ಮಾಯಕೊಂಡ: ಬಡ ಕುಟುಂಬಗಳಿಗೆ 20ಗಿ30 ಅಳತೆ ನಿವೇಶನದ ಬದಲಿಗೆ 30ಗಿ40 ಅಳತೆ ನಿವೇಶನ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಉದ್ದೇಶಕ್ಕೆ ಮಾಯಕೊಂಡ ಕ್ಷೇತ್ರದಲ್ಲಿ 500 ಎಕರೆ ಭೂಮಿ ಗುರುತಿಸಲಾಗುತ್ತಿದೆ ಎಂದು ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಪ್ರಜಾಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ನಿವೇಶನ ಹಂಚಿಕೆಗೆ ಈಗಾಗಲೇ 150 ಎಕರೆ ಗುರುತಿಸಲಾಗಿದ್ದು, ಇದನ್ನು 500 ಎಕರೆಗೆ ವಿಸ್ತರಿಸಿ ಮೂಲ ಸೌಕರ್ಯಗಳೊಂದಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಸರ್ಕಾರಿ ಗೋಮಾಳ ಜಮೀನು ಒತ್ತುವರಿ ಮಾಡಿಕೊಂಡಿರುವವರು ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಜೀವನೋಪಾಯಕ್ಕಾಗಿ ಅಲ್ಪ ಪ್ರಮಾಣದ ಜಮೀನು ಅವಲಂಬಿಸಿರುವ ಬಡ ರೈತರಿಗೆ ತೊಂದರೆ ನೀಡದೆ, ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಕಂದನಕೋವಿ, ಕಬ್ಬೂರು ಸೇರಿ ವಿವಿಧ ಗ್ರಾಮಗಳ ಭೂ ಸಮಸ್ಯೆ ಬಗೆಹರಿಸಿ, ಹೆಚ್ಚುವರಿ ಒತ್ತುವರಿ ಜಮೀನನ್ನು ವಶಕ್ಕೆ ಪಡೆದು ನಿವೇಶನ ಹಂಚಿಕೆಗೆ ಬಳಸಿಕೊಳ್ಳಲಾಗುವುದು ಎಂದರು.
ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಸೀಲ್ದಾರ್ ರಾಜೇಶ್ ಕುಮಾರ್, ಜಿಪಂ ಉಪಕಾರ್ಯದರ್ಶಿ ಮಮತಾ ಹೊಸಗೌಡರ್, ಕೃಷಿ ಜಂಟಿ ನಿರ್ದೇಶಕ ಎಸ್.ಕೆ. ಜಿಯಾವುಲ್ಲಾ, ತಾಪಂ ಇಒ ರಾಮಬೋವಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ, ತೋಟಗಾರಿಕೆ ಜೆಡಿ ರಾಘವೇಂದ್ರ ಪ್ರಸಾದ್, ಎಡಿಎಚ್ ರೇಷ್ಮಾ ಪರ್ವಿನ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ವಿಮಾ ಕಂಪನಿಗಳಿಂದ ಆಗಿರುವ ಲೋಪ ಸರಿಪಡಿಸಿ, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಕುಡಿಯುವ ನೀರು, ಮೇವಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮೀಣ ಹಾಗೂ ಹೊಲದ ರಸ್ತೆಗಳ ಅಭಿವೃದ್ಧಿಗೆ 16 ಸಾವಿರ ಕೋಟಿ ಅನುದಾನ ಘೋಷಿಸಲಾಗಿದ್ದು, ಕಾಮಗಾರಿಗಳಿಗೆ ವೇಗ ದೊರೆಯಲಿದೆ ಎಂದು ಸಚಿವ ಬಸವಂತಪ್ಪ ಹೇಳಿದರು. ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಆಯೋಜನೆ ಬಗ್ಗೆ ಪ್ರತಿ ಗ್ರಾಮಗಳಲ್ಲೂ ಪ್ರಚಾರ ಮಾಡಬೇಕು. ಸಾರ್ವಜನಿಕರು ನಿಗದಿತ ಅರ್ಜಿ ನಮೂನೆಯಲ್ಲಿಯೇ ಅಹವಾಲು ಸಲ್ಲಿಸಲು ಅನುಕೂಲವಾಗುವಂತೆ ಗ್ರಾಮ ಮಟ್ಟದಲ್ಲೇ ನಮೂನೆಗಳನ್ನು ವಿತರಿಸಿ ಅರ್ಜಿ ಸ್ವೀಕರಿಸಬೇಕು ಎಂದು ಸಲಹೆ ಮಾಡಿದರು. ನಿವೇಶನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಪಡಿತರ ಚೀಟಿ ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದವು.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ತಲಾ 5 ಕೆಜಿ ಸೇರಿ ಪ್ರತಿ ಫಲಾನುಭವಿಗೆ ಒಟ್ಟು 10 ಕೆಜಿ ಅಕ್ಕಿ ವಿತರಿಸಬೇಕಿದೆ. ಆದರೆ, ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ 2-3 ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂಬ ದೂರುಗಳಿವೆ. ಆಹಾರ ಇಲಾಖೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ, ಪಡಿತರ ಕಡಿತಗೊಳಿಸುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೆ.ಎಸ್. ಬಸವಂತಪ್ಪ ಸೂಚಿಸಿದರು.
ಪತಿ ಮತ್ತು ಪುತ್ರನನ್ನು ಕಳೆದುಕೊಂಡು ಅನಾಥರಾಗಿರುವ ಅಣಜಿ ಗ್ರಾಮದ ಅನಾರೋಗ್ಯ ಪೀಡಿತ ಕೂಲಿ ಕಾರ್ಮಿಕ ಮಹಿಳೆ ಪ್ರೇಮಕ್ಕ, ಸಭಾ ಭವನದ ಮೂಲೆಯಲ್ಲಿ ನಿಂತು ಗಳಗಳನೆ ಅತ್ತರು. ನನಗೆ ಮನೆಯಿಲ್ಲ, ರೇಷನ್ ಕಾರ್ಡ್, ವಿಧವಾ ವೇತನ ಹಾಗೂ ಗೃಹಲಕ್ಷ್ಮಿ ಹಣವೂ ಬರುತ್ತಿಲ್ಲ. ಕುತ್ತಿಗೆಯಲ್ಲಿ ಗಡ್ಡೆಯಾಗಿ ಕೂಲಿ ಕೆಲಸಕ್ಕೂ ಹೋಗಲಾಗದೆ ಬದುಕುವುದೇ ದುಸ್ತರವಾಗಿದೆ. ಸಚಿವರಿಗೆ ಅರ್ಜಿ ಕೊಡಲು ಬಂದರೆ, ಯಾರೂ ಅರ್ಜಿ ಬರೆದುಕೊಡಲಿಲ್ಲ ಎಂದು ವಿಜಯವಾಣಿಯೊಂದಿಗೆ ನೋವು ತೋಡಿಕೊಂಡರು.
ಆನಗೋಡು ಹೋಬಳಿ ಕಿತ್ತೂರು ಗ್ರಾಮದ 24 ಮಹಿಳಾ ಫಲಾನುಭವಿಗಳು ನಮ್ಮ ಭೂಮಿ ನಮ್ಮ ತೋಟ ಯೋಜನೆಯಡಿ ತಲಾ 5 ಗುಂಟೆಯಂತೆ ಹಂಚಿಕೆಯಾದ ಜಮೀನಿಗೆ ಹಕ್ಕುಪತ್ರವಿದ್ದರೂ, 20 ವರ್ಷಗಳಿಂದ ಅಧಿಕಾರಿಗಳು ಖಾತೆ ನೋಂದಣಿ ಮಾಡಿಕೊಡದೆ ಸತಾಯಿಸುತ್ತಿದ್ದಾರೆ ಎಂದು ಸಚಿವರ ಎದುರು ಅಳಲು ತೋಡಿಕೊಂಡರು.
ಅಧಿಕಾರಿಗಳು ಯಾವುದೇ ವ್ಯಕ್ತಿಯ ಪರ ಅಥವಾ ವಿರೋಧವಾಗಿ ಕೆಲಸ ಮಾಡದೆ ಕಾನೂನು ಚೌಕಟ್ಟಿನಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಜನರನ್ನು ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಲ್ಪಿಸಬೇಕು. ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.ಕೆ.ಎಸ್. ಬಸವಂತಪ್ಪ ಸಚಿವ