ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್  
ದಾವಣಗೆರೆ

ದಾವಣಗೆರೆಗೆ ಕೃಷಿ ಸಂಸ್ಕರಣಾ ಕ್ಲಸ್ಟರ್ ಯೋಜನೆ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಬೆಳೆ ನಷ್ಟ ತಗ್ಗಿಸಿ ರೈತರ ಆದಾಯ ಹೆಚ್ಚಿಸುವ ಗುರಿ
  • ಗೋದಾಮು, ಶೀಥಲೀಕರಣ ಘಟಕಗಳಿಗೆ ನೆರವು
  • ಸಂಸದೆ ಡಾ.ಪ್ರಭಾ ಪ್ರಶ್ನೆಗೆ ಆಹಾರ ಸಚಿವಾಲಯ ಉತ್ತರ

ದಾವಣಗೆರೆ: ದಾವಣಗೆರೆಯಲ್ಲಿ ಜೆಮ್ ಫುಡ್ ಪಾರ್ಕ್ ಎಲ್‌ಎಲ್‌ಪಿ ಸಂಸ್ಥೆಯಿಂದ 40.01 ಕೋಟಿ ರೂ. ವೆಚ್ಚದ ಕೃಷಿ ಸಂಸ್ಕರಣಾ ಕ್ಲಸ್ಟರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ತಿಳಿಸಿದೆ.

ಕೊಯ್ಲಿನ ನಂತರದ ನಷ್ಟಗಳು, ಆಹಾರ ಸಂಸ್ಕರಣಾ ಮೂಲಸೌಕರ್ಯ ಹಾಗೂ ರೈತರ ಆದಾಯದ ಕುರಿತು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕೇಳಿದ್ದ ಚುಕ್ಕಿರಹಿತ ಪ್ರಶ್ನೆಗೆ ಸಚಿವಾಲಯ ಈ ಉತ್ತರ ನೀಡಿದೆ.
ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಯಡಿ ಒಟ್ಟು 5 ಕೋಲ್ಡ್ ಚೈನ್ ಯೋಜನೆಗಳು, 3 ಕೃಷಿ ಸಂಸ್ಕರಣಾ ಕ್ಲಸ್ಟರ್‌ಗಳು ಹಾಗೂ 19 ಆಹಾರ ಸಂಸ್ಕರಣಾ ಸಾಮರ್ಥ್ಯ ವಿಸ್ತರಣೆ ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಇವುಗಳಲ್ಲಿ ದಾವಣಗೆರೆಯ ಕೃಷಿ ಸಂಸ್ಕರಣಾ ಕ್ಲಸ್ಟರ್ ಯೋಜನೆಯೂ ಸೇರಿದೆ ಎಂದು ಸಚಿವಾಲಯ ವಿವರಿಸಿದೆ.
ಎರಡು ಪ್ರತ್ಯೇಕ ಅಧ್ಯಯನಗಳ ಆಧಾರದಲ್ಲಿ ಕೃಷಿ ಉತ್ಪನ್ನಗಳ ಕೊಯ್ಲಿನ ನಂತರದ ನಷ್ಟ ಅಂದಾಜಿಸಲಾಗಿದೆ. ಧಾನ್ಯಗಳಲ್ಲಿ ಶೇ 4-6ರಷ್ಟು, ಹಣ್ಣುಗಳಲ್ಲಿ ಶೇ 6-15ರಷ್ಟು, ತರಕಾರಿಗಳಲ್ಲಿ ಶೇ 5-12ರಷ್ಟು ಹಾಗೂ ಸಮುದ್ರ ಮೀನುಗಾರಿಕೆಯಲ್ಲಿ ಶೇ 9ರಷ್ಟರವರೆಗೆ ನಷ್ಟ ದಾಖಲಾಗಿದೆ.
ಆಹಾರ ಸಂಸ್ಕರಣಾ ಘಟಕಗಳು, ಕೋಲ್ಡ್ ಚೈನ್, ಫುಡ್ ಪಾರ್ಕ್ ಹಾಗೂ ಕೃಷಿ ಸಂಸ್ಕರಣಾ ಮೂಲಸೌಕರ್ಯಗಳಿಗೆ ಪಿಎಂಕೆಎಸ್‌ವೈ ಯೋಜನೆಯಡಿ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಇದಲ್ಲದೆ, ಪಿಎಂಎಫ್‌ಎಂಇ ಹಾಗೂ ಪಿಎಲ್‌ಐ ಯೋಜನೆಗಳ ಮೂಲಕ ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ಸೂಕ್ಷ್ಮ, ಸಣ್ಣ, ಮಧ್ಯಮ ಉದ್ದಿಮೆಗಳು (ಎಂಎಸ್‌ಎಂಇ) ಹಾಗೂ ಇತರೆ ಅರ್ಹ ಸಂಸ್ಥೆಗಳಿಗೆ ಅನುದಾನ ಹಾಗೂ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಕೃಷಿ ಮೂಲಸೌಕರ್ಯ ನಿಧಿಯ (ಎಐಎಫ್) ಮೂಲಕ ಶೀತಲೀಕರಣ ಘಟಕ, ಗೋದಾಮು ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲ ಸೌಲಭ್ಯ ಒದಗಿಸಿ, ಬೆಳೆ ನಷ್ಟ ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಆಹಾರ ಸಂಸ್ಕರಣಾ ಮೂಲಸೌಕರ್ಯವು ರೈತರ ಆದಾಯ ಹೆಚ್ಚಳ, ಮೌಲ್ಯವರ್ಧನೆ, ಉದ್ಯೋಗ ಸೃಷ್ಟಿ ಹಾಗೂ ಆಹಾರ ವ್ಯರ್ಥತೆ ಕಡಿತದ ಮೇಲೆ ಬೀರಿರುವ ನೇರ ಪರಿಣಾಮದ ಕುರಿತು ಇದುವರೆಗೆ ಯಾವುದೇ ಪ್ರತ್ಯೇಕ ಅಧ್ಯಯನ ನಡೆಸಿಲ್ಲ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.