ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವನ್ನು ಸಚಿವ ಕೆ.ಎಸ್. ಬಸವಂತಪ್ಪ ಉದ್ಘಾಟಿಸಿದರು. ಮೈತ್ರಮ್ಮ ಬಸವರಾಜಪ್ಪ, ಶಿವಮ್ಮ, ಡಾ.ಎಲ್.ಎಂ. ತ್ರಿವೇಣಿ, ಜಯಪ್ರಕಾಶ್ ಇತರರು ಇದ್ದರು. Library
ದಾವಣಗೆರೆ

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅಧ್ಯಯನ ಕೇಂದ್ರ ಅವಶ್ಯಕ

ಸಚಿವ ಕೆ.ಎಸ್. ಬಸವಂತಪ್ಪ ಅನಿಸಿಕೆ

ಮಾಯಕೊಂಡ: ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅಧ್ಯಯನ ಕೇಂದ್ರಗಳು ಅವಶ್ಯವಾಗಿದೆ ಎಂದು ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು. ಗ್ರಾಮದ ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಅಧ್ಯಯನ ಕೇಂದ್ರದಿಂದಾಗಿ ಗ್ರಾಮೀಣ ಭಾಗದ ಪದವೀಧರರಿಗೆ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ದೂರದ ನಗರಗಳಿಗೆ ಹೋಗಿ ಶುಲ್ಕ ಕಟ್ಟಿ ಅಧ್ಯಯನ ಮಾಡುವುದಕ್ಕಿಂತ ಈ ಅಧ್ಯಯನ ಕೇಂದ್ರ ಪ್ರಾರಂಭ ಮಾಡಿರುವುದು ಸಹಕಾರಿ ಎಂದರು.

ಕಾಲೇಜಿನಲ್ಲಿ ಅಧ್ಯಯನ ಪೂರ್ಣಗೋಲಿಸಿದ ವಿದ್ಯಾರ್ಥಿಗಳು ತಮ್ಮದೇ ಸಂಘ ರಚಿಸಿಕೊಂಡು ಕಾಲೇಜಿನ ಅಭಿವೃದ್ಧಿಗೆ ಹಾಗೂ ಯುವ ಸಮುದಾಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಸಹಕಾರ ನೀಡಬೇಕೆಂದು ಕಿವಿಮಾತು ಹೇಳಿದರು. ಕನ್ನಡ ಯುವಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಜಿ. ಜಗದೀಶ್ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಕುರಿತು ವಿಶೇಷ ಬೋಧನೆ ಕೊಡಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಅಧ್ಯಯನ ಕೇಂದ್ರ ತೆರೆಯಲಾಗಿದೆ ಎಂದರು.

ಕಳೆದ ಹತ್ತು ಹನ್ನೆರಡು ವರ್ಷದ ಹಿಂದೆ ಮಾಯಕೊಂಡದಲ್ಲಿ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ ಮಾಡಿಸಲಾಗಿತ್ತು. ಒಂದೇ ಗ್ರಾಮದಲ್ಲಿ ಎಸ್‌ಡಿಎ, ಎಫ್‌ಡಿಎ, ಪಿಡಿಒ, ಪೊಲೀಸ್ ಪೆದೆ ಹಾಗೂ ಇನ್ನಿತರ ಹುದ್ದೆಗಳಿಗೆ 50ಕ್ಕೂ ಹೆಚ್ಚು ಜನ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಮಾಯಕೊಂಡ ಗಮನ ಸೆಳೆದಿತ್ತು. ಈಗಲೂ ಅದೇ ಪ್ರಯತ್ನ ಪ್ರಾರಂಭಿಸಲಾಗಿದೆ ಎಂದರು.

ಎಂ.ಜಿ. ಗುರುನಾಥ್, ಎನ್.ಎಂ. ಮಂಜುನಾಥ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮೈತ್ರಮ್ಮ ಬಸವರಾಜಪ್ಪ, ಉಪಾಧ್ಯಕ್ಷೆ ಶಿವಮ್ಮ, ಪ್ರಾಚಾರ್ಯೆ ಡಾ. ಎಲ್.ಎಂ. ತ್ರಿವೇಣಿ, ಕನ್ನಡ ಯುವಶಕ್ತಿ ಕೇಂದ್ರದ ಅಧ್ಯಕ್ಷ ಜಯಪ್ರಕಾಶ್, ಗ್ರಾಪಂ ಸದಸ್ಯರಾದ ಜಿ.ಎಸ್. ಪುಷ್ಪ ಉಮಾಶಂಕರ್ ಇತರರು ಇದ್ದರು.