- ಚನ್ನಗಿರಿ ತಾಲೂಕಿನ ಭರತ್ ಎಸ್ಸೆಸ್ಸೆಲ್ಸಿ ಟಾಪರ್
- ಪರೀಕ್ಷೆಯಲ್ಲಿ 625ಕ್ಕೆ 625 ಅಂಕ
ಚನ್ನಗಿರಿ : ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮಿಕಾನ್ವೆಂಟ್ ಶಾಲೆಯ ವಿದ್ಯಾರ್ಥಿ ಜಿ. ಭರತ್, 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಎನಿಸಿದ್ದಾನೆ.
ಕಣಿವೆಬಿಳಚಿ ಎಂಬ ಹಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಭರತ್ ಅವರ ತಂದೆ ಗಿರೀಶ್ ವ್ಯವಸಾಯ ಮಾಡುತ್ತಾರೆ, ಜತೆಗೆ ಕಟ್ಟಡ ನಿರ್ಮಾಣ ಕೆಲಸ ಮಾಡಿಸುತ್ತಾರೆ. ತಾಯಿ ಶಿಲ್ಪಾ ಗೃಹಿಣಿ.
‘ಪರೀಕ್ಷೆಯಲ್ಲಿ 620ಕ್ಕೂ ಹೆಚ್ಚು ಅಂಕ ಬರಬಹುದು ಎಂದು ನಿರೀಕ್ಷಿಸಿದ್ದೆ, ರಾಜ್ಯಕ್ಕೆ ಟಾಪರ್ ಆಗಿರುವುದು ಖುಷಿ ತಂದಿದೆ’ ಎನ್ನುವ ಭರತ್‌ಗೆ ವೈದ್ಯನಾಗಬೇಕು, ಸಮಾಜಕ್ಕೆ ಕೈಲಾದ ಸಹಾಯ ಮಾಡಬೇಕು ಎಂಬ ಕನಸಿದೆ.
ಶಾಲೆಯಲ್ಲಿ ಕಲಿತಿದ್ದನ್ನು ಮನೆಗೆ ಬಂದು ಪುನರ್ ಮನನ ಮಾಡುತ್ತಿದ್ದೆ. ಗಣಿತ, ವಿಜ್ಞಾನ ವಿಷಯಗಳಲ್ಲಿ ಕಠಿಣ ಎನಿಸಿದ ಸಂಗತಿಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೆ. ಹಾರ್ಡ್ ವರ್ಕ್ ಜತೆಗೆ ಸ್ಮಾರ್ಟ್ ವರ್ಕ್ ಮಾಡುತ್ತಿದ್ದೆ. ರಾತ್ರಿ 11 ಗಂಟೆಯ ವರೆಗೆ ಓದಿ, ಬೆಳಗ್ಗೆ ಬೇಗ ಏಳುತ್ತಿದ್ದೆ ಎಂದು ಭರತ್ ತನ್ನ ಓದಿನ ಕ್ರಮವನ್ನು ವಿವರಿಸಿದ.