ಮೃತ ದುರ್ದೈವಿ ಜೆ.ಕೆ. ಸುಜನ್.  
ದಾವಣಗೆರೆ

ಸಣ್ಣ ಸರ್ಜರಿಗೆ ಹೋದ ಯುವಕ ಹೆಣವಾದ!

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಘಟನೆ
  • ಕೆಬಿ ಬಡಾವಣೆಯ ಸುಜನ್ ಮೃತ ದುರ್ದೈವಿ
  • ವೈದ್ಯರ ನಿರ್ಲಕ್ಷೃ ಆರೋಪಿಸಿ ಬಡಾವಣೆ ಠಾಣೆಗೆ ದೂರು
ದಾವಣಗೆರೆ: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆಂದು ದಾಖಲಾಗಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು ವೈದ್ಯರ ನಿರ್ಲಕ್ಷೃವೇ ಕಾರಣ ಎಂಬುದಾಗಿ ಮೃತನ ಪಾಲಕರು ಇಲ್ಲಿನ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.
ಇಲ್ಲಿನ ಕೆ.ಬಿ. ಬಡಾವಣೆ ನಿವಾಸಿ, ಜೆ.ಕೆ. ಸುಜನ್ (20) ಮೃತ ದುರ್ದೈವಿ. ಮೂಗಿನ ಸಣ್ಣ ಶಸ್ತ್ರಚಿಕಿತ್ಸೆಗೆಂದು ನಗರದ ನವೋದಯ ಆಸ್ಪತ್ರೆಗೆ ದಾಖಲಾಗಿ, ಆಪರೇಷನ್ ಥಿಯೇಟರ್‌ಗೆ ಹೋದ 20 ನಿಮಿಷದಲ್ಲೇ ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ.
ವಾರದ ಹಿಂದಷ್ಟೇ ಸುಜನ್ ಜನ್ಮದಿನ ಆಚರಿಸಿಕೊಂಡಿದ್ದ. ಚಟುವಟಿಕೆಯಿಂದಿದ್ದ ಯುವಕನ ಸಾವು ಕುಟುಂಬಕ್ಕೆ ದಿಗಿಲು ತರಿಸಿದೆ. ಆಸ್ಪತ್ರೆ ಬಳಿ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿತ್ತು. ವೈದ್ಯರ ನಿರ್ಲಕ್ಷೃದ ವಿರುದ್ಧ ಮೃತನ ಸೋದರಮಾವ ಟಿ.ಎಂ. ಮೃತ್ಯುಂಜಯ ದೂರು ಸಲ್ಲಿಸಿದ್ದಾರೆ.
ಆಗಿದ್ದೇನು..?
ಮೃತ ಸುಜನ್ ನಗರದ ಕಾಲೇಜೊಂದರಲ್ಲಿ ಎರಡನೇ ವರ್ಷದ ಬಿಸಿಎ ಮುಗಿಸಿದ್ದ. ತಾಯಿ ವರ್ಷದ ಹಿಂದೆ ತೀರಿದ್ದರು. ತಂದೆ ಜಗನ್ನಾಥ್ ಸಿಂಧನೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದಾರೆ. ಹೀಗಾಗಿ ಸುಜನ್ ದಾವಣಗೆರೆ ಕೆಬಿ ಬಡಾವಣೆಯಲ್ಲಿ ಸೋದರಮಾವನ ಮನೆಯಲ್ಲಿದ್ದು ಓದುತ್ತಿದ್ದ.
ಆತನಿಗೆ ಉಸಿರಾಟದ ಸಣ್ಣ ಸಮಸ್ಯೆ ಇತ್ತು. ಇದೇ ಕಾರಣಕ್ಕೆ ತಡವಾಗಿ ಮಾತನಾಡುತ್ತಿದ್ದ. ಹೀಗಾಗಿ ವಾರದ ಹಿಂದಷ್ಟೇ ನಗರದ ಪ್ರತಿಷ್ಠಿತ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿನ ಪ್ರಾಧ್ಯಾಪಕ ಡಾ.ನಿತಿನ್ ಮೂಗಿನಲ್ಲಿ ಸಣ್ಣ ಸರ್ಜರಿ ಆಗಬೇಕು ಎಂದು ಸಲಹೆ ನೀಡಿದ್ದರು.
ಭಾನುವಾರ ಬೆಳಗ್ಗೆ ವೈದ್ಯರಿಗೆ ಸುಜಯ್ ಪಾಲಕರು ಕರೆ ಮಾಡಿದಾಗ, ಪರೀಕ್ಷೆ ಮಾಡಿದ ಪ್ರತಿಷ್ಠಿತ ಆಸ್ಪತ್ರೆ ಬದಲಾಗಿ ನವೋದಯ ಆಸ್ಪತ್ರೆಗೆ ಬರಲು ತಿಳಿಸಿದ್ದಾರೆ. ಅದರಂತೆ ತೆರಳಿದ್ದ ಸುಜನ್ ಶಸ್ತ್ರಚಿಕಿತ್ಸಾ ಕೊಠಡಿಯಲ್ಲೇ ಮೃತಪಟ್ಟಿದ್ದಾನೆ. ಕಾರ್ಡಿಯಾಕ್ ಅರೆಸ್ಟ್ ಕಾರಣಕ್ಕೆ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ನನ್ನ ಮೊಮ್ಮಗನಿಗೆ ಮೂಗಿನ ಹೊರತಾಗಿ ಎದೆನೋವಿನ ಸಮಸ್ಯೆ ಇರಲಿಲ್ಲ. ಏಕಾಏಕಿ ಕಾರ್ಡಿಯಾಕ್ ಅರೆಸ್ಟ್ ಕಾರಣಕ್ಕೆ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದಾರೆ. ವೈದ್ಯರ ನಿರ್ಲಕ್ಷೃದಿಂದಲೇ ಮೃತಪಟ್ಟಿದ್ದಾನೆ. ತಪ್ಪಿತಸ್ಥ ವೈದ್ಯರಿಗೆ ಶಿಕ್ಷೆಯಾಗಬೇಕು. ಅವನ ಸಾವಿಗೆ ನ್ಯಾಯ ಸಿಗಬೇಕು ಎಂದು ಮೃತನ ಅಜ್ಜಿ ರೇಣುಕಮ್ಮ ಮಾಧ್ಯಮಗಳೆದುರು ಹೇಳಿಕೊಂಡರು.
ಮೊದಲು ನಗರದ ಪ್ರತಿಷ್ಠಿತ ಆಸ್ಪತ್ರೆಗೆ ಹೋಗಿ ತೋರಿಸಿದಾಗ ಅಲ್ಲಿನ ವೈದ್ಯ ಡಾ.ನಿತಿನ್ ಸಲಹೆಯಂತೆ ಇಂದು ಅಜ್ಜಿ ಜತೆ ಅಳಿಯ ಸುಜನ್, ನವೋದಯ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆಂದು ಬಂದಿದ್ದ. ಆಪರೇಷನ್ ಥಿಯೇಟರ್‌ನಲ್ಲೇ ಮೃತಪಟ್ಟಿದ್ದಾನೆ. ಅನಸ್ತೇಶಿಯಾ ಅಥವಾ ಓವರ್ ಡೋಸ್ ನೀಡಿದ ಕಾರಣಕ್ಕೆ ಅವನು ಮೃತಪಟ್ಟಿದ್ದು, ಸೂಕ್ತ ತನಿಖೆ ಆಗಬೇಕು ಎಂದು ಸುಜನ್‌ನ ಅತ್ತೆ ರಾಧಾ ಆಗ್ರಹಿಸಿದರು.
ಆದರೆ ವೈದ್ಯರು ಹೇಳುವುದೇ ಬೇರೆ. ‘ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುವ ಮುನ್ನ ಇಸಿಜಿ, ರಕ್ತ ಪರೀಕ್ಷೆ ನಡೆಸಿದ್ದೆವು. ಅನಸ್ತೇಶಿಯಾ ಪ್ರಕ್ರಿಯೆ ನಡೆಸುವ ಮುನ್ನವೇ ಕಾರ್ಡಿಯಾಕ್ ಆರೆಸ್ಟ್‌ನಿಂದ ಆತ ಮೃತನಾಗಿದ್ದಾನೆ. ನಮ್ಮಲ್ಲಿ ಹೆಚ್ಚುವರಿ ಅನಸ್ತೇಶಿಯಾ ಇಂಜೆಕ್ಷನ್ ತರಿಸಿಕೊಳ್ಳಲಾಗುತ್ತಿತ್ತು. ಮೂರು ಪ್ರತ್ಯೇಕ ಇಂಜೆಕ್ಷ್ಷನ್ ನೀಡಲಾಗಿತ್ತು. ಯಾವುದೇ ಅನಸ್ತೇಶಿಯಾ ನೀಡಿರಲಿಲ್ಲ’ ಎಂದು ಡಾ. ನಿತಿನ್ ಪ್ರತಿಕ್ರಿಯಿಸಿದ್ದಾರೆ. ‘ಮೃತನ ಪಾಲಕರಿಗೇ ಆಸ್ಪತ್ರೆಯ ಆಯ್ಕೆ ನೀಡಿದ್ದಾಗಿ’ ವೈದ್ಯರು ಹೇಳಿಕೆ ನೀಡಿದ್ದು ಕೂಡ ಅನುಮಾನಕ್ಕೆ ಆಸ್ಪದವಾಗಿದೆ.
ಸಣ್ಣದೊಂದು ಸರ್ಜರಿಗೆ ಹೋಗಿದ್ದ ಯುವಕನೊಬ್ಬ ಸಾವಿಗೀಡಾಗಿರುವುದು ಖಾಸಗಿ ಕ್ಲಿನಿಕ್‌ಗಳ ಬಗ್ಗೆ ಭಯ ಮೂಡಿಸಿದೆ. ಸದ್ಯ ಯುವಕನ ಮೃತದೇಹವನ್ನು ಚಿಗಟೇರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಂದ ನಂತರವೇ ಖಚಿತ ಕಾರಣ ತಿಳಿದುಬರಬೇಕಿದೆ.