನು ಮುಂದುವರಿಸುವ ವಿಚಾರದಲ್ಲಿ ತರಬೇತುದಾರರು ಕೂಡ ಲಿಖಿತ ಆದೇಶದ ನಿರೀಕ್ಷೆಯಲ್ಲಿದ್ದಾರೆ.

ತರಬೇತುದಾರರ ಮನೆಯತ್ತ ಪಾಲಕರು..

ಕಳೆದ ವರ್ಷ, 5ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ 28 ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದರು. ಅವರ ಮುಂದುವರಿಕೆಗೆ ಸ್ಪಷ್ಟ ಉಲ್ಲೇಖ ಸುತ್ತೋಲೆಯಲ್ಲಿಲ್ಲ. ಎರಡು ತಿಂಗಳ ಹಿಂದಷ್ಟೇ ಆಯ್ಕೆಯಾಗಿದ್ದ 17 ಹೊಸ (ಐದನೇ ತರಗತಿ ಓದುತ್ತಿರುವವರು) ಚಿಣ್ಣರ ಪಟ್ಟಿ ಬೆಂಗಳೂರು ಕ್ರೀಡಾ ಇಲಾಖೆ ಕಚೇರಿಯ ಅನುಮೋದನೆ ಹಂತದಲ್ಲಿದೆ.
ಎಂಟನೇ ತರಗತಿ ಓದುವವರಿಗೆ ಆಯ್ಕೆ ಇನ್ನೂ ನಡೆಯಬೇಕಿದೆ. ಅಷ್ಟರೊಳಗೆ ಬಂದ ಸುತ್ತೋಲೆ ಕುಸ್ತಿಪಟುಗಳು ಹಾಗೂ ಅವರ ಪಾಲಕರನ್ನು ಗೊಂದಲಕ್ಕೆ ದೂಡಿದೆ. ಬಹುತೇಕ ಬಡವರ ಮಕ್ಕಳೇ ಕ್ರೀಡಾ ಹಾಸ್ಟೆಲ್ ಅವಲಂಬಿಸಿದ್ದಾರೆ. ಆಯ್ಕೆ ಮತ್ತು ಹಾಸ್ಟೆಲ್ ಪ್ರವೇಶಾತಿ ವಿಚಾರದಲ್ಲಿ ಅನೇಕ ಪಾಲಕರು ತರಬೇತುದಾರರ ಮನೆ ಬಾಗಿಲು ಬಡಿಯುತ್ತಿದ್ದಾರೆ.
ಸದ್ಯಕ್ಕೆ 6,7,9 ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳ ಹೊರತಾಗಿ ಹೊಸದಾಗಿ ಆಯ್ಕೆಯಾಗುವ ಐದನೇ ತರಗತಿ ಹಾಗೂ ಎಂಟನೇ ತರಗತಿ ಮಕ್ಕಳಿಗೆ ಅವಕಾಶ ಸಿಗಲಿಕ್ಕಿಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಇದು ಸಾಧ್ಯವಾದಲ್ಲಿ ಇಲ್ಲಿನ ಹಾಸ್ಟೆಲ್, ಕೆಲವೇ ವರ್ಷಗಳಲ್ಲಿ ಹಿರಿಯರ ಕುಸ್ತಿಯ ಪ್ರಾಮುಖ್ಯಕ್ಕೆ ಸೀಮಿತವಾಗುವುದು ನಿಸ್ಸಂದೇಹ.

ಶಾಲೆಗೆ ಸೇರಿಸಲು ಹಿಂದೇಟು

‘ಯಾವ ಜಿಲ್ಲೆಯ ಕ್ರೀಡಾ ಹಾಸ್ಟೆಲ್‌ನಲ್ಲಿ ಪ್ರವೇಶಾತಿ ಸಿಗುತ್ತದೆ ಎಂಬುದನ್ನು ನೋಡಿಕೊಂಡ ನಂತರವೇ ಮಗನನ್ನು ಶಾಲೆಗೆ ಸೇರಿಸುವ ಇರಾದೆ ಇದೆ ಎನ್ನುತ್ತಾರೆ ಹೆದ್ನೆ ಗ್ರಾಮದ ಹಮಾಲಿ ಕಾರ್ಮಿಕ ನಿಂಗರಾಜ್.
ನಾನು ವಿಕಲಾಂಗನಾದ್ದರಿಂದ ನನ್ನ ನೆಚ್ಚಿನ ಆಟ ಕುಸ್ತಿಯಲ್ಲಿ ಮಗ ಅದರಲ್ಲೇ ಸಾಧನೆ ಮಾಡುವಾಸೆ ಇದೆ. ಆಯ್ಕೆಯಾಗಿ ಎರಡು ತಿಂಗಳಾಗಿದೆ. ಹಾಸ್ಟೆಲ್ ಪ್ರವೇಶ ಕುರಿತಂತೆ ಸಮಂಜಸ ಉತ್ತರ ಸಿಗುತ್ತಿಲ್ಲ, ಸದ್ಯಕ್ಕೆ ಶಾಲೆಗೆ ಸೇರಿಸಿದ್ದೇನೆ ಎಂದು ಹೇಳುತ್ತಾರೆ ದಾವಣಗೆರೆಯ ಆಟೋ ಚಾಲಕ ನಾಗರಾಜ್.
ಏಷ್ಯನ್ ಸ್ಪರ್ಧೆಯಲ್ಲೂ ಮಿಂಚು..
ಇದೇ ಕ್ರೀಡಾ ನಿಲಯದ ಕುಸ್ತಿಪಟು ಜಿ.ಎಂ.ತಿಮ್ಮೇಶಿ, ಕಿರ್ಗಿಸ್ತಾನದ ಬಿಶೈಕ್ ನಗರದಲ್ಲಿ 2024-25ನೇ ಸಾಲಿನಲ್ಲಿ ಆಯೋಜಿಸಿದ್ದ 15 ವರ್ಷದೊಳಗಿನ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2025-26ನೇ ವರ್ಷದಲ್ಲಿ 17 ವರ್ಷದೊಳಗಿನವರ ಸ್ಪರ್ಧೆಯಲ್ಲೂ ಬೆಳ್ಳಿ ಪದಕ ಪಡೆದಿದ್ದರು.
ಹನುಮಂತ ವಿಠ್ಠಲ್ ಕೆಂಪಣ್ಣವರ ಅವರು ವಿಯೆಟ್ನಾಂನಲ್ಲಿ ನಿಗದಿಯಾಗಿದ್ದ 2025-26ನೇ ಸಾಲಿನ 17 ವರ್ಷದೊಳಗಿನವರ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಚಿನ್ನದ ಪದಕ ಗಳಿಸಿದ್ದರು. ಇನ್ನಷ್ಟು ಸಾಧನೆಗೆ ಪೂರಕವಾಗುವ ಅವಕಾಶ ಇಲ್ಲಿದೆ. ಹಾಗಾಗಿ ಚಿಣ್ಣರಿಗೆ ಹಿಂದಿನಂತೆಯೇ ಅವಕಾಶ ಕಲ್ಪಿಸಬೇಕೆಂಬುದು ಪಾಲಕರು, ಕ್ರೀಡಾಪಟುಗಳ ಆಶಯ.

ಹೊಸ ಸುತ್ತೋಲೆಯಲ್ಲಿ ಸ್ಪಷ್ಪಪಡಿಸಿದಂತೆ ದಾವಣಗೆರೆಯ ಕ್ರೀಡಾ ಹಾಸ್ಟೆಲ್ ಹಿರಿಯರ ಕುಸ್ತಿಗೆ ಅವಕಾಶ ಮಾಡಿಕೊಡಲಾಗಿದೆ. ಆದಾಗ್ಯೂ ಹಿಂದಿನ ವರ್ಷಗಳಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳನ್ನು ಮುಂದುವರಿಸಲಾಗುವುದು. ಹೊಸ ಆಯ್ಕೆಯಾಗುವ ಮಕ್ಕಳಿಗೆ ಅವಕಾಶ ಸಿಗದು.

— ರೇಣುಕಾದೇವಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ.

ಐದನೇ ತರಗತಿಯಿಂದಲೇ ವಿದ್ಯಾಭ್ಯಾಸದ ಜತೆಗೆ ಕುಸ್ತಿ ಕಲಿಕೆಗೆ ದಾವಣಗೆರೆ ಕ್ರೀಡಾ ಹಾಸ್ಟೆಲ್‌ನಲ್ಲಿ ಅವಕಾಶವಿತ್ತು. ಹೊಸ ಸುತ್ತೋಲೆಯಿಂದಾಗಿ ಗೊಂದಲವಾಗಿದೆ. ಸುತ್ತೋಲೆ ಮರು ಪರಿಶೀಲನೆ ಹಾಗೂ ಯಥಾಸ್ಥಿತಿ ಮುಂದುವರಿಸಲು ಆಗ್ರಹಿಸಿ ಪೈಲ್ವಾನರು ಹಾಗೂ ರಾಜ್ಯ ಕುಸ್ತಿ ಸಂಘದ ಪದಾಧಿಕಾರಿಗಳೊಂದಿಗೆ ಶೀಘ್ರವೇ ಕ್ರೀಡಾ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇವೆ.

— ಶ್ರೀನಿವಾಸ ದಾಸಕರಿಯಪ್ಪ, ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘದ ಸದಸ್ಯ.