ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ವಶಪಡಿಸಿಕೊಂಡರು.
- ವಿದ್ಯಾನಗರ, ಹರಿಹರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ
- ಪೊಲೀಸರ ಕಾರ್ಯಾಚರಣೆ
ದಾವಣಗೆರೆ : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಾವಣಗೆರೆ ವಿದ್ಯಾನಗರ ಮತ್ತು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು, ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾನಗರ ಠಾಣೆಯ ಪೊಲೀಸರು ಶಾಮನೂರು ಬೈಪಾಸ್ ಬಳಿ ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ, ಅನ್ನಭಾಗ್ಯ ಯೋಜನೆಯ 10 ಟನ್ ಅಕ್ಕಿ ಮತ್ತು 8 ಕ್ವಿಂಟಾಲ್ ರಾಗಿಯನ್ನು ವಶಪಡಿಸಿಕೊಂಡಿದ್ದಾರೆ.
ಹರಿಹರದಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಯೊಂದನ್ನು ಶಾಮನೂರು ಬೈಪಾಸ್ ಬಳಿ ತಡೆದ ಪೊಲೀಸರು ತಪಾಸಣೆ ಮಾಡಿದಾಗ ಅದರಲ್ಲಿ ಅಕ್ಕಿ ಮತ್ತು ರಾಗಿಯ ಚೀಲಗಳು ಕಂಡುಬಂದಿವೆ. ಅವುಗಳ ಸಾಗಾಣಿಕೆಗೆ ಚಾಲಕನ ಬಳಿ ಸರಿಯಾದ ದಾಖಲೆಗಳು ಇರಲಿಲ್ಲ. ಹಾಗಾಗಿ ಪೊಲೀಸರು ಲಾರಿ ಸಮೇತ ಅವುಗಳನ್ನು ವಶಕ್ಕೆ ಪಡೆದರು.
ಆಹಾರ ನಿರೀಕ್ಷಕ ಟಿ. ಮಂಜುನಾಥ್ ಠಾಣೆಗೆ ಆಗಮಿಸಿ, ಲಾರಿಯಲ್ಲಿದ್ದ ಅಕ್ಕಿ, ರಾಗಿಯನ್ನು ಪರಿಶೀಲಿಸಿದಾಗ, ಪಡಿತರ ವ್ಯವಸ್ಥೆಯ ಧಾನ್ಯಗಳನ್ನು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿಸಿ ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ದೃಢಪಟ್ಟಿದೆ. ಆಹಾರ ನಿರೀಕ್ಷಕ ಟಿ. ಮಂಜುನಾಥ್ ನೀಡಿದ ದೂರನ್ನು ಸ್ವೀಕರಿಸಿದ ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹರಿಹರ ಪ್ರಕರಣ: ಹರಿಹರ ಹೊರ ವಲಯದ ಹರಗನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಕ್ಯಾಂಟರ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 4.50 ಲಕ್ಷ ಮೌಲ್ಯದ 330 ಚೀಲ ಪಡಿತರ ಅಕ್ಕಿಯನ್ನು ಗುರುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಅಕ್ಕಿಯನ್ನು ಲಕ್ಷ್ಮೇಶ್ವರದಿಂದ ಮಂಡ್ಯ ನಗರಕ್ಕೆ ಸಾಗಿಸಲಾಗುತ್ತಿತ್ತು. ವಾಹನವನ್ನು ತಡೆದ ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.