ದಾವಣಗೆರೆಯಲ್ಲಿ ಶನಿವಾರ, ರೈತ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿದರು. ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಎಸ್ಪಿ ಪರಮೇಶ್ವರ ಹೆಗಡೆ, ಕೆ. ಜಿಯಾವುಲ್ಲಾ, ರಾಘವೇಂದ್ರ ಪ್ರಸಾದ್ ಇತರರಿದ್ದರು.
- ನೀರಾವರಿ ಸೌಲಭ್ಯವಿದ್ದಲ್ಲಿ ಬಿತ್ತನೆ ಮಾಡಿ
- ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಕಿವಿಮಾತು
- ರೈತರು-ಕಾರ್ಮಿಕರ ಮಕ್ಕಳಿಗೆ ಶುಲ್ಕ ವಿನಾಯಿತಿ
ದಾವಣಗೆರೆ: ಭದ್ರಾ-ತುಂಗಭದ್ರಾ ಜಲಾಶಯಗಳಲ್ಲಿ ಒಳಹರಿವು ಕ್ಷೀಣಿಸಿದೆ. ಹೀಗಾಗಿ ರೈತರು ಡ್ಯಾಂ ನೀರು ಅವಲಂಬಿಸದೆ ಸ್ವಂತ ಕೊಳವೆ ಬಾವಿ ಅಥವಾ ನೀರಾವರಿ ಸೌಲಭ್ಯವಿದ್ದಲ್ಲಿ ಬೆಳೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮನವಿ ಮಾಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ, ರೈತ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗುತ್ತಿದ್ದು ಜಲಾಶಯಗಳಿಗೆ ಸ್ವಲ್ಪ ಪ್ರಮಾಣದ ನೀರು ಬರುತ್ತಿದೆ. ಮುಖ್ಯಮಂತ್ರಿ ಮನವಿಯಂತೆ ರೈತರು ಭೂಮಿ ಹದವಾಗದೆ ಬಿತ್ತನೆ ಮಾಡಬಾರದು ಎಂದು ಹೇಳಿದರು.
ಜುಲೈನ ಮಳೆ, ಜಲಾಶಯದ ಒಳಹರಿವು ಆಧರಿಸಿ, ಕಾಡಾ ಐಸಿಸಿ ಸಭೆ ನಡೆಸಲಿದ್ದು, ಮುಂದಿನ 15 ದಿನಗಳ ನಂತರ ಬಿತ್ತನೆಗೆ ಸೂಕ್ತ ಬೆಳೆ ಬಗ್ಗೆ ನಿರ್ಧರಿಸಲಾಗುವುದು. ಆಗಸ್ಟ್‌ವರೆಗೂ ಭತ್ತ ನಾಟಿಗೆ ಅವಕಾಶವಿದೆ. ಸದ್ಯಕ್ಕೆ ಜುಲೈನ ಮಳೆಯ ಪ್ರಮಾಣ ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕೃಷಿಭೂಮಿ ಪಾಳು ಬಿಡಬಾರದು ಎಂದು ತಿಳಿಸಿದರು.
ಹವಾಮಾನ ವೈಪರೀತ್ಯ, ಬರಗಾಲದ ಸಂದರ್ಭದ ನಷ್ಟ ತಡೆಯಲು ಬೆಳೆ ವಿಮೆ ನೋಂದಣಿ ಅವಧಿಯನ್ನು ಜುಲೈ 15 ರವರೆಗೆ ವಿಸ್ತರಿಸಲಾಗಿದೆ. ಕಾಲಮಿತಿಯೊಳಗೆ ವಿಮೆ ಮಾಡಿಸಬೇಕು. ರೈತ ಸಂಘಟನೆಗಳು ಸರ್ಕಾರದ ಮಾರ್ಗಸೂಚಿಗಳನ್ನು ಕನಿಷ್ಠ ಶೇ. 40 ರಷ್ಟು ರೈತರಿಗಾದರೂ ತಲುಪಿಸಬೇಕು ಎಂದು ತಿಳಿಸಿದರು.
ಮಾರ್ಚ್, ಏಪ್ರಿಲ್ ತಿಂಗಳ ಪೂರ್ವ ಮುಂಗಾರು ಅವಧಿಯ ಬೆಳೆ ನಷ್ಟದ ಪರಿಹಾರ ಮಂಜೂರಾಗಿದೆ. ಮೇ ತಿಂಗಳ ಬೆಳೆ ನಷ್ಟ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ’ಗ್ರೀನ್‌ಲಿಸ್ಟ್’ ಅನುಮೋದನೆ ಬಳಿಕ ಪರಿಹಾರ ವಿತರಿಸಲಾಗುವುದು ಎಂದರು. ಗ್ರಾಮೀಣ- ನಗರ ಪ್ರದೇಶಗಳಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ರೈತರು-ಕಾರ್ಮಿಕರ ಮಕ್ಕಳಿಗೆ ಶಾಲಾ-ಕಾಲೇಜುಗಳ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಎಲ್ಲಾ ಶಾಲಾ ಕಾಲೇಜುಗಳಿಗೆ ಪತ್ರ ಬರೆಯಲಾಗುವುದು. ಜಿ.ಪಿ.ಎಸ್ ಮೂಲಕ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 17,000 ಬಗರ್‌ಹುಕುಂ ಅರ್ಜಿದಾರರಿದ್ದು, 8,000 ಜನರಿಗೆ ಕ್ರಮಬದ್ಧವಾಗಿ ಹಕ್ಕುಪತ್ರ ವಿತರಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆ 2ನೇ ಸ್ಥಾನದಲ್ಲಿದೆ, ದಾಖಲೆಗಳೇ ಇಲ್ಲದ 542 ರೈತರ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ, ಮುಖಾಮುಖಿ ಸಂದರ್ಶನದ ಮೂಲಕ ಖಾತೆಗಳನ್ನು ಮಾಡಿಕೊಡಲಾಗಿದೆ.
ತಹಸೀಲ್ದಾರ್ ಕಚೇರಿಗಳಲ್ಲಿ ಬಾಕಿ ಇರುವ ಆರ್.ಟಿ.ಸಿ ಮತ್ತು ಅಳತೆ ಪ್ರಕ್ರಿಯೆಗಳನ್ನು ಇತ್ಯರ್ಥಪಡಿಸಬೇಕು. ಜಿಲ್ಲೆಯಲ್ಲಿ ಇದುವರೆಗೆ 30 ಸಾವಿರ ಜನರಿಗೆ ಕಂದಾಯ ಗ್ರಾಮಗಳ ಅಡಿಯಲ್ಲಿ ಹಕ್ಕುಪತ್ರ ವಿತರಿಸಲಾಗಿದ್ದು, ದಾವಣಗೆರೆ ರಾಜ್ಯದಲ್ಲೇ 4ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಮಳೆ ಕೊರತೆಯಿಂದ ಕೃಷಿ ಕಾರ್ಮಿಕರ ವಲಸೆ ತಡೆಗಟ್ಟಲು ವಿಬಿಜಿ ರಾಮ್‌ಜಿ ಅಡಿ 5 ಲಕ್ಷ ಮಾನವ ದಿನಗಳನ್ನು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಯಾರೂ ಸಹ ವಲಸೆ ಹೋಗಬಾರದು ಎಂದು ಮನವಿ ಮಾಡಿದರು.
ಜಿಲ್ಲೆಯ ಸಣ್ಣ ಹಳ್ಳಗಳನ್ನು ಗುರುತಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲು ‘ಟ್ರೆಂಚ್ ಕಂ ಬಂಡ್’ ಅಥವಾ ಸಣ್ಣ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಪಿಡಿಒಗಳು ನೀರು ಹರಿಯುವ ಸಾಧ್ಯತೆ ಇರುವ ಸ್ಥಳಗಳನ್ನು ಗುರುತಿಸಿ, ಚೆಕ್ ಡ್ಯಾಂ ನಿರ್ಮಾಣದ ಕ್ರಿಯಾ ಯೋಜನೆಯನ್ನು 15 ದಿನಗಳೊಳಗಾಗಿ ತಾಪಂಗೆ ಕಳುಹಿಸಿಕೊಡಬೇಕು. ಮಳೆನೀರು ಕೊಯ್ಲು ಹಾಗೂ ಅಂತರ್ಜಲ ಸಂರಕ್ಷಣೆಯ ವಿವಿಧ ತಂತ್ರಜ್ಞಾನಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಕೆ.ಜಿಯಾವುಲ್ಲಾ ಮಾತನಾಡಿ, ಜಿಲ್ಲೆಯಲ್ಲಿ 15 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 2500 ಹೆ.ನಲ್ಲಿ ಸೂರ್ಯಕಾಂತಿ, ಶೇಂಗಾ, ತೊಗರಿ ಬಿತ್ತನೆಯಾಗಿದೆ. ತೊಗರಿ ಬಿತ್ತನೆಗೆ ಜು. 15 ರವರೆಗೆ ಅವಕಾಶವಿದೆ. ಮೆಕ್ಕೆಜೋಳಕ್ಕೆ ಹೆಚ್ಚಿನ ಗೊಬ್ಬರ, ನೀರಿನ ಅಗತ್ಯವಿರುವುದರಿಂದ, ಮಳೆಯ ಪರಿಸ್ಥಿತಿ ಗಮನಿಸಿ ಬಿತ್ತನೆಗೆ ಕ್ರಮವಹಿಸಬಹುದು ಎಂದರು.
ಕಡಿಮೆ ಅವಧಿಯಲ್ಲಿ ಕೈಗೆಟಕುವ ನವಣೆ, ಆರಕ, ಬರಗು, ಸಾಮೆ, ಊದಲು, ಕೊರಲೆ, ರಾಗಿ ಮೊದಲಾದ ಸಿರಿಧಾನ್ಯ ಮತ್ತು ಹುರುಳಿ ಬೆಳೆಗಳ ಬಿತ್ತನೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು ರೈತರು ಮತ್ತು ಕೃಷಿ ಕಾರ್ಮಿಕರಿಗೆ ನೆರವಾಗುವ ನೂತನ ತಂತ್ರಜ್ಞಾನ ಹಾಗೂ ಯೋಜನೆಗಳನ್ನು ಜಾರಿಗೆ ತರಬೇಕು. ಸಣ್ಣ ಸಣ್ಣ ಹಳ್ಳಗಳಿಗೆ ಕಲ್ಲುಗಳನ್ನು ಬಳಸಿ ಚೆಕ್‌ಡ್ಯಾಂ ನಿರ್ಮಿಸುವ ಮೂಲಕ ನೀರು ಪೋಲನ್ನು ತಡೆಗಟ್ಟಬೇಕು ಎಂದರು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ಸರಿಯಾಗಿ ನೀರು ತಲುಪುತ್ತಿಲ್ಲ. ಆಧುನೀಕರಣದ ಹೆಸರಿನಲ್ಲಿ ಕಾಮಗಾರಿಗಳು ನಡೆಯುತ್ತಿವೆಯೇ ಹೊರತು ರೈತರ ಗದ್ದೆಗಳಿಗೆ ನೀರು ಹರಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡ ವಿಶ್ವನಾಥ್ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮೇಲ್ಮಟ್ಟದ ಚರ್ಚೆಗಳನ್ನು ನಡೆಸುವ ಬದಲು ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು ಸಭೆ ನಡೆಸಿ ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಗ್ರಹಿಸಿದರು.
ಮುಖಂಡ ನಾಗರಾಜು ಮಾತನಾಡಿ, ರೈತರು ಬಳಸಬೇಕಾದ ಗೊಬ್ಬರದ ದರದ ಗೊಂದಲ ಬಗೆಹರಿಸಬೇಕು. ಕೆರೆಗಳ ಹೂಳೆತ್ತುವ ಸಾಂಪ್ರದಾಯಿಕ ಕೆಲಸಗಳಿಗಿಂತ, ನಾವೀನ್ಯತಾ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ರೈತ ಮುಖಂಡ ಮಂಜಪ್ಪ ಮಾತನಾಡಿ, ಜಗಳೂರು ತಾಲೂಕಿನಲ್ಲಿ ವಿಬಿಜಿ ರಾಮ್‌ಜಿ ಯೋಜನೆಯ ಅಂದಾಜು ಪಟ್ಟಿ ಸಿದ್ಧಪಡಿಸಿ ಕೆಲಸ ನೀಡದಿದ್ದರೆ, ಜನರು ಊರು ಬಿಡುವ ಪರಿಸ್ಥಿತಿ ಬರಲಿದೆ. ಮನೆ-ಟ್ರಾಕ್ಟರ್ ಸಾಲಗಳ ವಸೂಲಾತಿ ಮುಂದೂಡಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕೆಂದರು.
ಸಭೆಯಲ್ಲಿ ಎಎಸ್ಪಿ ಪರಮೇಶ್ವರ ಹೆಗಡೆ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಇತರ ಅಧಿಕಾರಿಗಳಿದ್ದರು.