ಹೋರಿ ಬೆದರಿಸುವ ಹಬ್ಬದ ಸಂಗ್ರಹ ಚಿತ್ರಗಳು. Festival
ದಾವಣಗೆರೆ

ಅವಳಿ ತಾಲೂಕುಗಳಲ್ಲಿ ಮೈನವಿರೇಳಿಸುವ ಹೋರಿ ಬೆದರಿಸುವ ಹಬ್ಬ

ಗ್ರಾಮೀಣ ಸೊಗಡಿಗೆ ಮನಸೋತ ಜನತೆ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗಿ

ಶ್ರೀನಿವಾಸ್ ಟಿ. ಹೊನ್ನಾಳಿ

ಬಲಿಪಾಡ್ಯಮಿಯ ನಂತರ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಲ್ಲಿ ಸುಮಾರು ಎರಡು ತಿಂಗಳ ಕಾಲ ಹೋರಿ ಬೆದರಿಸುವ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದೆ ಜಿಂಕೆಯಂತೆ ಎಗರಿ ಓಡುವ ಹೋರಿಗಳನ್ನು ನೋಡಲು ಹಾವೇರಿ, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಿಂದ ಹೋರಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕೈಗೆ ಸಿಗದ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸುತ್ತದೆ. ಆಗ ಯುವಕರು ಕೇಕೆ ಹಾಕುತ್ತಾ ಜಿಂಕೆ ಮರಿ ಓಡ್ತೈತೆ ನೋಡ್ಲಾ ಮಗ .... ಎಂದು ಹೋರಿಗಳನ್ನು ಕಿಚಾಯಿಸುತ್ತಾರೆ.

ಕೃಷಿ ಕಾಯಕಕ್ಕೆ ಆಧಾರವಾಗಿರುವ ಎತ್ತುಗಳನ್ನು ರೈತರು ಕಾರ್ತಿಕ ಮಾಸದಲ್ಲಿ ದಷ್ಟಪುಷ್ಟವಾಗಿ ಸಾಕಿ, ಹಬ್ಬಕ್ಕೆ ಅಣಿಗೊಳಿಸುತ್ತಾರೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಕತ್ತಿಗೆ, ಹತ್ತೂರು, ಮಾದೇನಹಳ್ಳಿ, ದೊಡ್ಡೇರಹಳ್ಳಿ, ಜೀನಹಳ್ಳಿ, ಗುಡ್ಡೇಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಈ ಪರಂಪರೆ ಚಾಲ್ತಿಯಲ್ಲಿದ್ದು, ಇದನ್ನು ಗ್ರಾಮೀಣ ಭಾಗದ ದಸರಾ ಕ್ರೀಡೆ ಎಂದೇ ಕರೆಯಲಾಗುತ್ತದೆ. ವರ್ಷವಿಡೀ ಹೊಲ-ಗದ್ದೆಗಳಲ್ಲಿ ದುಡಿಯುವ ರೈತರಿಗೆ ಭೂಮಿ ಹುಣ್ಣಿಮೆಯಿಂದ ದೀಪಾವಳಿ ಯವರೆಗೆ ದಣಿವಾರಿಸಿಕೊಳ್ಳುವ ಸುಸಮಯ ಇದು.

ಈ ಹಿಂದೆ ಶಿಕಾರಿಪುರ, ಹಿರೇಕೆರೂರು ಸೇರಿ ವಿವಿಧ ತಾಲೂಕುಗಳಿಂದ ಹೋರಿಗಳನ್ನು ಸ್ಪರ್ಧೆಗೆ ಕರೆತರಲಾಗುತ್ತಿತ್ತು. ಆದರೆ, ಈ ಬಾರಿ ಪೊಲೀಸರು ಬೃಹತ್ ಸ್ಪರ್ಧೆಗಳಿಗೆ ಅವಕಾಶ ನಿರಾಕರಿಸಿರುವುದರಿಂದ, ಆಯಾ ಗ್ರಾಮಗಳ ಸಂಪ್ರದಾಯದ ಆಚರಣೆಗೆ ಮಾತ್ರ ಹಬ್ಬ ಸೀಮಿತವಾಗಿದೆ. ಕೊಬ್ಬಿದ ಹೋರಿಗಳನ್ನು ಹಿಡಿಯಲು ಸಾವಿರಾರು ಯುವಕರು ಎಲ್ಲಿ ಸ್ಪರ್ಧೆ ನಡೆಯುತ್ತಿತ್ತೋ ಆ ಗ್ರಾಮಗಳಲ್ಲಿ ಹಾಜರಿರುತ್ತಿದ್ದರು. ಅತಿ ವೇಗವಾಗಿ ಓಡುವ ಹೋರಿಗಳನ್ನು ಹಿಡಿಯುವ ಪ್ರಯತ್ನದಲ್ಲಿ ಯುವಕರು ಗಾಯಗೊಂಡಿರುವ ಪ್ರಕರಣಗಳೂ ಉಂಟು. ಆದರೂ ಯುವಕರ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ, ಮತ್ತಷ್ಟು ಇಮ್ಮಡಿಯಾಗಿ ಹೋರಿಯನ್ನು ಹಿಡಿದು ಪಳಗಿಸಿ ನಗದು, ಬಂಗಾರ ಹಾಗೂ ಬೆಳ್ಳಿ ಪಡೆದಿರುವ ಯುವಕರು ನಗೆ ಬೀಗಿದ್ದಾರೆ. ಓಡುವ ಹೋರಿಗಳ ರೋಷ - ಆವೇಶವನ್ನು ಅರಿತ ರೈತ ಕುಟುಂಬದ ಯುವಕರು ಅವುಗಳನ್ನು ಹಿಡಿದು ಪಳಗಿಸಿ, ಕೊಬ್ಬರಿ ಮಾಲೆ ಹಾಗೂ ಬಹುಮಾನಗಳನ್ನು ಗೆದ್ದು ಸಂಭ್ರಮಿಸುತ್ತಾರೆ. ದೀಪಾವಳಿ ಹಬ್ಬದಿಂದ ಸತತ ಎರಡು ತಿಂಗಳುಗಳ ಕಾಲ ಎಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತದೋ ಅಂತಹ ಕಡೆಗಳಿಗೆ ಯುವಕರ ದಂಡು ಹಾಜರು, ಹೋರಿಗಳನ್ನು ಸ್ಪರ್ಧೆಗಿಳಿಸಲು ಯುವಕರು ಸಾವಿರಾರು ರೂ. ಖರ್ಚು ಮಾಡುತ್ತಾರೆ. ಇದು ಹೋರಿ ಪ್ರಿಯ ಯುವಕರಿಗೆ ಕ್ರೇಜ್ ಎಂದರೆ ತಪ್ಪಾಗಲಾರದು.

ಗಮನಸೆಳೆವ ಹೆಸರುಗಳು

ಹಬ್ಬದಲ್ಲಿ ಪಾಲ್ಗೊಳ್ಳುವ ಹೋರಿಗಳಿಗೆ ಕೊಬ್ಬರಿ ಮಾಲೆ, ಹಗ್ಗ, ಮಕ್ಕಾಡ, ಚಕ್ಕಡಿ, ರಂಟಿಮಿನಿ, ಜಿಗ್ಗಿಕಣಿ, ಕಾಲ್ಗೆಜ್ಜೆ, ಬಣ್ಣದ ಬಲೂನು ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಭರ್ಜರಿಯಾಗಿ ಸಿಂಗರಿಸಲಾಗುತ್ತದೆ. ಈ ಹೋರಿಗಳಿಗೆ ಹುಕ್ಕುಂ, ಸಲಾಂ ರಣವಿಕ್ರಮ, ಶ್ರೀನಂದಿ, ಹೊನ್ನಾಳಿ ವೈಭವ, ಹೊನ್ನಾಳಿ ಅಜ್ಜಯ್ಯ, ಹೊನ್ನಾಳಿ ಬ್ರಹ್ಮ, ದೇವರಮಗ, ಕತ್ತಿಗೆ ಗೋಳಿ, ರಾಯರಪುತ್ರ, ಶ್ರೀಕೃಷ್ಣ, ರಾಯಣ್ಣ, ದುರ್ಯೋಧನ, ಮೆಜೆಸ್ಟಿಕ್ ಡಾನ್ ಮುಂತಾದ ಆಕರ್ಷಕ ಹೆಸರುಗಳನ್ನು ಇಡಲಾಗಿದೆ.

ಹೋರಿ ಬೆದರಿಸುವುದನ್ನು ನಾವು ಸ್ಪರ್ಧೆ ಎನ್ನದೆ ಹಬ್ಬವಾಗಿ ಆಚರಿಸುತ್ತಿದ್ದೇವೆ. ಇದರಿಂದ ಮೈ ಮನಕ್ಕೆ ಮುದ ನೀಡುತ್ತದೆ. ಹೋರಿಗಳ ಪ್ರದರ್ಶನ ಹಾಗೂ ಸಾಮರ್ಥ್ಯ ತಿಳಿಯುತ್ತದೆ. ವರ್ಷವಿಡೀ ಕೃಷಿ ಕಾಯಕದಲ್ಲಿ ದುಡಿಯುವ ಎತ್ತುಗಳಿಗೆ ಹಾಗೂ ಕೃಷಿ ಪರಿಕರಗಳಿಗೆ ವಿಶೇಷ ಗೌರವ ಸೂಚಿಸುವುದೇ ಈ ಹಬ್ಬದ ಉದ್ದೇಶ.
ಬಿ. ಸಿದ್ದೇಶ್ ಕತ್ತಿಗೆ ಗ್ರಾಮ