ದಾವಣಗೆರೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬುಧವಾರ, ದಾವಣಗೆರೆ ತಾಲೂಕಿನ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ ರಸಗೊಬ್ಬರ, ಕೀಟನಾಶಕ, ಬಿತ್ತನೆಬೀಜ ಮಾರಾಟಗಾರರಿಗೆ 2026-27ನೇ ಸಾಲಿನ ಮುಂಗಾರುಪೂರ್ವ ತರಬೇತಿ ಮತ್ತು ಕಾರ್ಯಾಗಾರವನ್ನು ಕೃಷಿ ಇಲಾಖೆಯ ಉಪ ನಿರ್ದೇಶಕಿ ಜಿ.ವಿ. ಭಾರತಮ್ಮ ಉದ್ಘಾಟಿಸಿದರು. ಡಿ.ಎಂ. ಶ್ರೀಧರಮೂರ್ತಿ, ಶ್ರೀನಿವಾಸ್, ಶಿವಮೂರ್ತಪ್ಪ, ಮಂಜಣ್ಣ ಇದ್ದರು.
- ರಸಗೊಬ್ಬರ ಮಾರಾಟಗಾರರಿಗೆ ಎಚ್ಚರಿಕೆ
- ಮುಂಗಾರುಪೂರ್ವ ತರಬೇತಿ, ಕಾರ್ಯಾಗಾರ
ದಾವಣಗೆರೆ : ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕಿ ಜಿ.ವಿ. ಭಾರತಮ್ಮ ಹೇಳಿದರು.
ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬುಧವಾರ, ದಾವಣಗೆರೆ ತಾಲೂಕಿನ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ ರಸಗೊಬ್ಬರ, ಕೀಟನಾಶಕ, ಬಿತ್ತನೆಬೀಜ ಮಾರಾಟಗಾರರಿಗೆ 2026-27ನೇ ಸಾಲಿನ ಮುಂಗಾರುಪೂರ್ವ ತರಬೇತಿ ಮತ್ತು ಕಾರ್ಯಾಗಾರದಲ್ಲಿ ಮಾತನಾಡಿದರು.
ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ಬಿತ್ತನೆ ಬೀಜ, ಗೊಬ್ಬರ ಮುಂತಾದ ಪರಿಕರಗಳನ್ನು ಮಾರಾಟ ಮಾಡಿದ್ದಕ್ಕೆ ಅಗತ್ಯ ದಾಖಲೆ (ಬಿಲ್) ನೀಡುವುದು ಕಡ್ಡಾಯ. ನಮ್ಮ ಜಿಲ್ಲೆಯಿಂದ ಬೇರೆ ಜಿಲ್ಲೆಯವರಿಗೆ ಮಾರಾಟ ಮಾಡಬಾರದು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮುಂಗಾರು ಹಂಗಾಮಿನಲ್ಲಿ ಯೂರಿಯಾ, ಡಿಎಪಿ ಹಾಗೂ ಇತರೆ ರಸಗೊಬ್ಬರಗಳನ್ನು ರೈತರಿಗೆ ಸಕಾಲದಲ್ಲಿ ಸುಲಲಿತವಾಗಿ ವಿತರಣೆ ಮಾಡಲು ಈಗಾಗಲೇ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.
ಯಾವುದೇ ಬಿತ್ತನೆ ಬೀಜ, ಕೀಟನಾಶಕಗಳ ಕೊರತೆ ಇಲ್ಲ. ಸರ್ಕಾರದ ಮಾರ್ಗಸೂಚಿಯಂತೆ ರೈತರಿಗೆ ವಿತರಣೆ ಮಾಡಬೇಕು. ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ಶ್ರೀನಿವಾಸ್ ಅವರು ಕೃಷಿ ಪರಿಕರ ಮಾರಾಟಗಾರರಿಗೆ ಇತ್ತೀಚಿನ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು. ರೈತರಿಗೆ ಎಫ್‌ಐಡಿ ಮುಖಾಂತರ ಯೂರಿಯಾ ವಿತರಣೆ ಕುರಿತು ತಿಳಿಸಿದರು.
ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಶಿವಮೂರ್ತಪ್ಪ ಅವರು ಇಲಾಖೆಯ ಸಹಯೋಗದೊಂದಿಗೆ ಕೃಷಿ ಪರಿಕರಗಳನ್ನು ಮಾರಾಟ ಮಾಡುವ ಕುರಿತು ಮಾತನಾಡಿದರು.
ದಾವಣಗೆರೆ ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಮಂಜಣ್ಣ ಮಾತನಾಡಿ, ರೈತರೇ ದೇಶದ ಬೆನ್ನೆಲುಬು, ಅವರಿಂದಲೇ ನಾವಿರುವುದು. ಕಾನೂನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಿ ಎಂದು ತಿಳಿಸಿದರು. ಭರತ್, ಬೀರಪ್ಪ, ಚಂದ್ರಪ್ಪ ಇದ್ದರು.