ಚನ್ನಗಿರಿ: ಕೊಲೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿ ಬಂದಿದ್ದ ಮದ್ಯವ್ಯಸನಿಯೊಬ್ಬ ಈಗ ಜನ್ಮ ನೀಡಿದ ತಾಯಿಯನ್ನೇ ಹತ್ಯೆಗೈದ ಪ್ರಕರಣ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಬುಳ್ಳಮ್ಮ (71) ಕೊಲೆಯಾದ ಮಹಿಳೆ.
ದಾವಣಗೆರೆ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಬುಳ್ಳಮ್ಮ ಅವರ ಮಗ ಹನುಮಂತಪ್ಪ (35) ಕುಡಿತದ ಚಟಕ್ಕೆ ದಾಸನಾಗಿದ್ದು ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುತ್ತಿದ್ದ ಎನ್ನಲಾಗಿದೆ. ಬುಳ್ಳಮ್ಮ ಅವರಿಗೆ ಒಟ್ಟು 10 ಮಕ್ಕಳಿದ್ದು ಅವರಲ್ಲಿ ಆರೋಪಿ ಹನುಮಂತ ಒಂಭತ್ತನೇ ಮಗ.
ವಿಜಯಪುರ ಜಿಲ್ಲೆ ಹಲಕನಾಳು ಗ್ರಾಮದ ಬುಳ್ಳಮ್ಮ ಅವರು ಮೂವರು ಹೆಣ್ಣು ಮಕ್ಕಳನ್ನು ತಾಲೂಕಿನ ದೊಡ್ಡಘಟ್ಟ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿದ್ದು, ಮೂರು ತಿಂಗಳ ಹಿಂದೆ ಮಗಳು ಸಾವಿತ್ರಮ್ಮ ಮನೆಗೆ ಬಂದಿದ್ದರು. ದಾವಣಗೆರೆಯಲ್ಲಿದ್ದ ಹನುಮಂತಪ್ಪ ಗುರುವಾರ ಮಧ್ಯಾಹ್ನ ಅಕ್ಕ ಶಾರದಮ್ಮ ಅವರ ಮನೆಗೆ ಬಂದಿದ್ದ. ಸಂಜೆ ಪಕ್ಕದ ಮನೆಯಲ್ಲೇ ಇರುವ ಮತ್ತೊಬ್ಬ ಸಹೋದರಿ ಸಾವಿತ್ರಮ್ಮ ಮನೆಗೆ ಹೋಗಿ ಬರುತ್ತೇನೆ ಎಂದು ಶಾರದಮ್ಮಗೆ ಹೇಳಿ ಹೋಗಿದ್ದ. ಸಾವಿತ್ರಮ್ಮ ಅವರ ಮನೆಯಲ್ಲಿ ತಾಯಿ ಬುಳ್ಳಮ್ಮ ಒಬ್ಬರೇ ಇರುವುದನ್ನು ಕಂಡು ಕುಡಿಯಲು ಹಣ ಕೇಳಿದ್ದಾನೆ. ಹಣ ನೀಡದೇ ಇದ್ದಾಗ ಹನುಮಂತ ತಾಯಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ ದೊಣ್ಣೆಯಿಂದ ಮುಖಕ್ಕೆ ಹೊಡೆದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಲೆ ಮಾಡಿದ ಬಳಿಕ ವಾಪಸ್ ಶಾರದಮ್ಮ ಅವರ ಮನೆಗೆ ಹೋಗಿದ್ದಾನೆ. ಅಮ್ಮನ ಬಳಿ ಏನು ಮಾತಾಡಿ ಬಂದೆ ಎಂದು ಶಾರದಮ್ಮ ಪ್ರಶ್ನಿಸಿದಾಗ ಏನೂ ಉತ್ತರ ನೀಡಿಲ್ಲ. ತಾಯಿಯನ್ನೇ ಕೇಳೋಣ ಎಂದು ಪಕ್ಕದಲ್ಲಿರುವ ಸಹೋದರಿ ಮನೆಗೆ ಹೋದಾಗ ತಾಯಿ ಕೊಲೆಯಾಗಿರುವುದು ಗೊತ್ತಾಗಿದೆ. ಶಾರದಮ್ಮ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.