ಕತ್ತಲಗೆರೆಯಲ್ಲಿ ಜೇನು ಕೃಷಿ ತರಬೇತಿ ನಡೆಯಿತು. ಡಾ.ಬಿ. ಎಂ. ಆನಂದಕುಮಾರ್, ಡಾ. ಸಣ್ಣತಿಮ್ಮಪ್ಪ, ಡಾ. ಮಂಜುನಾಥ್, ಡಾ. ಗಂಗಪ್ಪಗೌಡ ಬಿರಾದರ್, ಡಾ. ಪ್ರಕಾಶ್, ಡಾ. ಶರಣಪ್ಪ, ಡಾ. ನಿರಂಜನ್ ಇತರರಿದ್ದರು. Beekeeping 
ದಾವಣಗೆರೆ

ಜೇನು ಕೃಷಿಯಿಂದ ಕೃಷಿ ಇಳುವರಿ ಶೇ.20ರಷ್ಟು ವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಡಾ.ಬಿ.ಎಂ. ಆನಂದಕುಮಾರ್ ಮಾಹಿತಿ
  • ಕತ್ತಲಗೆರೆ ಗ್ರಾಮದಲ್ಲಿ ಎರಡು ದಿನಗಳ ತರಬೇತಿ
ಚನ್ನಗಿರಿ: ಜೇನುನೊಣಗಳು ಪರೋಕ್ಷವಾಗಿ ಪರಾಗಸ್ಪರ್ಶ ಕ್ರಿಯೆ ನಡೆಸಿ ಮಕರಂದವನ್ನು ಉತ್ಪಾದಿಸುವುದರಿಂದ ಬೆಳೆಗಳಲ್ಲಿ ಶೇ.20ರಷ್ಟು ಇಳುವರಿ ಹೆಚ್ಚಾಗಲಿದೆ. ಇದು ರೈತರಿಗೆ ಆರ್ಥಿಕ ಲಾಭ ತರುವುದರ ಜತೆಗೆ ಜೇನು ಸೇವನೆಯಿಂದ ಆರೋಗ್ಯಕ್ಕೂ ಉತ್ತಮ ಪ್ರಯೋಜನಗಳಿವೆ ಎಂದು ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದ ಸಂಸ್ಕರಣಾ ಕೇಂದ್ರದ ಮುಖ್ಯಸ್ಥ ಡಾ.ಬಿ. ಎಂ. ಆನಂದಕುಮಾರ್ ಹೇಳಿದರು.
ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಶುಕ್ರವಾರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಶಿವಮೊಗ್ಗ), ಕತ್ತಲಗೆರೆಯ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಜೇನು ಕೃಷಿ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ರೈತರು ಏಕಬೆಳೆ ಪದ್ಧತಿಯನ್ನು ಕೈಬಿಟ್ಟು ಬಹುವಾರ್ಷಿಕ ಹಣ್ಣು, ತರಕಾರಿ ಮತ್ತು ಪುಷ್ಪ ಬೇಸಾಯದ ಕಡೆಗೆ ಗಮನ ಹರಿಸಬೇಕು. ಈ ಮೂಲಕ ತೋಟಗಳಲ್ಲಿ ಜೇನು ಕೃಷಿಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಕೈಗೊಳ್ಳಬಹುದು ಎಂದರು.
ಜೀವ ವೈವಿಧ್ಯವನ್ನು ಕಾಪಾಡಿಕೊಳ್ಳುವ ಜತೆಗೆ ರೈತರು ಇದನ್ನು ಪ್ರಮುಖ ಉಪಕಸುಬನ್ನಾಗಿ ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಲಾಭ ಗಳಿಸಬಹುದು. ಜೇನು ಸಾಕಣೆಯಿಂದ ಬೆಳೆಗಳ ಉತ್ಪಾದನೆ ಹೆಚ್ಚಳವಾಗುವುದಲ್ಲದೆ, ತಾಜಾ ಜೇನು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ಹೇಳಿದರು.
ಜೇನು ಸಂತತಿಯನ್ನು ರಕ್ಷಿಸಲು ರೈತರು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಪರಿಸರ ಸ್ನೇಹಿ ಪೀಡೆ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ತರಬೇತಿಯಲ್ಲಿ ಜೇನು ಸಾಕಾಣಿಕೆ ವಿಧಾನ, ನಿರ್ವಹಣೆ, ಜೇನುತುಪ್ಪ ಸಂಗ್ರಹಣೆ, ಮಾರಾಟ ಮತ್ತು ಪರಾಗಸ್ಪರ್ಶದಿಂದ ಬೆಳೆಗಳಿಗಾಗುವ ಲಾಭಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಕರ್ನಾಟಕ ತೋಟಗಾರಿಕೆ ಇಲಾಖೆ ಸೇರಿ ವಿವಿಧ ಸಂಸ್ಥೆಗಳು ಇಂತಹ ತರಬೇತಿಗಳ ಮೂಲಕ ಜೇನುಕೃಷಿಯನ್ನು ಪೂರಕ ಆದಾಯದ ಉಪ ಉದ್ಯೋಗವಾಗಿ ಬೆಳೆಸಲು ಪ್ರೋತ್ಸಾಹಿಸುತ್ತಿವೆ ಎಂದು ಮಾಹಿತಿ ನೀಡಿದರು. ಕೃಷಿ ಮತ್ತು ತೋಟಗಾರಿಕೆಯ ಡಾ. ಸಣ್ಣತಿಮ್ಮಪ್ಪ, ಡಾ. ಮಂಜುನಾಥ್, ಡಾ. ಗಂಗಪ್ಪಗೌಡ ಬಿರಾದರ್, ಡಾ. ಪ್ರಕಾಶ್, ಡಾ. ಶರಣಪ್ಪ, ಡಾ. ನಿರಂಜನ್ ಹಾಗೂ ರೈತರಾದ ವಸಂತಮ್ಮ, ರುದ್ರೇಶ್, ಶಶಿಕುಮಾರ್, ಚೇತನ್‌ಕುಮಾರ್ ಇತರರಿದ್ದರು.