ದಾವಣಗೆರೆಯಲ್ಲಿ ಭಾನುವಾರ ನಡೆದ, ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿ.ಎಸ್. ಉಗ್ರಪ್ಪ, ನರಸಿಂಹಯ್ಯ, ಎಚ್.ಸಿ. ಹನುಮಂತಯ್ಯ, ರಾಜಪ್ಪ, ರಾಜಣ್ಣ, ಹುಚ್ಚವ್ವನಹಳ್ಳಿ ಮಂಜುನಾಥ್, ಶ್ಯಾಗಲೆ ಮಂಜುನಾಥ್, ಭೀಮಪುತ್ರಿ ರೇವತಿ ರಾಜ್ ಇದ್ದರು. 
ದಾವಣಗೆರೆ

ಪ್ರಧಾನಿ ಬಳಿಗೆ ಸರ್ವ ಪಕ್ಷ ನಿಯೋಗ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಉಗ್ರಪ್ಪ ಆಗ್ರಹ
  • ಮೀಸಲು ಹೆಚ್ಚಳ ಕಾಯ್ದೆ ವಿಚಾರ
  • ಸಮಾನ ಮನಸ್ಕರ ವೇದಿಕೆ ಸಭೆ
ದಾವಣಗೆರೆ : ರಾಜ್ಯದಲ್ಲಿ ಶೇ. 50ರಿಂದ 56ಕ್ಕೆ ಹೆಚ್ಚಿಸಿರುವ ಮೀಸಲಾತಿ ಪ್ರಮಾಣ ಊರ್ಜಿತಗೊಳ್ಳಬೇಕಾದರೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ದು, ಮೀಸಲು ಹೆಚ್ಚಳ ಕಾಯ್ದೆಯನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಒತ್ತಡ ಹೇರಬೇಕು ಎಂದು ಮಾಜಿ ಸಂಸದ, ವಾಲ್ಮೀಕಿ ನಾಯಕ ಸಮುದಾಯದ ಮುಖಂಡ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಮಂಡಲದ ಒಳಗಡೆ ನಾಯಕ ಸಮುದಾಯದ ರಾಜಕಾರಣಿಗಳು ಮತ್ತು ಹೊರಗಡೆ ಸ್ವಾಮೀಜಿ, ವಾಲ್ಮೀಕಿ ನಾಯಕ ಸಮುದಾಯದ ಜನರು ನಡೆಸಿದ ಹೋರಾಟದಿಂದಾಗಿ ಬಸವರಾಜ ಬೊಮ್ಮಾಯಿ ಸರ್ಕಾರ ಎಸ್ಟಿಗೆ ಇದ್ದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ, ಎಸ್ಸಿಗಳಿಗಿದ್ದ ಶೇ. 15ರಷ್ಟು ಮೀಸಲನ್ನು 17ಕ್ಕೆ ಏರಿಸಿತು. ಇದರೊಂದಿಗೆ ಒಬಿಸಿಗಳಿಗೆ ಇರುವ ಶೇ. 32 ಮೀಸಲು ಸೇರಿ ರಾಜ್ಯದಲ್ಲಿ ಶೇ. 56 ರಷ್ಟು ಮೀಸಲಾತಿಯಾಗಿದೆ ಎಂದು ತಿಳಿಸಿದರು.
ಹೀಗೆ ಕರ್ನಾಟಕದಲ್ಲಿ ಶೇ. 50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿ ನೀಡಲು ಮುಂದಾಗಿರುವುದಕ್ಕೆ ಕೆಎಟಿನಲ್ಲಿ ಸೆಟ್‌ಸೈಡ್ ಮತ್ತು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ನೀಡಲಾಗಿದೆ. ಆದ್ದರಿಂದ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಾಗಿದ್ದರೂ ಅದರ ಲಾಭ ಪಡೆಯಲಾಗದೇ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ನಡೆದ ಬೆಳಗಾವಿ ಅವೇಶನದಲ್ಲಿ ರಾಜ್ಯದಲ್ಲಿ ಹಂಚಿಕೆ ಮಾಡಿರುವ ಶೇ. 56 ರಷ್ಟು ಮೀಸಲಾತಿಯನ್ನು ಮುಂದುವರಿಸಲು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕೆಂಬ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ, ಕೇವಲ ನಿರ್ಣಯ ಕೈಗೊಳ್ಳುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದರು.
ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಶೇ. 10 ರಷ್ಟು ಮೀಸಲಾತಿಯಂತೆ ಶೇ. 50 ರಷ್ಟು ಮೀಸಲಾತಿ ಪ್ರಮಾಣದ ನಿಗದಿಯನ್ನು ಸಡಿಲಿಸಿ, ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸಂವಿಧಾನದಲ್ಲಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಬದುಕಿನ ಜತೆಯಲ್ಲಿ ಚೆಲ್ಲಾಟ ಆಡಬಾರದು. ಮೀಸಲಾತಿ ಭಿಕ್ಷೆಯಲ್ಲ, ಇದು ನಮ್ಮ ಹಕ್ಕು. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ನರಸಿಂಹಯ್ಯ, ಎಚ್.ಸಿ. ಹನುಮಂತಯ್ಯ, ರಾಜಪ್ಪ, ಗುಮ್ಮನೂರು ಮಲ್ಲಿಕಾರ್ಜುನ್, ರಾಜಣ್ಣ, ಶ್ರೀನಿವಾಸ ದಾಸಕರಿಯಪ್ಪ, ಬಿ. ವೀರಣ್ಣ, ಹುಚ್ಚವ್ವನಹಳ್ಳಿ ಮಂಜುನಾಥ್, ಶ್ಯಾಗಲೆ ಮಂಜುನಾಥ್, ಭೀಮಪುತ್ರಿ ರೇವತಿ ರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ಮೀಸಲಾತಿ ಯಾರಪ್ಪನ ಸ್ವತ್ತಲ್ಲ. ಬುಡಕಟ್ಟು ಪರಂಪರೆ ಹಿನ್ನೆಲೆ ಇರುವವರು ಮತ್ತು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ಸಮುದಾಯ ಎಸ್ಟಿ ಸೇರ್ಪಡೆಗೆ ಅವಕಾಶ ಇದೆ. ಆರಂಭದಲ್ಲಿ ಕುಲಶಾಸ್ತ್ರ ಅಧ್ಯಯನ ನಡೆಸಿದ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಮತ್ತು ಕುರುಬ ಎರಡೂ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ತರುವಂತೆ ಶಿಫಾರಸು ಮಾಡಲಾಗಿತ್ತು. ಆದರೆ, ಎರಡೂ ತಿರಸ್ಕೃತಗೊಂಡಿದ್ದವು. ಬಳಿಕ ಕುರುಬ ಸಮುದಾಯದವರು ಸುಮ್ಮನಾದರು. ನಾವು ಹೋರಾಟ ಮಾಡಿ ಎಸ್ಟಿ ಮೀಸಲು ಪಡೆದೆವು. ಈಗ ಯಾವುದೇ ಸಮುದಾಯವನ್ನು ಎಸ್ಟಿಗೆ ಸೇರಿಸಲು ನಮ್ಮ ವಿರೋಧವಿಲ್ಲ. ಆದರೆ, ಆ ಸಮುದಾಯಗಳು ಈಗ ಬೇರೆ ಪ್ರವರ್ಗದಲ್ಲಿ ಪಡೆಯುತ್ತಿರುವ ಮೀಸಲಾತಿಯೊಂದಿಗೆ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಯಾಗಲಿ.