ಹರಿಹರದ ಮೈತ್ರಿವನದಲ್ಲಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಯಿಂದ ಮಂಗಳವಾರ ಎರಡು ದಿನಗಳ ಜಿಲ್ಲಾ ಮಟ್ಟದ ಪದಾಧಿಕಾರಿಗಳ ತರಬೇತಿ ಶಿಬಿರವನ್ನು ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ ಉದ್ಘಾಟಿಸಿದರು. ಪ್ರೊ.ಬಿ.ಎಲ್. ರಾಜು ಇತರರು ಇದ್ದರು. Ambedkar 
ದಾವಣಗೆರೆ

ಶೋಷಿತರ ವಿಮೋಚನೆಗಾಗಿ ಅಂಬೇಡ್ಕರ್ ಹೋರಾಟ

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ಪ್ರೊ.ಬಿ.ಎಲ್. ರಾಜು ಅಭಿಪ್ರಾಯ
  • ಡಿಎಸ್‌ಎಸ್‌ನಿಂದ ಎರಡು ದಿನ ಶಿಬಿರ
ಹರಿಹರ: ಶೋಷಿತರ ವಿಮೋಚನೆಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಮಾಡಿದ ಹೋರಾಟ ದೇಶದ ನಾಯಕರ ಯೋಚನಾಲಹರಿಯನ್ನು ಬದಲಾಯಿಸಲು ಯಶಸ್ವಿ ಯಾಯಿತು ಎಂದು ಉಪನ್ಯಾಸಕ ಪ್ರೊ.ಬಿ.ಎಲ್. ರಾಜು ಹೇಳಿದರು. Ambedkar
ನಗರದ ಮೈತ್ರಿವನ ಸಭಾಂಗಣದಲ್ಲಿ ಮಂಗಳವಾರ ಮಾನವ ಬಂಧುತ್ವ ವೇದಿಕೆಯ ಸಹಭಾಗಿತ್ವದಲ್ಲಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಯಿಂದ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಪದಾಧಿಕಾರಿಗಳ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ವಾತಂತ್ರೃ ಪೂರ್ವದಲ್ಲಿ ಬಹುತೇಕ ಮೇಲ್ವರ್ಗದ ಆಡಳಿತಗಾರರಿಗೆ ಶೋಷಿತರ ನೋವು ಅರಿವಿರಲಿಲ್ಲ. ಮಾನವರೆಲ್ಲ ಸಮಾನರು ಎಂಬ ತತ್ವ ಅರಿತಿದ್ದ ಅಂಬೇಡ್ಕರ್ ಅವರ ದೃಢ ನಿಲುವಿನ ಪರಿಣಾಮದಿಂದಾಗಿ ಆಡಳಿತಗಾರರಲ್ಲಿ ದಲಿತರ ಕುರಿತಾದ ಯೋಚನೆ ಬದಲಾಯಿತು ಎಂದರು.
ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ದೇಶದ ಎಲ್ಲರಿಗೂ ಸಮಾನ ಸ್ಥಾನಮಾನ ದೊರೆ ುಲು ಸಾಧ್ಯವಾಗಿದೆ. ಆದರೆ, ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತ ಮಾಡಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1970ರ ದಶಕದ ಜೆ.ಪಿ. ಚಳವಳಿ, ದಲಿತ ಪ್ಯಾಂಥರ್ ಚಳವಳಿ, ಸಮಾಜವಾದಿ ಯೋಜನಾ ಸಭಾ, ತುರ್ತು ಪರಿಸ್ಥಿತಿ ಹಾಗೂ ಅಮೇರಿಕಾದ ಬಿಳಿಯರ ದಬ್ಬಾಳಿಕೆ ವಿರುದ್ಧದ ಚಳವಳಿಗಳು ಭಾರತದಲ್ಲಿ ಬದಲಾವಣೆಯಲ್ಲಿ ಅಪಾರ ಪರಿಣಾಮ ಬೀರಿತು ಎಂದರು.
ಸಂಘಟನೆಯ ಪ್ರತಿ ಕಾರ್ಯಕರ್ತರೂ ಭಾರತದ ಇತಿಹಾಸ ಹಾಗೂ ಪ್ರಭಾವಿ ನಾಯಕರ ಪರಿಚಯ ಮಾಡಿಕೊಳ್ಳಬೇಕು. ದೇಶದ ಕಾನೂನು, ಕಾಯ್ದೆ, ಬೆಳವಣಿಗೆಗಳನ್ನು ಅರಿಯುವುದರಿಂದ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಲು ಸಾಧ್ಯ ಎಂದು ಹೇಳಿದರು.
ಶಿಬಿರದಲ್ಲಿ ತಮಟೆ, ಕ್ರಾಂತಿ ಗೀತೆ ಹಾಗೂ ಸಂಘಟನೆಯ ಪದ್ಧತಿ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ಜಿಲ್ಲೆಯ ಆರು ತಾಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಎಂ. ಏಳುಕೋಟಿ, ಸಿದ್ದರಾಮಣ್ಣ ಬುಳ್ಳ ಸಾಗರ, ಅತ್ತಿಗೊಂದಿ ಕರಿಯಪ್ಪ, ಕುಂದವಾಡ ಮಂಜುನಾಥ, ಪಿ.ಜೆ. ಮಹಾಂತೇಶ್ ಹರಿಹರ, ವಿಜಯಲಕ್ಷ್ಮೀ, ಚನ್ನಗಿರಿ ಚಿತ್ರಲಿಂಗಪ್ಪ, ಜಗಳೂರು ಕುಬೇರಪ್ಪ, ನ್ಯಾಮತಿ ಚಂದ್ರಪ್ಪ, ಮಾಲತೇಶ ಕುಂದವಾಡ, ಜೀವನ್, ಹಾಲೇಶ್, ಆವರಗೊಳ್ಳ ದೊಡ್ಡಪ್ಪ, ಕಡ್ಲೆಗೊಂದಿ ತಿಮ್ಮಣ್ಣ, ಡಿ. ರಾಮಪ್ಪ ಹಿಂಡಸಘಟ್ಟ, ಎಂ.ಎಸ್. ಮಂಜುನಾಥ ಕೊಕ್ಕನೂರು, ಚೌಡಪ್ಪ ಭಾನುವಳ್ಳಿ, ಅಂಜಿನಪ್ಪ, ಹನುಮಂತಪ್ಪ, ಸಂಜೀವ್ ಇತರರು ಇದ್ದರು.