ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿರುವ ಹಾಲು ಶಿತಲೀಕರಣ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು. ಎಂ.ಪಿ. ರೇಣುಕಾಚಾರ್ಯ, ಬಿ.ಜಿ. ಬಸವರಾಜಪ್ಪ, ಬಸಪ್ಪ, ಡಿ.ಜಿ. ವಿಶ್ವನಾಥ್, ಜಗದೀಶಪ್ಪ ಬಣಕಾರ್, ಡಿ.ಜಿ. ಸುರೇಂದ್ರ ಇದ್ದರು.
- ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯ
- 72ನೇ ಅಖಿಲ ಭಾರತ ಸಹಕಾರ ಸಪ್ತಾಹ
- ಸಕಾಲದಲ್ಲಿ ಸಾಲ ಮರುಪಾವತಿಗೆ ಸಲಹೆ
ಹೊನ್ನಾಳಿ: ಜವಾಹರಲಾಲ್ ನೆಹರು ಅವರು ಪ್ರಧಾನಮಂತ್ರಿಯಾಗಿದ್ದಾಗ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಸಹಕಾರ ಸಂಘಗಳ ಸ್ಥಾಪನೆಗೆ ತಮ್ಮ ಬಜೆಟ್‌ನಲ್ಲಿ ಹಣ ಮೀಸಲಿರಿಸಿದ್ದರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕಿನ ಗೊಲ್ಲರಹಳ್ಳಿಯಲ್ಲಿರುವ ಹಾಲು ಶಿತಲೀಕರಣ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷ ನವೆಂಬರ್ 14 ರಿಂದ 21 ರವರೆಗೆ ದೇಶಾದ್ಯಂತ ಸಹಕಾರ ಸಪ್ತಾಹ ನಡೆಯುತ್ತಿದ್ದು, ಅಲ್ಲಿ ಸಂಘದ ಅಭಿವೃದ್ಧಿ ಕುರಿತು ವಿಚಾರಗಳು ಮಂಡನೆಯಾಗಲಿವೆ. ಹಾಲು ಉತ್ಪಾದಕರ ಸಂಘಗಳು ಕುಟುಂಬಗಳ ನಿರ್ವಹಣೆಯ ಜತೆಗೆ ಮಕ್ಕಳ ಶಿಕ್ಷಣಕ್ಕೂ ಸಹಕಾರಿಯಾಗಿವೆ. ಎಷ್ಟೋ ಮಹಿಳೆಯರು ಹೈನೋದ್ಯಮದಲ್ಲಿ ಬಂದ ಹಣದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸಹಕಾರ ಸಂಘಗಳ ಪಿತಾಮಹ ಸಿದ್ದನಗೌಡರು ತಮ್ಮ ಚಿಂತನೆಗಳಿಂದ ಮನೆ ಮಾತಾಗಿದ್ದಾರೆ. ಇಂದು ದೇಶಾದ್ಯಂತ ಸಹಕಾರ ಸಂಘಗಳು ತಲೆ ಎತ್ತಿದ್ದು, ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿವೆ ಎಂದು ತಿಳಿಸಿದರು.
ಸಹಕಾರ ಸಂಘಗಳು ಇಲ್ಲದಿದ್ದರೆ ನಾವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಪರದಾಡಬೇಕಾಗುತ್ತಿತ್ತು. ಇಂದು ಸಹಕಾರ ಸಂಘಗಳು, ಪತ್ತಿನ ಸಂಘಗಳ ಮೂಲಕ ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದು ಎಂದರು.
ಸಹಕಾರ ಸಂಘಗಳಲ್ಲಿ ಪಡೆದ ಸಾಲ ಸಕಾಲದಲ್ಲಿ ಮರುಪಾವತಿ ಮಾಡಿದರೆ ಇತರ ರೈತರು ಸಾಲ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಆದ್ದರಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಎಂದು ಷೇರುದಾರರಿಗೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಕೆಎಂಎಫ್ ನಿರ್ದೇಶಕ ಬಿ.ಜಿ.ಬಸವರಾಜಪ್ಪ ಮಾತನಾಡಿ, ಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ ಮತ್ತು ಸಹಕಾರ ಸಂಘಗಳು ಇದ್ದರೆ ಆ ಗ್ರಾಮ ಅಭಿವೃದ್ಧಿಯಾದಂತೆ. ಹಾಲಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ಆರ್ಥಿಕ ಸ್ಥಿತಿಗತಿ ಉತ್ತಮಪಡಿಸಿವೆ. ನಮ್ಮಲ್ಲಿ 114 ಸಂಘಗಳಿದ್ದು, ಅವೆಲ್ಲವೂ ಲಾಭದಲ್ಲಿವೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಕೆ. ಬಸಪ್ಪ, ಡಿ.ಜಿ. ವಿಶ್ವನಾಥ್, ಸಹಕಾರಿ ಧುರೀಣ ಜಗದೀಶಪ್ಪ ಬಣಕಾರ್ ಮಾತನಾಡಿದರು.
ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಮರುಳಸಿದ್ದಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಚ್. ಷಣ್ಮುಖಪ್ಪ, ನಿರ್ದೇಶಕ ಡಿ.ಎಸ್. ಸುರೇಂದ್ರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಜಿ. ರಮೇಶ್, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷೆ ಎಚ್. ಜಿ. ಮಂಜುಳಾ ಗಣೇಶ್, ಶೇಖರ್, ಸಂಜೀವ್ ಕುಮಾರ್, ಮಧು ಶ್ರೀನಿವಾಸ್ ಇತರರು ಇದ್ದರು.