ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ವಾಸುದೇವ ಮೇಟಿ, ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್, ಕೆಂಚಮ್ಮನಹಳ್ಳಿ ಹನುಮಂತಪ್ಪ, ಭರಮಸಮುದ್ರ ಕುಮಾರ್ ಇತರರಿದ್ದರು.  
ದಾವಣಗೆರೆ

ರಸಗೊಬ್ಬರಕ್ಕೆ ಎಫ್‌ಐಡಿ ಕಡ್ಡಾಯ ಕೈಬಿಡಿ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಆಗ್ರಹ
  • ಗೊಬ್ಬರದ ಗಲಾಟೆಯಾದಲ್ಲಿ ಸರ್ಕಾರವೇ ಹೊಣೆ
  • ನೀರಾವರಿ ಯೋಜನೆಗಳ ಬಗೆಗಿನ ಅಸಡ್ಡೆಗೆ ಅಸಮಾಧಾನ
ದಾವಣಗೆರೆ: ರೈತರು ರಸಗೊಬ್ಬರ ಖರೀದಿಸಲು ವಿಧಿಸಿರುವ ಎಫ್‌ಐಡಿ (ಫಾರ್ಮರ್ ಐಡೆಂಟಿಫಿಕೇಷನ್ ನಂಬರ್) ಕೈ ಬಿಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ವಾಸುದೇವ ಮೇಟಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಎಕರೆಯೊಂದಕ್ಕೆ ಕ್ವಿಂ. ರಸಗೊಬ್ಬರ ನೀಡುವುದಾಗಿ ಸರ್ಕಾರ ಹೇಳಿರುವುದು ಸರಿಯಲ್ಲ. ದಾವಣಗೆರೆ ಜಿಲ್ಲೆಯಲ್ಲಿ 3.29 ಲಕ್ಷ ಹೆ. ಪ್ರದೇಶಕ್ಕೆ 1,59,520 ಮೆಟ್ರಿಕ್ ಟನ್ ರಸಗೊಬ್ಬರ ಬೇಕಿರುವಾಗ ಎಕರೆಗೆ ಒಂದು ಕ್ವಿಂಟಾಲ್ ಗೊಬ್ಬರ ಸಾಲದು. ಕೂಡಲೇ ಎಫ್‌ಐಡಿ ನಿಗದಿಪಡಿಸಿದ ಆದೇಶ ರದ್ದುಪಡಿಸಬೇಕು. ಸಬ್ಸಿಡಿ ರೂಪದಲ್ಲಿ ಗುಣಮಟ್ಟದ ಬೀಜ-ಗೊಬ್ಬರ ಪೂರೈಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ರೈತರು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಇದೆ. ರಸಗೊಬ್ಬರಕ್ಕಾಗಿ ನಿಂತ ರೈತರ ಮೇಲೆ ಲಾಠಿ ಬೀಸಲಾಗಿದೆ. ರಾಜ್ಯದಲ್ಲಿ ರಸಗೊಬ್ಬರಕ್ಕಾಗಿ ಗಲಾಟೆಯಾದಲ್ಲಿ ಅದಕ್ಕೆ ಸರ್ಕಾರವೇ ಹೊಣೆ. ರೈತರ ಮೇಲೆ ಲಾಠಿ ಬೀಸುವುದು ಪುನರಾವರ್ತನೆ ಆದಲ್ಲಿ ಮುಖ್ಯಮಂತ್ರಿ, ಸಚಿವರ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನದ ಜತೆಗೆ ೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.
ರಸಗೊಬ್ಬರ ಬದಲಿಗೆ ಕಳೆದ ವರ್ಷ ನ್ಯಾನೋ ಬಳಕೆ ಮಾಡುವಂತೆ ಸರ್ಕಾರ ಸಲಹೆ ನೀಡಿತ್ತು. ಅದರಿಂದ ರೈತರಿಗೆ ನಷ್ಟವಾಯಿತೇ ಹೊರತು ಯಾವುದೇ ಪ್ರಯೋಜನವಾಗಲಿಲ್ಲ. ಈ ಬಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದರೂ ಕ್ವಿಂಟಾಲ್‌ಗೆ 1,700-1,800 ರೂ. ದರ ಇದೆ. ಹಾಗಾಗಿ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ನಾಗಮೋಹನದಾಸ್ ಅವರನ್ನು ನೀರಾವರಿ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ 15 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಕುರಿತ ಚರ್ಚೆಗೆ ಕೇಂದ್ರ ಸರ್ಕಾರಕ್ಕೆ ಒಂದೂ ಕಡತ ಕೂಡ ಕೇಂದ್ರ ಸರ್ಕಾರವನ್ನು ತಲುಪಿಲ್ಲ ಎಂದು ಸ್ವತಃ ಅಧ್ಯಕ್ಷರೇ ತಿಳಿಸಿದ್ದಾರೆ.
ಚರ್ಚೆ ಮಾಡದಿದ್ದಲ್ಲಿ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ ನಂತರವೇ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್, ಎನ್.ಎಸ್. ಭೋಸರಾಜು ಇತರರು ಕಡತಗಳೊಂದಿಗೆ ದೆಹಲಿಗೆ ತೆರಳಿದ್ದಾರೆ. ಈ ಸರ್ಕಾರ ರೈತರ ವಿರೋಧಿಯಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ನೀಡಿದ್ದ ಮಾತಿನಂತೆ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿಲ್ಲ. ನೀರಾವರಿ ಯೋಜನೆಗಳಿಗೆ ಬಿಡಿಗಾಸು ಸಹ ಬಿಡುಗಡೆ ಮಾಡಿಲ್ಲ. ಆಲಮಟ್ಟಿ ಯೋಜನೆಗೆ ಶೇ.40ರಷ್ಟು ಹಣ ಬಿಡುಗಡೆ ಕುರಿತ ಕಡತಕ್ಕೆ ಇದುವರೆಗೆ ಸಿಎಂ ಪ್ರತಿಕ್ರಿಯೆ ನೀಡಿಲ್ಲ. ತುಂಗ-ಭದ್ರಾ ಯೋಜನೆಗಳ ವಿಚಾರದಲ್ಲೂ ಸರ್ಕಾರ ಮೌನವಾಗಿದೆ ಎಂದರು.
ಈ ಸರ್ಕಾರ ಗ್ಯಾರಂಟಿ ಯೋಜನೆಗಳ ಜಪ ಬಿಟ್ಟು ಬೇರೇನನ್ನೂ ಮಾಡುತ್ತಿಲ್ಲ. ರಾಜ್ಯದಲ್ಲಿ 49 ಸಾವಿರ ಸರ್ಕಾರಿ ಶಾಲಾ ಶಿಕ್ಷಕರ ಕೊರತೆ ಇದೆ. ಗುತ್ತಿಗೆ ಆಧಾರಿತ ಶಿಕ್ಷಕರನ್ನು ಅವಲಂಭಿಸಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತಾಗಿದೆ.
ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ಗೆ ಡಿಜಿಟಲ್ ಮೀಟರ್ ಅಳವಡಿಸಿ, ಮೊಬೈಲ್ ಮಾದರಿಯಲ್ಲಿ ವಿದ್ಯುತ್ ರೀಚಾರ್ಜ್ ವ್ಯವಸ್ಥೆಗೆ ಇಂಧನ ಸಚಿವರು ಮುಂದಾಗಿದ್ದಾರೆ. ಕರೆನ್ಸಿ ದರವೇ ಹೆಚ್ಚಿರುವಾಗ ಈ ರೀಚಾರ್ಜ್ ಪ್ರಾಯೋಗಿಕವಾಗಿ ಕಷ್ಟಕರ. ಗುಲ್ಬರ್ಗಾ ವಿಭಾಗದಲ್ಲಿ ಈಗಾಗಲೆ ಇದನ್ನು ಜಾರಿಗೊಳಿಸಲಾಗಿದೆ. ಕೂಡಲೇ ಈ ವ್ಯವಸ್ಥೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಭರಮಸಮುದ್ರ ಕುಮಾರ್ ಮಾತನಾಡಿ, ಜಿಲ್ಲಾಡಳಿತ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ತೆಂಗಿಗೆ ನುಸಿ ರೋಗದಿಂದಾಗಿ ಎಳನೀರು ಮಾರುವುದೇ ಸಮಸ್ಯೆಯಾಗಿದೆ. ತೊಟಗಾರಿಕೆ ಇಲಾಖೆ ಅಧಿಕಾರಿಗಳು ರೋಗ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಫಸಲ್‌ಭಿಮಾ ಯೋಜನೆಯಡಿ ರೈತರ ಖಾತೆಗೆ ಹಣ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್, ಕೆಂಚಮ್ಮನಹಳ್ಳಿ ಹನುಮಂತಪ್ಪ, ಕಿತ್ತೂರು ಹನುಮಂತಪ್ಪ, ಗುಂಡಪ್ಪ, ಭರತ್, ಏಕಾಂತಪ್ಪ, ಸುನಿಲ್, ಕೋಲ್ಕುಂಟೆ ಹುಚ್ಚೆಂಗೆಪ್ಪ, ಜಗದೀಶ್, ಪಾಲಣ್ಣ, ಮಂಜುನಾಥ್ ಇದ್ದರು.