ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಗುರುವಾರ ನಡೆದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಹಿರಿಯ ಯೋಗ ತಜ್ಞ ಡಾ. ರಾಘವೇಂದ್ರ ಗುರೂಜಿ ಯೋಗದ ಕುರಿತು ಉಪನ್ಯಾಸ ನೀಡಿದರು.
- ಡಾ. ರಾಘವೇಂದ್ರ ಗುರೂಜಿ ಅಭಿಮತ
- ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರ
ದಾವಣಗೆರೆ : ಯೋಗವು ಮಾನವನ ಸರ್ವತೋಮುಖ ಅಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು, ನಗರದ ಆದರ್ಶ ಯೋಗ ಪ್ರತಿಷ್ಠಾನ, ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗಚಿಕಿತ್ಸಾ ಕೇಂದ್ರದ ಮುಖ್ಯಸ್ಥ, ಹಿರಿಯ ಯೋಗ ತಜ್ಞ ಡಾ. ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.
ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಗುರುವಾರ ನಡೆದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ‘ಯೋಗ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು’ ಎಂಬ ವಿಷಯದ ಕುರಿತು ಮಾತನಾಡಿದರು.
ಯೋಗವು ಉತ್ತಮವಾಗಿ ಬದುಕುವುದಕ್ಕೆ ಸಂಬಂಧಿಸಿದ ವಿಜ್ಞಾನ. ಆದ್ದರಿಂದ ಇದನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಯೋಗವು ಪ್ರತಿಯೊಬ್ಬ ವ್ಯಕ್ತಿಯ ಶಾರೀರಿಕ, ಮಾನಸಿಕ, ಭಾವನಾತ್ಮಕ, ಭೌತಿಕ ಹಾಗೂ ಆಧ್ಯಾತ್ಮಿಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಸಮಗ್ರ ದೇಹದ ವಿವಿಧ ಕಾರ್ಯ ಚಟುವಟಿಕೆಯಲ್ಲಿ ಪರಿಪೂರ್ಣ ಸಮನ್ವಯತೆ ಉಂಟುಮಾಡುತ್ತದೆ ಎಂದರು.
ಯೋಗವಾಸಿಷ್ಠದಲ್ಲಿ ‘ಮನಃ ಪ್ರಶಮನೋಪಾಯ ಯೋಗಃ ಇತ್ಯಭಿದೀಯತೇ’ ಎಂದು ಹೇಳಿದ್ದಾರೆ. ಅಂದರೆ ಮನಸ್ಸನ್ನು ಪ್ರಶಾಂತಗೊಳಿಸುವ ಕ್ರಮಬದ್ಧವಾದ ಸುಂದರ ಉಪಾಯವೇ ಯೋಗವಾಗಿದೆ ಎಂದು ತಿಳಿಸಿದರು.
ನಮಗೆ ಪರಿಚಿತವಾಗಿರುವ ಯೋಗವು ಪುನರುಜ್ಜಿವನಗೊಂಡಿರುವ ಆಧ್ಯಾತ್ಮಿಕ ವಿಜ್ಞಾನ ಪರಂಪರೆಯ ಬಹುಮುಖ್ಯ ಭಾಗವಾಗಿದೆ. ಯೋಗಶಾಸ್ತ್ರವು 5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ತಾಂತ್ರಿಕ ನಾಗರಿಕತೆಯ ಅಂಗಗಳಲ್ಲಿ ಕಂಡು ಬಂದಿರುತ್ತದೆ. ಈಗಿನ ಪಾಕಿಸ್ತಾನದಲ್ಲಿರುವ ಹರಪ್ಪಾ, ಮಹೆಂಜೋದಾರೋಗಳ ಸಿಂಧು ನದಿಯ ತಟದ ಕಣಿವೆಯಲ್ಲಿ ಉತ್ಖನನ ಮಾಡಿದಾಗ ಶಿವ-ಪಾರ್ವತಿಯರನ್ನು ಹೋಲುವ ಅನೇಕ ವಿಗ್ರಹಗಳು ದೊರೆತಿವೆ. ಈ ಮೂರ್ತಿಗಳ ವಿವಿಧ ಭಂಗಿಗಳು ಯೋಗಾಸನಗಳನ್ನು ಹಾಗೂ ಧ್ಯಾನದ ಭಂಗಿಗಳನ್ನು ನಿರೂಪಿಸಿವೆ ಎಂದರು.
ಆಧುನಿಕ ವಿಜ್ಞಾನವು ವಿಫಲಗೊಂಡ ಸಂದರ್ಭದಲ್ಲಿ ಯೋಗವನ್ನು ಪರ್ಯಾಯ ಚಿಕಿತ್ಸಾ ಪದ್ಧತಿಯನ್ನಾಗಿ ಇಂದು ಅನುಸರಿಸಲಾಗುತ್ತಿದೆ. ನಿರ್ನಾಳ ಗ್ರಂಥಿ ವ್ಯವಸ್ಥೆ ಮತ್ತು ನರಮಂಡಲಗಳ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಮರ್ಥ್ಯ ಯೋಗದಲ್ಲಿ ಇರುವುದರಿಂದ ಇದು ಅತ್ಯಂತ ಯಶಸ್ವಿ ಪರ್ಯಾಯ ಚಿಕಿತ್ಸೆಯಾಗಿದೆಯೆಂದು ವೈದ್ಯಕೀಯ ವಿಜ್ಞಾನಿಗಳು ಸಹ ಅಭಿಪ್ರಾಯ ಪಡುತ್ತಿದ್ದಾರೆ ಎಂದು ತಿಳಿಸಿದರು.
ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಜಿ. ಗುರುಪ್ರಸಾದ್, ಮಕ್ಕಳ ತಜ್ಞರಾದ ಡಾ. ಬಾಣಾಪುರಮಠ್, ಡಾ. ಸುರೇಶ್ ಬಾಬು, ಬಾಪೂಜಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ.ಕುಮಾರ್, ಆಸ್ಪತ್ರೆಯ ವ್ಯವಸ್ಥಾಪಕ ಗುಬ್ಬಿ, ಡಾ. ಕೌಜಲಗಿ, ಡಾ.ಮೃತ್ಯುಂಜಯ, ಡಾ. ರೇವಪ್ಪ, ಮಕ್ಕಳ ಪಾಲಕರು, ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ ಇದ್ದರು.