ಹೊನ್ನಾಳಿಯಲ್ಲಿ ಭಾನುವಾರ ಪ್ರತಿಭಾ ಪ್ರೇರಣೆ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿ.ಬಿ. ವಿನಯ್ ಕುಮಾರ್, ರಾಜು ಕಡಗಣ್ಣಾರ್, ಶರತ್ ಕುಮಾರ್, ಪಾಲಕ್ಷಪ್ಪ, ದೇವರಾಜ್, ಸುದೀಪ್ ದಿಡಗೂರು, ಮಂಜುನಾಥ್ ಇತರರಿದ್ದರು. poor talent
- ಐಎಎಸ್ ಇನ್‌ಸೈಟ್ಸ್‌ನ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಹೇಳಿಕೆ
- ಪ್ರತಿಭಾ ಪ್ರೇರಣೆ ಕಾರ್ಯಕ್ರಮ
ಹೊನ್ನಾಳಿ: ಬಡ ವಿದ್ಯಾರ್ಥಿಗಳಲ್ಲಿ ಅದ್ಭುತ ಪ್ರತಿಭೆ ಇದ್ದರೂ ಆರ್ಥಿಕ ಅಸಮಾನತೆಯಿಂದ ಅವರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಬಡ ಪ್ರತಿಭೆಗಳಿಗೆ ಉನ್ನತ ಶಿಕ್ಷಣ ಕೊಡಿಸಿ ಸಮಾಜದ ಉನ್ನತ ಸ್ಥಾನ ಅಲಂಕರಿಸುವಂತೆ ಮಾಡುವುದೇ ನನ್ನ ಮುಖ್ಯ ಗುರಿ ಎಂದು ಸ್ವಾಭಿಮಾನ ಬಳಗದ ರಾಜ್ಯಾಧ್ಯಕ್ಷ ಹಾಗೂ ಐಎಎಸ್ ಇನ್‌ಸೈಟ್ಸ್‌ನ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಹೇಳಿದರು.
ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಭಾನುವಾರ ಸ್ವಾಭಿಮಾನ ಬಳಗದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪ್ರೇರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ದಿಕ್ಸೂಚಿ ಭಾಷಣ ಮಾಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆಯುವುದು ಸುಲಭವಲ್ಲ. ಕಷ್ಟಪಟ್ಟು ಅಂಕ ಗಳಿಸಿದ ಇಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಭವಿಷ್ಯದ ದಾರಿ ತೋರಿಸುವುದು ಅಗತ್ಯವಾಗಿದೆ. ನಮ್ಮ ಸಂಸ್ಥೆ ಆರಂಭವಾಗಿ 12 ವರ್ಷಗಳಾಗಿದ್ದು, ಇಲ್ಲಿಯವರೆಗೆ 1500 ಕ್ಕೂ ಹೆಚ್ಚು ಯುಪಿಎಸ್‌ಸಿ ಟಾಪರ್ಸ್‌ಗಳನ್ನು ದೇಶಕ್ಕೆ ನೀಡಿದೆ. ವಿದ್ಯಾರ್ಥಿಗಳು ನಿರಂತರವಾಗಿ ಪುಸ್ತಕಗಳನ್ನು ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸತತವಾಗಿ ಪುಸ್ತಕ ಓದುವವರಲ್ಲಿ ಜ್ಞಾನದ ಜತೆಗೆ ಸಂಸ್ಕಾರವೂ ಮೂಡುತ್ತದೆ ಎಂದರು.
ಪ್ರಸ್ತುತ ದಿನಗಳಲ್ಲಿ ಉನ್ನತ ಶಿಕ್ಷಣ ಹಾಗೂ ತರಬೇತಿಗಳು ಕೇವಲ ಉಳ್ಳವರ ಪಾಲಾಗುತ್ತಿವೆ. ಈ ವ್ಯವಸ್ಥೆ ಬದಲಾಗಬೇಕು. ಕುರಿ ಕಾಯುವವನ ಮಗನೂ ಐಎಎಸ್, ಐಪಿಎಸ್ ಅಧಿಕಾರಿಯಾಗಿ ಉನ್ನತ ಸ್ಥಾನಕ್ಕೇರಿದಾಗ ಮಾತ್ರ ಶೈಕ್ಷಣಿಕ ಅಸಮಾನತೆ ತೊಲಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದೊಡ್ಡ ಕನಸು ಕಾಣಿ, ರಿಸ್ಕ್ ತೆಗೆದುಕೊಳ್ಳಿ: ಜೀವನದಲ್ಲಿ ಸಣ್ಣ ಯಶಸ್ಸಿಗೇ ತೃಪ್ತಿಪಟ್ಟು ಸೆಟಲ್ ಆಗಬೇಡಿ. ದೊಡ್ಡ ಕನಸುಗಳನ್ನು ಕಾಣಿ, ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬೇಡಿ. ನಮ್ಮ ರಾಜ್ಯದ ಗ್ರಾಮೀಣ ಭಾಗದಲ್ಲಿ ಉನ್ನತ ಶಿಕ್ಷಣದ ಕುರಿತು ಮಾಹಿತಿ ಕೊರತೆ ಇದ್ದು, ಅದನ್ನು ನೀಗಿಸಲು ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದರು. ಇದೇ ವೇಳೆ ಲಂಡನ್ ಕಿಂಗ್ಸ್ ಯೂನಿವರ್ಸಿಟಿಗೆ ಆಯ್ಕೆಯಾಗಿದ್ದ ತುಮಕೂರಿನ ವಿದ್ಯಾರ್ಥಿನಿಯೊಬ್ಬಳಿಗೆ ತಾವು ನೀಡಿದ ಉನ್ನತ ವ್ಯಾಸಂಗದ ಮಾರ್ಗದರ್ಶನವನ್ನು ಸ್ಮರಿಸಿದರು.
ಹೊನ್ನಾಳಿಯಲ್ಲಿ ಸ್ವಾಭಿಮಾನಿ ಬಳಗದ ಕಚೇರಿ ಆರಂಭಿಸಿದ್ದು, ಪೊಲೀಸ್, ಕಂದಾಯ, ಆಸ್ಪತ್ರೆ ಹಾಗೂ ಶಿಕ್ಷಣ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಕೆಲಸಗಳು ಆಗದಿದ್ದರೆ ನಮ್ಮನ್ನು ಸಂಪರ್ಕಿಸಬಹುದು, ನಾವು ತಕ್ಷಣ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 650ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 1,000 ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸ್ವಾಭಿಮಾನಿ ಬಳಗದ ಮುಖಂಡರಾದ ರಾಜು ಕಡಗಣ್ಣಾರ್, ಶರತ್‌ಕುಮಾರ್, ಪಾಲಾಕ್ಷಪ್ಪ, ದೇವರಾಜ್, ಸುದೀಪ್ ದಿಡಗೂರು, ಮಂಜುನಾಥ್, ಹಳದಪ್ಪ, ಸಿಂಗಟಕೆರೆ ಸಿದ್ದೇಶ್, ಅನಿಲ್‌ಕುಮಾರ್, ಸಂದೀಪ್, ಹರ್ಷ, ರಾಜು ಮೌರ್ಯ, ಪಂಕಜ ಅರುಣ್‌ಕುಮಾರ್, ಸಿದ್ದಯ್ಯ ಒಡೆಯರ್, ಜಗದೀಶ್, ಶಿವಕುಮಾರ್ ಶೆಟ್ಟರ್ ಇತರರಿದ್ದರು.
ಹೊನ್ನಾಳಿಯಲ್ಲೇ ಮುಂದಿನ ರಾಜಕೀಯ ಭವಿಷ್ಯ
ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಣನೀಯ ಮತಗಳನ್ನು ಪಡೆದಿದ್ದೆ. ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಜೀವನವನ್ನು ಹೊನ್ನಾಳಿ ಕ್ಷೇತ್ರದಿಂದಲೇ ಕಂಡುಕೊಳ್ಳಲು ನಿರ್ಧರಿಸಿದ್ದೇನೆ ಎಂದು ವಿನಯ್ ಕುಮಾರ್ ಪರೋಕ್ಷವಾಗಿ ತಮ್ಮ ರಾಜಕೀಯ ಇಚ್ಛಾಶಕ್ತಿಯನ್ನು ಪ್ರಕಟಿಸಿದರು.